ಸಕಾಲದಲ್ಲಿ ಕೆಲಸ ಮುಗಿಸದಿದ್ದರೆ ಗುತ್ತಿಗೆ ರದ್ದು: ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ
x

ಸಕಾಲದಲ್ಲಿ ಕೆಲಸ ಮುಗಿಸದಿದ್ದರೆ ಗುತ್ತಿಗೆ ರದ್ದು: ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ

ಜಲ ಜೀವನ ಮಿಷನ್‌ ಯೋಜನೆಯ ವಿಳಂಬವು ಸರ್ಕಾರದ ಉದ್ದೇಶವನ್ನೇ ಬುಡಮೇಲು ಮಾಡುತ್ತಿದೆ ಎಂದು ಅಧಿಕಾರಿಗಳನ್ನು ಸಚಿವ ಈಶ್ವರ ಖಂಡ್ರೆ ತರಾಟೆಗೆ ತೆಗೆದುಕೊಂಡರು.


Click the Play button to hear this message in audio format

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ ಮಿಷನ್ ಅಡಿಯಲ್ಲಿ ಕೈಗೊಂಡಿರುವ ಬಹುಗ್ರಾಮ ಮತ್ತು ಏಕಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ. ಖಂಡ್ರೆ, ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯ ವಿಳಂಬವು ಸರ್ಕಾರದ ಉದ್ದೇಶವನ್ನೇ ಬುಡಮೇಲು ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಸುಮಾರು 67 ಸಾವಿರ ಕೋಟಿ ರೂ. ವೆಚ್ಚದಲ್ಲಿ ಏಕಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಜಾರಿಯಾಗುತ್ತಿವೆ. ಇದರಲ್ಲಿ 39 ಸಾವಿರ ಏಕಗ್ರಾಮ ಮತ್ತು 130ಕ್ಕೂ ಅಧಿಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸೇರಿವೆ. ಆದರೆ, ಅನೇಕ ಕಡೆಗಳಲ್ಲಿ ಕಾಮಗಾರಿಗಳು ನಿಗದಿತ ಅವಧಿ ಮುಗಿದಿದ್ದರೂ ಪೂರ್ಣಗೊಂಡಿಲ್ಲ. ಇದರಿಂದ ಜನಸಾಮಾನ್ಯರಿಗೆ ಸಕಾಲದಲ್ಲಿ ಕುಡಿಯುವ ನೀರು ಪೂರೈಸುವ ಸರ್ಕಾರದ ಮೂಲ ಉದ್ದೇಶ ವಿಫಲವಾಗುತ್ತಿದೆ.

ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಗಡುವು

ಸಭೆಯಲ್ಲಿ ಗುತ್ತಿಗೆದಾರರ ವಿಳಂಬ ಧೋರಣೆಯ ವಿರುದ್ಧ ಹರಿಹಾಯ್ದ ಸಚಿವರು, ಅವಧಿ ಮುಗಿದಿದ್ದರೂ ಕೆಲಸ ಮುಗಿಸದ ಗುತ್ತಿಗೆದಾರರ ಬಳಿ ಮುಚ್ಚಳಿಕೆ ಬರೆಸಿಕೊಳ್ಳಿ. ಮುಂದಿನ ಮಾರ್ಚ್ ಅಂತ್ಯದೊಳಗೆ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ಗಡುವು ಮೀರಿದರೂ ಕೆಲಸ ಮುಗಿಯದಿದ್ದರೆ, ಅಂತಹ ಗುತ್ತಿಗೆದಾರರಿಗೆ ಅಂತಿಮ ನೋಟಿಸ್ ಜಾರಿ ಮಾಡಿ, ಗುತ್ತಿಗೆಯನ್ನು ರದ್ದುಗೊಳಿಸಿ. ಕೂಡಲೇ ಬೇರೆ ಅರ್ಹ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿ ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ಕೇವಲ ಗುತ್ತಿಗೆದಾರರಷ್ಟೇ ಅಲ್ಲ, ಕೆಲಸ ನಿರ್ವಹಿಸದ ಅಥವಾ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಅಧಿಕಾರಿಗಳು ಮತ್ತು ಎಂಜಿನಿಯರುಗಳು ತಮ್ಮ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆಯಾದರೂ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಕಾಮಗಾರಿ ವಿಳಂಬವಾಗುತ್ತಿದ್ದರೆ ಅಧಿಕಾರಿಗಳೇ ಜವಾಬ್ದಾರರು. ಅಂತಹವರ ವಿರುದ್ಧ ಕರ್ತವ್ಯಲೋಪದ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿಯ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಕಳಪೆ ಕಾಮಗಾರಿಯ ಬಗ್ಗೆ ದೂರುಗಳು ಬಂದರೆ ನಿಷ್ಪಕ್ಷಪಾತ ತನಿಖೆ ನಡೆಸಿ, ಗುತ್ತಿಗೆದಾರರ ಜೊತೆಗೆ ಸಂಬಂಧಪಟ್ಟ ಎಂಜಿನಿಯರುಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಸಭೆ

ಯೋಜನೆಗಳ ಅನುಷ್ಠಾನದಲ್ಲಿ ಅರಣ್ಯ ಭೂಮಿ ಅಥವಾ ರಾಷ್ಟ್ರೀಯ ಹೆದ್ದಾರಿ ದಾಟುವಂತಹ ಅನಿವಾರ್ಯ ತಾಂತ್ರಿಕ ತೊಡಕುಗಳಿದ್ದರೆ, ಅವುಗಳನ್ನು ಬಗೆಹರಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು. ಆದರೆ, ಇಂತಹ ತಾಂತ್ರಿಕ ನೆಪಗಳನ್ನು ಮುಂದಿಟ್ಟುಕೊಂಡು ಕಾಮಗಾರಿಯನ್ನು ವಿಳಂಬಗೊಳಿಸುವುದನ್ನು ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸರ್ಕಾರದ ವಿರುದ್ಧ ಜನಾಭಿಪ್ರಾಯ ಪ್ರತಿಕೂಲವಾಗುವುದನ್ನು ತಡೆಯಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಕೇಂದ್ರದ ಮಾನದಂಡಗಳನ್ನು ಪಾಲಿಸದಿದ್ದರೆ ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳಲಿದೆ, ಆದ್ದರಿಂದ ಎಚ್ಚರದಿಂದ ಕೆಲಸ ಮಾಡಿ. ಕೇವಲ ನೋಟಿಸ್ ನೀಡುವುದಷ್ಟೇ ಅಧಿಕಾರಿಗಳ ಕೆಲಸವಲ್ಲ, ಕಾಮಗಾರಿ ಪೂರ್ಣಗೊಳ್ಳುವಂತೆ ಮೇಲ್ವಿಚಾರಣೆ ಮಾಡಬೇಕು ಎಂದರು.

Read More
Next Story