ಸ್ಟಿಂಗ್ ಬಿರುಗಾಳಿ: ಕೃಪಾ ಆಳ್ವಾ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ
ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಐವನ್ ಡಿ ಸೋಜಾ 'ದ ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಮಾತನಾಡಿ ಕೃಪಾ ಆಳ್ವಾ ಪಾತ್ರ ಇರುವುದು ಏಕೆ ಇದರ ಉದ್ದೇಶ ಏನು ಪತ್ತೆಯಾಗಬೇಕು ಎಂದು ಆಗ್ರಹಿಸಿದರು.
ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಹತ್ವದ ಹೇಳಿಕೆ ನೀಡಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸಿದವರ ಉದ್ದೇಶವೇನು? ಇದರ ಹಿಂದೆ ಯಾರಿದ್ದಾರೆ? ಯಾರಿಗೆ ರಾಜಕೀಯ ಲಾಭ ಮಾಡಿಕೊಡಲು ಈ ಕೃತ್ಯ ನಡೆಸಲಾಗಿದೆ ಎಂಬ ಸತ್ಯಾಂಶ ಜನರ ಮುಂದೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಫೆಡರಲ್ ಕರ್ನಾಟಕದ 'ಸ್ಪೆಷಲ್ @ 7 ಪಿಎಂ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣ ಅನಗತ್ಯವಾಗಿ ಸೃಷ್ಟಿಯಾದ ವಿವಾದವಾಗಿದ್ದು, ಇದರಿಂದ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಜನರ ಸಮಸ್ಯೆಗಳ ಮೇಲಿನ ಚರ್ಚೆಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ನಡೆದಿರುವ ತನಿಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂಬ ಅಂಶ ಸ್ಪಷ್ಟವಾಗಿದೆ ಎಂದು ಹೇಳಿದ ಐವನ್ ಡಿಸೋಜ, ಸ್ಟಿಂಗ್ ಆಪರೇಷನ್ ನಡೆಸಿದವರ ಹಿಂದಿರುವ ಶಕ್ತಿಗಳನ್ನು ಪತ್ತೆಹಚ್ಚುವುದು ಅತ್ಯಂತ ಅಗತ್ಯ ಎಂದರು. ಈ ಪ್ರಕರಣದ ಹಿಂದೆ ದುರುದ್ದೇಶವಿದೆ. ಒಬ್ಬ ನಾಯಕನ ವ್ಯಕ್ತಿತ್ವಕ್ಕೆ ಧಕ್ಕೆ ತಂದು, ಅದರ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆದಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಕೃಪಾ ಆಳ್ವಾ ಪಾತ್ರದ ಬಗ್ಗೆಯೂ ತನಿಖೆಯಾಗಲಿ
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರ ಹೆಸರು ಕೇಳಿಬಂದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬೆಳವಣಿಗೆಯನ್ನು ನಿರೀಕ್ಷಿಸಿರಲಿಲ್ಲ ಎಂದರು. ಕೃಪಾ ಆಳ್ವ ಅವರು ಈ ಪ್ರಕರಣದಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಬಹಿರಂಗಪಡಿಸಬೇಕು. ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಹೇಳಿದರು.
ಕೃಪಾ ಆಳ್ವ ಅವರು ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದವರು. ಅವರ ಹೆಸರು ಪ್ರಕರಣದಲ್ಲಿ ಕೇಳಿಬಂದಿರುವುದರಿಂದ ಪಕ್ಷಕ್ಕೂ ಮುಜುಗರ ಉಂಟಾಗಿರುವುದು ಸಹಜ. ಯಾರೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ತನಿಖೆಯಾಗಬೇಕು. ಅನುಮಾನಗಳಿಗೆ ತೆರೆ ಬೀಳಬೇಕು ಎಂದು ಅಭಿಪ್ರಾಯಪಟ್ಟರು.
ಇನ್ನು, ಮಂಗಳೂರು ಭಾಗದ ಪುತ್ತೂರು ಸೇರಿದಂತೆ ಕೆಲವು ಕ್ಷೇತ್ರಗಳ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸ್ಟಿಂಗ್ ಆಪರೇಷನ್ ನಡೆದಿದೆ ಎಂಬ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಪತ್ರಿಕೆಗಳಲ್ಲಿ ಬಂದ ವರದಿಗಳ ಆಧಾರದಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ತನಿಖೆಯ ಮೂಲಕ ಸತ್ಯಾಂಶ ಹೊರಬರಲಿ ಎಂದರು.
ಮೂಲ ಸೂತ್ರಧಾರಿಗಳ ಪತ್ತೆಯಾಗಬೇಕು
ಈ ಪ್ರಕರಣದ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನೇ ತಾವು ಕೂಡ ಹೇಳುತ್ತಿರುವುದಾಗಿ ತಿಳಿಸಿದ ಐವನ್ ಡಿಸೋಜ, ಸ್ಟಿಂಗ್ ಆಪರೇಷನ್ನ ಮೂಲ ಸೂತ್ರಧಾರಿಗಳನ್ನು ಪತ್ತೆಹಚ್ಚಬೇಕು. ಯಾರು, ಯಾಕೆ ಈ ಕಾರ್ಯಾಚರಣೆ ನಡೆಸಿದರು ಎಂಬುದು ಗೊತ್ತಾಗಬೇಕು. ಆಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು.
ಗೃಹ ಸಚಿವರು ಹಾಗೂ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತನಿಖೆಯ ಮೂಲಕ ಪ್ರಕರಣದ ಹಿಂದಿರುವ ಉದ್ದೇಶ ಮತ್ತು ಭಾಗಿಯಾದವರನ್ನು ಜನರ ಮುಂದೆ ತರಬೇಕು ಎಂದು ಒತ್ತಾಯಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದರು.
ಸ್ಟಿಂಗ್ ವಿವಾದದಿಂದ ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆಯಾಗಿಲ್ಲ
ಸ್ಟಿಂಗ್ ಆಪರೇಷನ್ ವಿವಾದದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಐವನ್ ಡಿಸೋಜ ಅಭಿಪ್ರಾಯಪಟ್ಟರು. ಬದಲಾಗಿ, ಸಿದ್ದರಾಮಯ್ಯ ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಭಾವನೆ ಜನರಲ್ಲಿ ಹೆಚ್ಚಾಗಿದೆ ಎಂದರು. ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡಿದ ಬಳಿಕವೂ ಅವರ ವರ್ಚಸ್ಸು ಹೆಚ್ಚಾಗಿದೆ. ಇಂತಹ ವಿವಾದಗಳಿಂದ ಅವರ ಜನಪ್ರಿಯತೆಗೆ ಹಿನ್ನಡೆಯಾಗುವುದಿಲ್ಲ. ಸತ್ಯಕ್ಕೆ ಅಂತಿಮವಾಗಿ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

