ಇಸ್ರೋ ಕ್ಯಾಂಪಸ್ ಮೇಲೆ ಡ್ರೋನ್ ಹಾರಾಟ; ಭದ್ರತಾ ಲೋಪದ ಆತಂಕ
x

ಇಸ್ರೋ ಕ್ಯಾಂಪಸ್ ಮೇಲೆ 'ಡ್ರೋನ್' ಹಾರಾಟ; ಭದ್ರತಾ ಲೋಪದ ಆತಂಕ

ಇಸ್ರೋಗೆ ಸೇರಿದ ಐಸೈಟ್ ('ಇಸ್ರೋ ಸ್ಯಾಟಲೈಟ್ ಇಂಟಿಗ್ರೇಷನ್ ಅಂಡ್ ಟೆಸ್ಟ್ ಎಸ್ಟಾಬ್ಲಿಷ್ಮೆಂಟ್') ಕ್ಯಾಂಪಸ್ ಮೇಲೆ ಅಪರಿಚಿತರು ಡ್ರೋನ್ ಹಾರಾಟ ನಡೆಸಿದ್ದು, ಈ ಸಂಬಂಧ ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಂಗಳೂರಿನ ಅತ್ಯಂತ ಸಂವೇದನಾಶೀಲ ಮತ್ತು ಆಯಕಟ್ಟಿನ ಪ್ರದೇಶವಾಗಿರುವ ಇಸ್ರೋ ಐಸೈಟ್ ಕ್ಯಾಂಪಸ್ ಬಳಿ ಅಕ್ರಮವಾಗಿ ಡ್ರೋನ್ ಹಾರಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಭದ್ರತಾ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾಗಿರುವ ಇಸ್ರೋಗೆ ಸೇರಿದ ಐಸೈಟ್ ('ಇಸ್ರೋ ಸ್ಯಾಟಲೈಟ್ ಇಂಟಿಗ್ರೇಷನ್ ಅಂಡ್ ಟೆಸ್ಟ್ ಎಸ್ಟಾಬ್ಲಿಷ್ಮೆಂಟ್') ಕ್ಯಾಂಪಸ್ ಮೇಲೆ ಅಪರಿಚಿತರು ಡ್ರೋನ್ ಹಾರಾಟ ನಡೆಸಿದ್ದು, ಈ ಸಂಬಂಧ ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡ್ರೋನ್ ನಿರ್ಬಂಧಿತ ಪ್ರದೇಶದಲ್ಲಿ ಈ ಕೃತ್ಯ ನಡೆದಿರುವುದು ಆಂತರಿಕ ಭದ್ರತೆಯ ದೃಷ್ಟಿಯಿಂದ ಗಂಭೀರ ಪ್ರಕರಣವಾಗಿ ಪರಿಗಣಿಸಲಾಗಿದೆ.

ಕಳೆದ ಮೇ 2 ರಂದು ಬೆಳಿಗ್ಗೆ ಸುಮಾರು 8.16 ರ ಸುಮಾರಿಗೆ ಈ ಘಟನೆ ನಡೆದಿದೆ. ಸಿಐಎಸ್ಎಫ್ ಯುನಿಟ್ನ ಸಬ್ ಇನ್ಸ್ಪೆಕ್ಟರ್ ಅವರು ನೀಡಿರುವ ದೂರಿನ ಅನ್ವಯ ಕ್ಯಾಂಪಸ್ನ ಮೇಲ್ಭಾಗದಲ್ಲಿ ಸುಮಾರು 80 ರಿಂದ 100 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್ ಪತ್ತೆಯಾಗಿದೆ.

ಸುಮಾರು 10 ರಿಂದ 12 ಸೆಕೆಂಡ್ಗಳ ಕಾಲ ಕ್ಯಾಂಪಸ್ ಆವರಣದಲ್ಲಿ ಹಾರಾಡಿದ ಈ ಡ್ರೋನ್, ನಂತರ ಕಣ್ಮರೆಯಾಗಿದೆ. ಇಸ್ರೋ ಐಸೈಟ್ ಪ್ರದೇಶವು 'ಡ್ರೋನ್‌ ಹಾರಾಟ ನಿರ್ಬಂಧಿತ ವಲಯವಾಗಿದ್ದು, ಇಲ್ಲಿ ಯಾವುದೇ ರೀತಿಯ ವೈಮಾನಿಕ ಚಿತ್ರೀಕರಣ ಅಥವಾ ಹಾರಾಟಕ್ಕೆ ಅವಕಾಶವಿಲ್ಲ.

ಭದ್ರತಾ ವೈಫಲ್ಯದ ಆತಂಕ

ಇಸ್ರೋ ಕ್ಯಾಂಪಸ್ಗಳಲ್ಲಿ ಉಪಗ್ರಹಗಳ ಜೋಡಣೆ ಮತ್ತು ಪರೀಕ್ಷೆಗಳಂತಹ ಅತ್ಯಂತ ಗೌಪ್ಯ ಹಾಗೂ ಮಹತ್ವದ ಚಟುವಟಿಕೆಗಳು ನಡೆಯುತ್ತವೆ. ಇಂತಹ ಜಾಗದಲ್ಲಿ ಅಪರಿಚಿತ ಡ್ರೋನ್ ಹಾರಾಟ ನಡೆಸಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.

"ಯಾವುದೇ ಪೂರ್ವಾನುಮತಿ ಇಲ್ಲದೆ ಇಂತಹ ಪ್ರದೇಶಗಳಲ್ಲಿ ಡ್ರೋನ್ ಹಾರಿಸುವುದು ರಾಷ್ಟ್ರೀಯ ಭದ್ರತೆ ಮತ್ತು ಇಸ್ರೋದ ಸುರಕ್ಷತೆಗೆ ದೊಡ್ಡ ಸವಾಲಾಗಿದೆ. ಉದ್ದೇಶಪೂರ್ವಕವಾಗಿ ಅಥವಾ ಕಾನೂನು ಉಲ್ಲಂಘಿಸಿ ಕೃತ್ಯ ಎಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು," ಎಂದು ಸಿಐಎಸ್ಎಫ್ ಅಧಿಕಾರಿಗಳು ದೂರಿನಲ್ಲಿ ಆಗ್ರಹಿಸಿದ್ದಾರೆ.

ತನಿಖೆ ಚುರುಕುಗೊಳಿಸಿದ ಪೊಲೀಸರು

ಸಿಐಎಸ್ಎಫ್ ನೀಡಿದ ದೂರಿನ ಆಧಾರದ ಮೇಲೆ ಎಚ್ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ಯಾಂಪಸ್ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಡ್ರೋನ್ ಅನ್ನು ಎಲ್ಲಿಂದ ಹಾರಿಸಲಾಯಿತು. ಅದರ ಆಪರೇಟರ್ ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಅದು ಅಚಾನಕ್ಕಾಗಿ ಹಾರಿಸಿದ ಡ್ರೋನ್ ಆಗಿತ್ತೇ ಅಥವಾ ಯಾವುದೇ ಬೇಹುಗಾರಿಕೆಯ ಉದ್ದೇಶವಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರೋನ್ ಬಳಕೆ ಹೆಚ್ಚಾಗುತ್ತಿದ್ದು, ಇಸ್ರೋ ಅಂತಹ ಆಯಕಟ್ಟಿನ ಜಾಗಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

Read More
Next Story