
'ನಿನ್ನ ಪಾಪದ ಫಲವೇ ಈ ಕಣ್ಣೀರು': ನಾಗೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ
"ನಾಗೇಂದ್ರ ಕಣ್ಣೀರು ಹಾಕುತ್ತಾ ತಾವು ಮಾಡಿದ ಹಗರಣಗಳನ್ನು ಮುಚ್ಚಿ ಹಾಕಲು ನಾಟಕವಾಡುತ್ತಿದ್ದಾರೆ. ಶಂಭೂಕನ ಕಥೆ ಬಗ್ಗೆ ಗೊತ್ತಿಲ್ಲದವನು ನೀನು" ಎಂದು ಜನಾರ್ದನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸುಳಿಯಲ್ಲಿ ಸಿಲುಕಿರುವ ಸಚಿವ ಬಿ. ನಾಗೇಂದ್ರ ವಿರುದ್ಧ ಮಾಜಿ ಸಚಿವ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗೇಂದ್ರ ಅವರ ರಾಜಕೀಯ ಹಿನ್ನೆಲೆ, ಅವರ ಆಡಳಿತಾವಧಿಯ ಭ್ರಷ್ಟಾಚಾರ ಮತ್ತು ಇತ್ತೀಚಿನ ಕಣ್ಣೀರಿನ ರಾಜಕೀಯವನ್ನು ತರಾಟೆಗೆ ತೆಗೆದುಕೊಂಡಿರುವ ರೆಡ್ಡಿ, "ನಿನ್ನ ಕರ್ಮದ ಫಲವನ್ನೇ ನೀನು ಅನುಭವಿಸುತ್ತಿದ್ದೀಯ" ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗೇಂದ್ರ ಅವರನ್ನು 'ಸ್ವಯಂ ಘೋಷಿತ ಕಲಿಯುಗದ ಶಂಭುಕ' ಎಂದು ಟೀಕಿಸಿದ್ದಾರೆ. "ನಾಗೇಂದ್ರ ಕಣ್ಣೀರು ಹಾಕುತ್ತಾ ತಾವು ಮಾಡಿದ ಹಗರಣಗಳನ್ನು ಮುಚ್ಚಿ ಹಾಕಲು ನಾಟಕವಾಡುತ್ತಿದ್ದಾರೆ. ಶಂಭೂಕನ ಕಥೆ ಬಗ್ಗೆ ಗೊತ್ತಿಲ್ಲದವನು ನೀನು. ನೀನು ಶಾಸಕನಾಗಿದ್ದು, ರಾಜಕೀಯ ಜನ್ಮ ಪಡೆದಿದ್ದು ಬಿಜೆಪಿಯಿಂದ ಮತ್ತು ನನ್ನಿಂದ ಎಂಬುವುದನ್ನು ಮರೆಯಬೇಡ" ಎಂದು ವಾಗ್ದಾಳಿ ನಡೆಸಿದರು. "ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಖ್ಯಾತಿಯ ನಾಸೀರ್ ಹುಸೇನ್ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮನುವಾದಿ, ಬಿಜೆಪಿ ಬಗ್ಗೆ ಅಸಂಬದ್ಧವಾಗಿ ಮಾತನಾಡುವ ನಿನಗೆ ನಾಚಿಕೆಯಾಗಬೇಕು. ವಾಲ್ಮೀಕಿ ಮಹರ್ಷಿಯ ಹೆಸರಿನ ನಿಗಮದ ಹಣವನ್ನು ಲೂಟಿ ಮಾಡಿದ ನಿನಗೆ ಅವರ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ" ಎಂದು ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಹಗರಣದ ಕರಾಳ ಮುಖ
ನಾಗೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಜನಾರ್ದನ ರೆಡ್ಡಿ, "ನಿಗಮದ ಖಾತೆಯಿಂದ ನೇಹ ಕಲಾಮನ್ಸೂರಿ, ಜಹಾದ್ ಕಲಾಮನ್ಸೂರಿ ಮತ್ತು ಕಲಾಂ ಷಕುರ್ ಮನ್ಸೂರಿ ಎಂಬುವವರ ಖಾತೆಗೆ 6.50 ಕೋಟಿ ರೂ. ಹಣ ವರ್ಗಾವಣೆಯಾಗಿದೆ. ಇದು ಕೇವಲ ಆರಂಭವಷ್ಟೇ. ಇವರು ನಾಗೇಂದ್ರ ಅವರಿಗೆ ಅತ್ಯಂತ ಆಪ್ತರು ಎಂಬುದು ಸಿಬಿಐ ವರದಿಯಲ್ಲಿಯೂ ಉಲ್ಲೇಖವಾಗಿದೆ. ಈ ಪ್ರಕರಣದಲ್ಲಿ ಒಟ್ಟು 24 ಮಂದಿ ಭಾಗಿಯಾಗಿದ್ದು, 800ಕ್ಕೂ ಹೆಚ್ಚು ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದೆ. ಈ ಹಣದಿಂದ ದುಬಾರಿ ಕಾರುಗಳು ಮತ್ತು ಚಿನ್ನಾಭರಣಗಳನ್ನು ಖರೀದಿಸಲಾಗಿದೆ" ಎಂದು ಆರೋಪಿಸಿದರು. ಚಂದ್ರಶೇಖರ್ ಎಂಬ ಅಧಿಕಾರಿಯದ್ದು ಆತ್ಮಹತ್ಯೆಯಲ್ಲ, ಅದು ಹತ್ಯೆ. ಅದಕ್ಕೆ ಕಾರಣ ನಾಗೇಂದ್ರ ಮತ್ತು ಕಾಂಗ್ರೆಸ್ ಪಕ್ಷ. ತಪ್ಪೇ ಮಾಡಿಲ್ಲ ಎಂದಿದ್ದರೆ ನಾಗೇಂದ್ರ ಯಾಕೆ ರಾಜೀನಾಮೆ ನೀಡಿದರು? ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಯಾಕೆ ನಾಗೇಂದ್ರ ಅವರನ್ನು ಸಮರ್ಥಿಸಿಕೊಳ್ಳಲಿಲ್ಲ? ಎಂದು ಪ್ರಶ್ನಿಸಿದರು.
ಚುನಾವಣಾ ರಾಜಕೀಯ, ರಾಜೀನಾಮೆ ಸವಾಲು
ನಾಗೇಂದ್ರ ಅವರು ಶ್ರೀರಾಮುಲು ಅವರನ್ನು 'ರಿಜೆಕ್ಟೆಡ್ ಪೀಸ್' ಎಂದು ಕರೆದಿದ್ದಕ್ಕೆ ತಿರುಗೇಟು ನೀಡಿದ ಜನಾರ್ದನ ರೆಡ್ಡಿ, "ಮಲ್ಲಿಕಾರ್ಜುನ ಖರ್ಗೆಯವರು ಕಲಬುರಗಿಯಲ್ಲಿ ಸೋಲಲಿಲ್ಲವೇ? ಅವರನ್ನು ಏನು ಕರೆಯುತ್ತೀರಿ? ಗೆಲುವು ಸೋಲು ರಾಜಕೀಯದಲ್ಲಿ ಸಹಜ. ನಾಗೇಂದ್ರ ಅವರಿಗೆ ತಾಕತ್ತು ಇದ್ದರೆ ಅಖಂಡ ಬಳ್ಳಾರಿ ಜಿಲ್ಲೆಯ 10 ಜನ ಶಾಸಕರು ಮತ್ತು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮರುಚುನಾವಣೆ ಎದುರಿಸಲಿ. ನಾವು ಬಿಜೆಪಿಯಿಂದ ಹತ್ತೂ ಕ್ಷೇತ್ರಗಳಲ್ಲಿ ಗೆದ್ದು ತೋರಿಸುತ್ತೇವೆ" ಎಂದು ಬಹಿರಂಗ ಸವಾಲು ಹಾಕಿದರು.
ಸಂಸದ ತುಕಾರಾಮ್ ರಾಜೀನಾಮೆಗೆ ಆಗ್ರಹ
ವಾಲ್ಮೀಕಿ ನಿಗಮದ ಲೂಟಿ ಹಣದಿಂದಲೇ ಸಂಸದ ತುಕಾರಾಮ್ ಗೆದ್ದಿದ್ದಾರೆ. ತುಕಾರಾಮ್‌ಗೆ ಸ್ವಾಭಿಮಾನವಿದ್ದರೆ ಕೂಡಲೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಪಕ್ಷ ಈ ಹಗರಣದಲ್ಲಿ ಭಾಗಿಯಾಗಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ? ರಾಜ್ಯ ಸರ್ಕಾರವು ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಿದರೂ, ಬಿಜೆಪಿ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ. ನಾಗೇಂದ್ರ ರಾಜೀನಾಮೆ ನೀಡಿದ ಮಾತ್ರಕ್ಕೆ ಹಗರಣ ಮುಗಿಯುವುದಿಲ್ಲ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದೆ. ಬಿಜೆಪಿಯ ಕಾಲಿನ ಧೂಳಿಗೂ ನಾಗೇಂದ್ರ ಸಮನಿಲ್ಲ ಎಂದು ಟೀಕಿಸಿದರು.

