
ನೈಸ್ ಹಗರಣ| ರಾಜ್ಯಪಾಲರಿಗೆ ಜೆಡಿಎಸ್ ನಿಯೋಗ ದೂರು; ಸರ್ಕಾರಕ್ಕೆ ಎರಡು ವಾರ ಗಡುವು
ಸರ್ಕಾರ ನೈಸ್ ಯೋಜನೆ ವಶಪಡಿಸಿಕೊಳ್ಳದೇ ಹೋದರೆ ಜೆಡಿಎಸ್ ಉಗ್ರ ಹೋರಾಟ ಮಾಡಲಿದೆ. ಗುರುವಾರ, ಶುಕ್ರವಾರ ವೆಬ್ ಸೈಟ್ ರಿಲೀಸ್ ಮಾಡುತ್ತೇವೆ. ಅದರಲ್ಲಿ ಎಲ್ಲಾ ದಾಖಲಾತಿ ಜನರಿಗೆ ಸಿಗುವಂತೆ ಮಾಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಯಲ್ಲಿ ನಡೆಸಿರುವ ಅಕ್ರಮ ಮತ್ತು ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ನಿಯೋಗ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಹೈಕೋರ್ಟ್ ತೀರ್ಪಿನ ಪ್ರತಿ ಸಮೇತ 5 ಪುಟಗಳ ಮನವಿ ಪತ್ರ ಸಲ್ಲಿಸಿದರು.
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನಿಖಿಲ್
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ನೈಸ್ ಯೋಜನೆ ಅಕ್ರಮದ ಬಗ್ಗೆ ಸರ್ಕಾರಕ್ಕೆ ನಾವು ಎರಡು ವಾರ ಗಡುವು ನೀಡುತ್ತೇವೆ. ಸರ್ಕಾರ ನೈಸ್ ಯೋಜನೆ ವಶಪಡಿಸಿಕೊಳ್ಳದೇ ಹೋದರೆ ಜೆಡಿಎಸ್ ಉಗ್ರ ಹೋರಾಟ ಮಾಡಲಿದೆ. ಗುರುವಾರ, ಶುಕ್ರವಾರ ವೆಬ್ ಸೈಟ್ ರಿಲೀಸ್ ಮಾಡುತ್ತೇವೆ. ಅದರಲ್ಲಿ ಎಲ್ಲಾ ದಾಖಲಾತಿ ಜನರಿಗೆ ಸಿಗುವಂತೆ ಮಾಡುತ್ತೇವೆ ಎಂದು ಹೇಳಿದರು.
ನೈಸ್ ಬಗ್ಗೆ ಹೈಕೋರ್ಟ್ ಐತಿಹಾಸಿಕ ತೀರ್ಪು ಕೊಟ್ಟಿದೆ. ನೈಸ್ ಯೋಜನೆ ದೊಡ್ಡ ಹಗರಣ ಅಂತ ಕೋರ್ಟ್ ಹೇಳಿದೆ. NICE is not a NICE ಎಂಬುದು ಸಾಬೀತಾಗಿದೆ. ನೈಸ್ ಯೋಜನೆ ಅಗ್ರಿಮೆಂಟ್ ಪ್ರಕಾರ ಆಗಿಲ್ಲ. ರೈತರ ಜಮೀನು ಸ್ವಾಧೀನ ಮಾಡಿಕೊಂಡು ರೈತರಿಗೆ ಪರಿಹಾರ ಕೊಟ್ಟಿಲ್ಲ. ಭೂಸ್ವಾಧೀನ ಅಂತಿಮ ಅಧಿಸೂಚನೆ ಕೋರ್ಟ್ ರದ್ದು ಮಾಡಿದೆ. ನೈಸ್ ನಲ್ಲಿ ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘನೆ ಆಗಿದೆ. ದೇವೇಗೌಡರು MOU ಮಾಡಿದ್ದು ವಿಷನ್ ಇಟ್ಟುಕೊಂಡು. ಆದರೆ MOU ಉಲ್ಲಂಘನೆ ಆಗಿದೆ " ಎಂದು ಆರೋಪಿಸಿದರು.
ಸರ್ಕಾರ ಯಾಕೆ ಮೌನವಾಗಿದೆ?, ಸರ್ಕಾರ ಜನರ ಪರ, ರೈತರ ಪರ ಇದೆಯಾ? ಕೊಟ್ಯಾಂತರ ರೂಪಾಯಿ ಟೋಲ್ ಸಂಗ್ರಹ ಮಾಡ್ತಾ ಇದ್ದಾರೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ನೈಸ್ ಯೋಜನೆ ಸರ್ಕಾರ ಟೇಕ್ ಓವರ್ ಮಾಡಬೇಕು ಅಂತ ಕೋರ್ಟ್ ಹೇಳಿದೆ. ಆದರೂ, ಸರ್ಕಾರ ಮೌನಕ್ಕೆ ಶರಣಾಗಿದೆ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ " ಎಂದು ಹೇಳಿದರು.
ಬಿಡದಿ ಕೇಸ್: ನ್ಯಾಯ ಸಿಗುವ ವಿಶ್ವಾಸ
ಬಿಡದಿ ಕೇಸ್ ವಿಚಾರದಲ್ಲಿ 81 ಜನ ರೈತರು ಅರ್ಜಿ ಹಾಕಿದ್ದರು. ಒಂದು ಇಟ್ಟಿಗೆ ಕೂಡ ಅಲುಗಾಡಬಾರದು ಎಂದು ಕೋರ್ಟ್ ಹೇಳಿದೆ. ಸರ್ಕಾರ ಅಬ್ಜೆಕ್ಷನ್ ಸಲ್ಲಿಕೆ ಮಾಡಿಲ್ಲ. ಸರ್ಕಾರ ಮಾಡಿರುವ ಭೂಸ್ವಾಧೀನದಲ್ಲಿ ಯಾವುದೇ ನ್ಯಾಯ ಇಲ್ಲ. ಹೈಕೋರ್ಟ್ ನಲ್ಲಿ ರೈತರಿಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಬಿಜೆಪಿ ಹೋರಾಟಕ್ಕೆ ನಮ್ಮ ಬೆಂಬಲ
ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸದನದ ಒಳಗೆ ಹಾಗೂ ಹೊರಗೆ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ನಾಡಿನ ಯಾವುದೇ ವಿಷಯ ಬಂದಾಗ ಬಿಜೆಪಿ ಜೊತೆ ನಾವು ಒಟ್ಟಾಗಿ ಗೋಗುತ್ತೇವೆ. ಸಿದ್ದರಾಮಯ್ಯ ಅವರೇ ಅಕ್ರಮ ಆಗಿರೋದು ಒಪ್ಪಿಕೊಂಡಿದ್ದಾರೆ. ಇಷ್ಟಾದ್ರೂ ಆರೋಪವಿರುವ ವ್ಯಕ್ತಿಯನ್ನ ಯಾಕೆ ಸಚಿವನಾಗಿ ತಗೊಂಡರು ಎಂದು ಪ್ರಶ್ನಿಸಿದರು.
ಚೆಲುವರಾಯಸ್ವಾಮಿಗೆ ನಿಖಿಲ್ ತಿರುಗೇಟು
"ಕುಮಾರಸ್ವಾಮಿ ಅವರು ಯಾವುದೇ ದಾಖಲೆಗಳಿಲ್ಲದೇ ಮಾತನಾಡುವುದಿಲ್ಲ. ಹಿಟ್ ಅಂಡ್ ರನ್ ಬಗ್ಗೆ ಹೊಸದಾಗಿ ಆಗಿರುವ ಸಚಿವರು ಮಾತಾಡ್ತಾರೆ. ಬಿಡದಿ ಪ್ರಾಜೆಕ್ಟ್ ನಲ್ಲಿ ಹಿಟ್ ಅಂಡ್ ರನ್ ಮಾಡಿದ್ದು ಯಾರು?, ಕುಮಾರಸ್ವಾಮಿ ಅವರು ಸಿಎಂ ಅವರನ್ನ ಬಿಡದಿ ವಿಚಾರದಲ್ಲಿ ಚರ್ಚೆಗೆ ಕರೆದಾಗ ಯಾಕೆ ಬರಲಿಲ್ಲ” ಎಂದು ಪ್ರಶ್ನಿಸಿದರು.
ಜೆಡಿಎಸ್ ಬೇಡಿಕೆಗಳೇನು?
ಅನಧಿಕೃತ ಟೋಲ್ ಸಂಗ್ರಹ ತಕ್ಷಣ ನಿಲ್ಲಿಸಬೇಕು.
ಹೆಚ್ಚುವರಿ 554 ಎಕರೆ ಭೂಮಿಯನ್ನು ಕೂಡಲೇ NICE ನಿಂದ ವಾಪಸ್ ಪಡೆಯಬೇಕು.
SIT ಮತ್ತು Forensic Audit ನಡೆಸಬೇಕು.
ಯೋಜನೆಯನ್ನು ಸರ್ಕಾರವೇ ವಶಕ್ಕೆ ಪಡೆಯಲು ವಿಶೇಷ ಕಾನೂನು ಜಾರಿ ಮಾಡಬೇಕು.
ರೈತರಿಗೆ ಪರಿಹಾರ ಮತ್ತು ಭೂಮಿ ವಾಪಸ್.
ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ.
ಕೆರೆ-ಕಟ್ಟೆಗಳ ಭೂಮಿಯನ್ನು ಮರಳಿ ಸಾರ್ವಜನಿಕ ಸ್ವಾಮ್ಯಕ್ಕೆ ಪಡೆಯಬೇಕು.

