
ಜೆಡಿಎಸ್ ಶಾಸಕನಿಂದ ಧರಣಿ; ಬರಪೀಡಿತ ತಾಲೂಕು ಪಟ್ಟಿಗೆ ಗುರುಮಿಠಕಲ್, ಯಾದಗಿರಿ ಸೇರ್ಪಡೆಗೆ ಆಗ್ರಹ
ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಬರ ಪಟ್ಟಿಯಲ್ಲಿ ಪ್ರತಿಪಕ್ಷಗಳ ಕೇವಲ 17 ಕ್ಷೇತ್ರಗಳನ್ನಷ್ಟೇ ಸೇರಿಸಲಾಗಿದೆ ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಹೇಳಿದ್ದಾರೆ.
ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಗುರುಮಿಠಕಲ್ ಹಾಗೂ ಯಾದಗಿರಿ ಕ್ಷೇತ್ರ ಕೈಬಿಟ್ಟಿರುವುದನ್ನು ವಿರೋಧಿಸಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ಸೋಮವಾರ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಏಕಾಂಗಿಯಾಗಿ ಧರಣಿ ನಡೆಸಿದ್ದಾರೆ. ಗುರುಮಿಠಕಲ್ ಹಾಗೂ ಯಾದಗಿರಿ ಕ್ಷೇತ್ರಗಳು ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ ಸರ್ಕಾರ ನಿರ್ಲಕ್ಷಿಸಿದೆ ಎಂದು ದೂರಿದ ಅವರು, ಕೂಡಲೇ ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕ ವಾಗ್ದಾಳಿ
ಗುರುಮಿಠಕಲ್ ಕ್ಷೇತ್ರ ತೀವ್ರ ಮಳೆ ಕೊರತೆ ಅನುಭವಿಸಿದೆ. ಹೀಗಿದ್ದರೂ ಸರ್ಕಾರ ಯಾವುದೇ ಪಟ್ಟಿಯಲ್ಲೂ ನನ್ನ ಕ್ಷೇತ್ರವನ್ನು ಬರಪೀಡಿತ ಎಂದು ಘೋಷಿಸಿಲ್ಲ. ಶರಣಗೌಡನ ಮೇಲೆ ಸರ್ಕಾರದಲ್ಲಿರುವವರಿಗೆ ಯಾವುದೋ ಜ್ವರ ಬಂದಿದೆ. ಅದಕ್ಕಾಗಿ ಎರಡು ಪಟ್ಟಿಗಳಲ್ಲೂ ನನ್ನ ಕ್ಷೇತ್ರವನ್ನು ಕೈಬಿಡಲಾಗಿದೆ" ಎಂದು ಆಕ್ರೋಶ ಹೊರಹಾಕಿದ್ಧಾರೆ.
"ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಬರ ಪಟ್ಟಿಯಲ್ಲಿ ಪ್ರತಿಪಕ್ಷಗಳ ಕೇವಲ 17 ಕ್ಷೇತ್ರಗಳನ್ನು ಮಾತ್ರ ಸೇರಿಸಲಾಗಿದೆ. ಹಾಗಾದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಮಾತ್ರವೇ ಬರ ಬಂದಿದೆಯೇ?, ವಿರೋಧ ಪಕ್ಷದ ಕ್ಷೇತ್ರಗಳಿಗೆ ಬರ ಬರುವುದಿಲ್ಲವೇ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
"ಸರ್ಕಾರ ಬಿಡುಗಡೆ ಮಾಡಲಿರುವ 3ನೇ ಬರ ಪಟ್ಟಿಯಲ್ಲಿ ಗುರುಮಿಠಕಲ್ ಹಾಗೂ ಯಾದಗಿರಿ ಕ್ಷೇತ್ರವನ್ನು ಸೇರಿಸುವ ಭರವಸೆ ಇದೆ. ಒಂದು ವೇಳೆ 3ನೇ ಪಟ್ಟಿಯಲ್ಲೂ ಕೈಬಿಟ್ಟರೆ ಉದ್ದೇಶಪೂರ್ವಕವಾಗಿಯೇ ನನ್ನನ್ನು ಮತ್ತು ನನ್ನ ಕ್ಷೇತ್ರದ ಜನರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲಾಗಿದೆ ಎಂಬುದು ಅರ್ಥವಾಗಲಿದೆ. ಇದರ ವಿರುದ್ಧ ಉಗ್ರ ಹೋರಾಟ ರೂಪಿಸಲಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಕೊರತೆಯಿಂದ ಕೃಷಿ ಕ್ಷೇತ್ರ ಸಂಪೂರ್ಣ ಕಂಗೆಟ್ಟಿದೆ. ಗುರುಮಠಕಲ್ ಮತ್ತು ಯಾದಗಿರಿ ತಾಲೂಕುಗಳಲ್ಲಿ ಶೇ. 50ಕ್ಕೂ ಹೆಚ್ಚು ಮಳೆ ಅಭಾವ ದಾಖಲಾಗಿದೆ. ಸರ್ಕಾರದ ಮೊದಲ ಮತ್ತು ಎರಡನೇ ಬರ ಪಟ್ಟಿಯಲ್ಲಿ ಈ ತಾಲೂಕುಗಳನ್ನು ಸೇರಿಸದಿರುವುದು ಸ್ಥಳೀಯ ರೈತರು ಹಾಗೂ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.

