
ಮಹಿಳೆಯೊಂದಿಗೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಮಠದ ಸ್ಜಾಮೀಜಿಗೆ ಸ್ಥಳೀಯರಿಂದ ಗೂಸಾ
ಸ್ವಾಮೀಜಿ ವಿರುದ್ಧ ಈ ಹಿಂದಿನಿಂದಲೂ ಸಾಲು ಸಾಲು ದೂರುಗಳು ಕೇಳಿಬರುತ್ತಿದ್ದವು. ಅನಾರೋಗ್ಯ ನಿವಾರಣೆ ಮಾಡಿಕೊಡುತ್ತೇನೆ ಎಂದು ನಂಬಿಸಿ ಹಣ ವಸೂಲಿ ಮಾಡುತ್ತಿದ್ದರು.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ ಮಠದ ಜಮ್ಮಣ್ಣ ಸ್ವಾಮೀಜಿ ವಿರುದ್ಧ ಗಂಭೀರ ಸ್ವರೂಪದ ಲೈಂಗಿಕ ದೌರ್ಜನ್ಯ ಹಾಗೂ ವಂಚನೆ ಆರೋಪ ಕೇಳಿಬಂದಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಮತ್ತು ಸಂತ್ರಸ್ತೆ ಸಂಬಂಧಿಕರು ಸ್ವಾಮೀಜಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ಬಳ್ಳಾರಿ ಮೂಲದ ಮಹಿಳೆಯೊಬ್ಬರು ತಮ್ಮ ಕುಟುಂಬದ ಸಮಸ್ಯೆಯ ಪರಿಹಾರಕ್ಕಾಗಿ ತಮ್ಮೇನಹಳ್ಳಿ ಮಠಕ್ಕೆ ಆಗಮಿಸಿದ್ದರು. ಈ ವೇಳೆ ಜಮ್ಮಣ್ಣ ಸ್ವಾಮೀಜಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಅನುಚಿತವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ವಿಚಾರ ತಿಳಿದ ತಕ್ಷಣವೇ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಮಠಕ್ಕೆ ಧಾವಿಸಿ ಸ್ವಾಮೀಜಿಯನ್ನು ಹೊರಗೆಳೆದುಕೊಂಡು ಧರ್ಮದೇಟು ನೀಡಿದ್ದಾರೆ.
ಅನಾರೋಗ್ಯ ನಿವಾರಣೆ ಹೆಸರಲ್ಲಿ ಮೋಸ
ಸ್ವಾಮೀಜಿ ವಿರುದ್ಧ ಈ ಹಿಂದಿನಿಂದಲೂ ಸಾಲು ಸಾಲು ದೂರುಗಳು ಕೇಳಿಬರುತ್ತಿದ್ದವು. ಅನಾರೋಗ್ಯ ನಿವಾರಣೆ ಮಾಡಿಕೊಡುತ್ತೇನೆ, ವಾಮಾಚಾರದ ಪ್ರಭಾವ ತೆಗೆಯುತ್ತೇನೆ ಹಾಗೂ ಪವಾಡಗಳ ಹೆಸರಿನಲ್ಲಿ ಮುಗ್ಧ ಜನರನ್ನು ನಂಬಿಸಿ ಅವರಿಂದ ಅಪಾರ ಪ್ರಮಾಣದ ಹಣ ಹಾಗೂ ಕಾಣಿಕೆಗಳನ್ನು ಪಡೆದು ವಂಚಿಸುತ್ತಿದ್ದರು ಎಂಬ ಆರೋಪಗಳಿವೆ.
ಸಮಾಜದ ಧಾರ್ಮಿಕ ಭಾವನೆಗಳ ಜೊತೆ ಆಟವಾಡುತ್ತಿದ್ದ ಈ ಸ್ವಾಮೀಜಿಯ ನೈಜ ಬಣ್ಣ ಈಗ ಬಯಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮದ ಹೆಸರಿನಲ್ಲಿ ಇಂತಹ ಅನಾಚಾರ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದು, ಸಮಾಜದಲ್ಲಿ ಧಾರ್ಮಿಕ ಕೇಂದ್ರಗಳ ಮೇಲಿದ್ದ ನಂಬಿಕೆಗೆ ಈ ಘಟನೆ ದೊಡ್ಡ ಪೆಟ್ಟು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

