
ಡಿಜಿಪಿ ಡಾ. ರಾಮಚಂದ್ರ ರಾವ್
ಐಪಿಎಸ್ ಅಧಿಕಾರಿ ಡಾ. ರಾಮಚಂದ್ರ ರಾವ್ ಅಮಾನತು ವಾಪಸ್; ಸಿಐಡಿಯಲ್ಲಿ ಹೊಸ ಹುದ್ದೆ
2026ರ ಜನವರಿಯಲ್ಲಿ, 1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಮತ್ತು ಆಗಿನ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದ ಡಾ. ರಾಮಚಂದ್ರ ರಾವ್ ಅವರದ್ದೆನ್ನಲಾದ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಕಚೇರಿಯಲ್ಲಿ ಮಹಿಳಾ ಉದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರ ಅಮಾನತನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಅಮಾನತು ರದ್ದುಗೊಳಿಸಿದ ಬೆನ್ನಲ್ಲೇ, ಅವರಿಗೆ ಸಿಐಡಿ ಡಿಜಿಪಿ (ಆರ್ಥಿಕ ಅಪರಾಧಗಳ ವಿಭಾಗ) ಹುದ್ದೆಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ.
2026ರ ಜನವರಿಯಲ್ಲಿ, 1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಮತ್ತು ಆಗಿನ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದ ಡಾ. ರಾಮಚಂದ್ರ ರಾವ್ ಅವರದ್ದೆನ್ನಲಾದ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಪೊಲೀಸ್ ಸಮವಸ್ತ್ರದಲ್ಲೇ ಕಚೇರಿಯೊಳಗೆ ಮಹಿಳೆಯೊಬ್ಬರೊಂದಿಗೆ ಅವರು ಅಸಭ್ಯವಾಗಿ ವರ್ತಿಸುತ್ತಿದ್ದ ದೃಶ್ಯಗಳು ಆ ವಿಡಿಯೋದಲ್ಲಿ ಸೆರೆಯಾಗಿದ್ದವು.
ಈ ವಿಡಿಯೋ ಹರಿದಾಡುತ್ತಿದ್ದಂತೆ ಪೊಲೀಸ್ ಇಲಾಖೆಗೆ ಮತ್ತು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಮಹಿಳಾ ಆಯೋಗವು ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಸ್ತು ಕ್ರಮಕ್ಕೆ ಸೂಚಿಸಿದ್ದರು. ಘಟನೆ ಕುರಿತು ಸ್ಪಷ್ಟನೆ ನೀಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಲು ರಾಮಚಂದ್ರ ರಾವ್ ಯತ್ನಿಸಿದರಾದರೂ, ಸಚಿವರು ಭೇಟಿಗೆ ನಿರಾಕರಿಸಿ ಗೇಟ್‌ನಿಂದಲೇ ವಾಪಸ್ ಕಳುಹಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತವಾದ ಸರ್ಕಾರ, ಜನವರಿ 18ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.
ರಾಮಚಂದ್ರ ರಾವ್ ಅವರ ವಾದವೇನಿತ್ತು?
ತಮ್ಮ ಮೇಲಿನ ಆರೋಪಗಳನ್ನು ಮತ್ತು ವೈರಲ್ ಆದ ವಿಡಿಯೋವನ್ನು ರಾಮಚಂದ್ರ ರಾವ್ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದರು. "ವೈರಲ್ ಆಗಿರುವ ವಿಡಿಯೋದಲ್ಲಿ ಇರುವುದು ನಾನಲ್ಲ. ನನ್ನನ್ನು ಸಿಲುಕಿಸಲು ಕುತಂತ್ರ ಮಾಡಲಾಗಿದೆ. ಡಿಜಿಟಲ್ ತಂತ್ರಜ್ಞಾನ ಬಳಸಿ ಎಐ ಮೂಲಕ ಈ ನಕಲಿ ವಿಡಿಯೋ ಸೃಷ್ಟಿಸಲಾಗಿದೆ" ಎಂದು ಅವರು ಸಮರ್ಥಿಸಿಕೊಂಡಿದ್ದರು. ಈ ಹಿಂದೆ ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲೂ ಇವರ ಹೆಸರು ತಳುಕು ಹಾಕಿಕೊಂಡಿತ್ತು.
ನಿವೃತ್ತಿಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಅಮಾನತುಗೊಂಡಿದ್ದ ಡಾ. ರಾಮಚಂದ್ರ ರಾವ್ ಅವರ ಮೇಲಿನ ಅಮಾನತು ಆದೇಶವನ್ನು ಇದೀಗ ಸರ್ಕಾರ ಹಿಂಪಡೆದಿದ್ದು, ಮಹತ್ವದ ಸಿಐಡಿ (ಆರ್ಥಿಕ ಅಪರಾಧ) ಡಿಜಿಪಿ ಹುದ್ದೆಯನ್ನು ನೀಡಿದೆ. ಸರ್ಕಾರದ ಈ ನಡೆ ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

