ಸಿಎಂ ವಿರುದ್ಧ ಶಾಸಕ ಶರಣಗೌಡ ಕಂದಕೂರ್  ಪ್ರಾದೇಶಿಕ ತಾರತಮ್ಯ ಆಕ್ರೋಶ
x

ಸಿಎಂ ವಿರುದ್ಧ ಶಾಸಕ ಶರಣಗೌಡ ಕಂದಕೂರ್ ಪ್ರಾದೇಶಿಕ ತಾರತಮ್ಯ ಆಕ್ರೋಶ

ಮೈಸೂರಿನ ಸಂತ್ರಸ್ತರಿಗೆ ನೀಡಿದಂತೆ, ಯಾದಗಿರಿ ಜಿಲ್ಲೆಯ ಮೃತರ ಕುಟುಂಬಗಳಿಗೂ ಸಹ ತಲಾ 5 ಲಕ್ಷ ರೂ. ಪರಿಹಾರ ಧನವನ್ನು ಘೋಷಿಸಬೇಕು. ತಾರತಮ್ಯ ಬಿಟ್ಟು, ಸಮಾನವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಲಾಗಿದೆ.


Click the Play button to hear this message in audio format

ಇತ್ತೀಚೆಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಸಂಭವಿಸಿದ ಎರಡು ಭೀಕರ ದುರಂತಗಳ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯತನ ಹಾಗೂ ಮೈಸೂರು ಜಿಲ್ಲೆಯ ಪ್ರಕರಣದಲ್ಲಿ ತೋರಿದ ಆಸಕ್ತಿಯನ್ನು ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾದೇಶಿಕ ತಾರತಮ್ಯ ತೋರಿರುವುದು ಸ್ಪಷ್ಟವಾಗಿದೆ ಎಂದು ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ತಾರತಮ್ಯ ತೋರಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಬಿಸಿಲಿನ ತಾಪ ತಾಳಲಾರದೆ ಕೃಷಿ ಹೊಂಡದಲ್ಲಿ ಈಜಲು ಹೋದ ಒಂದೇ ಕುಟುಂಬದ ನಾಲ್ವರು ದಲಿತ (ಪರಿಶಿಷ್ಟ ಪಂಗಡ) ಮಕ್ಕಳು ಮೃತಪಟ್ಟಿದ್ದಾರೆ. ನಾಲ್ವರು ಮಕ್ಕಳನ್ನು ಕಳೆದುಕೊಂಡ ಆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಹೋದ ಮಕ್ಕಳು ಸಾವಿನ ಮಡಿಲು ಸೇರಿದ್ದು ಅತ್ಯಂತ ನೋವಿನ ಸಂಗತಿ. ಇದಲ್ಲದೇ, ಇದೇ ತಾಲೂಕಿನ ಗೋಪಾಲಸ್ವಾಮಿ ದೇವಸ್ಥಾನದ ದರ್ಶನಕ್ಕೆ ತೆರಳಿದ್ದ ಸಿರವಾರ ಗ್ರಾಮದ ಒಂದೇ ಕುಟುಂಬದ ಒಂಬತ್ತು ಸದಸ್ಯರು ರಸ್ತೆ ಅಪಘಾತದಲ್ಲಿ (ಬಸ್ ಮತ್ತು ಕಾರು ನಡುವಿನ ಡಿಕ್ಕಿ) ಸಜೀವ ದಹನಗೊಂಡಿದ್ದಾರೆ. ಇದೊಂದು ಭೀಕರ ದುರಂತವಾಗಿದ್ದು, ಇಡೀ ಗ್ರಾಮವೇ ಕಂಬನಿ ಮಿಡಿದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಕ್ಕಳು ಸಾವನ್ನಪ್ಪಿ 20ದಿನಕ್ಕೂ ಹೆಚ್ಚು ಮತ್ತು ಬಸ್‌ ದುರಂತ ಸಂಭವಿಸಿ ಐದು ದಿನಗಳು ಕಳೆದರೂ ಸರ್ಕಾರವಾಗಲಿ, ಮುಖ್ಯಮಂತ್ರಿಗಳಾಗಲಿ ಈ ಕುಟುಂಬಗಳಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಕನಿಷ್ಠ ಸಾಂತ್ವನವನ್ನೂ ಸಹ ಹೇಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ರಾಜ್ಯದ ಮುಖ್ಯಮಂತ್ರಿಯಾದವರು ಇಡೀ ರಾಜ್ಯಕ್ಕೆ 'ನಾಡದೊರೆ'ಯಾಗಿರುತ್ತಾರೆ. ಆದರೆ, ಯಾದಗಿರಿ ಜಿಲ್ಲೆಯ ಘಟನೆಗಳನ್ನು ಸರ್ಕಾರ ಸಂಪೂರ್ಣವಾಗಿ ಮರೆತಂತಿದೆ. ಕುಟುಂಬದ ಸಾವಿಗೆ ಸ್ಪಂದಿಸದಿರುವುದು ಆಡಳಿತ ಯಂತ್ರದ ಜಡತ್ವವನ್ನು ತೋರಿಸುತ್ತದೆ. ಅದರಲ್ಲೂ ಬಡ ದಲಿತ ಕುಟುಂಬದ ಮಕ್ಕಳು ಮೃತಪಟ್ಟಾಗ ಸರ್ಕಾರ ತೋರುವ ಇಂತಹ ನಿರಾಸಕ್ತಿ ಸಾಮಾಜಿಕ ನ್ಯಾಯದ ಪ್ರಶ್ನೆ ಸೃಷ್ಟಿಯಾಗುತ್ತದೆ ಎಂದಿದ್ದಾರೆ.

ಪ್ರಾದೇಶಿಕ ತಾರತಮ್ಯದ ಆರೋಪ

ಮುಖ್ಯಮಂತ್ರಿಗಳು ಪ್ರಾದೇಶಿಕ ತಾರತಮ್ಯ ತೋರುತ್ತಿದ್ದಾರೆ ಎಂದು ಪತ್ರದ ಮೂಲಕ ಆರೋಪಿಸಿದ್ದಾರೆ. ಯಾದಗಿರಿ ಜಿಲ್ಲೆಯ ಘಟನೆಗಳ ನಂತರ ಮುಖ್ಯಮಂತ್ರಿಗಳ ಸ್ವಂತ ಜಿಲ್ಲೆಯಾದ ಮೈಸೂರಿನಲ್ಲಿ ಬಿಸಿಲಿನ ತಾಪಕ್ಕೆ ಕೆರೆಯಲ್ಲಿ ಈಜಲು ಹೋಗಿ ಆರು ಜನ ಮೃತಪಟ್ಟಿದ್ದಾರೆ. ಈ ಘಟನೆ ಸಂಭವಿಸಿದ ತಕ್ಷಣವೇ ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣದ ಮೂಲಕ ಸಾಂತ್ವನ ತಿಳಿಸಿದ್ದಾರೆ. ಮಾತ್ರವಲ್ಲದೆ, ತಲಾ ಐದು ಲಕ್ಷ ರೂ.ಗಳ ಪರಿಹಾರವನ್ನೂ ಘೋಷಿಸಿದ್ದಾರೆ. ಮೈಸೂರಿನಲ್ಲಿ ಮೃತಪಟ್ಟವರು ಮನುಷ್ಯರು, ಯಾದಗಿರಿಯಲ್ಲಿ ಮೃತಪಟ್ಟವರು ಮನುಷ್ಯರಲ್ಲವೇ? ಮೈಸೂರಿನ ಪ್ರಕರಣದಲ್ಲಿ ತೋರಿದ ವೇಗ ಯಾದಗಿರಿಯ ಪ್ರಕರಣದಲ್ಲಿ ಯಾಕಿಲ್ಲ? ಇದು ಕೇವಲ ಮೈಸೂರಿಗೆ ಮಾತ್ರ ಮುಖ್ಯಮಂತ್ರಿಗಳೋ ಅಥವಾ ಇಡೀ ರಾಜ್ಯಕ್ಕೋ ಎಂಬ ಗಂಭೀರ ಪ್ರಶ್ನೆಯನ್ನು ಉದ್ಭವಿಸಿದೆ. ಕಲ್ಯಾಣ ಕರ್ನಾಟಕದ ಭಾಗವಾದ ಯಾದಗಿರಿ ಜಿಲ್ಲೆಯನ್ನು ಸರ್ಕಾರ ಎರಡನೇ ದರ್ಜೆಯಾಗಿ ಕಾಣುತ್ತಿದೆಯೇ ಎಂಬ ಅನುಮಾನ ಜನರಲ್ಲಿ ಮೂಡುವುದು ಸಹಜ ಎಂದು ಕಿಡಿಕಾರಿದ್ದಾರೆ.

ಶಾಸಕರ ಬೇಡಿಕೆಗಳು

ಶಾಸಕ ಶರಣಗೌಡ ಕಂದಕೂರ್ ಅವರು ತಮ್ಮ ಪತ್ರದ ಮೂಲಕ ಸುರಪುರ ತಾಲೂಕಿನ ನಗನೂರು ಗ್ರಾಮದ ಸಂತ್ರಸ್ತ ಕುಟುಂಬಗಳಿಗೆ ಮತ್ತು ಸಿರವಾರ ಗ್ರಾಮದ ಮೃತರ ಕುಟುಂಬಗಳಿಗೆ ತಕ್ಷಣವೇ ಸಾಂತ್ವನ ಹೇಳಬೇಕು. ಮೈಸೂರಿನ ಸಂತ್ರಸ್ತರಿಗೆ ನೀಡಿದಂತೆ, ಯಾದಗಿರಿ ಜಿಲ್ಲೆಯ ಮೃತರ ಕುಟುಂಬಗಳಿಗೂ ಸಹ ತಲಾ ೫ ಲಕ್ಷ ರೂ. ಪರಿಹಾರ ಧನವನ್ನು ಘೋಷಿಸಬೇಕು. ಕಲ್ಯಾಣ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ತಾರತಮ್ಯವನ್ನು ಬಿಟ್ಟು, ಸಮಾನವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.

Read More
Next Story