
IPL Final| ಸಿಲಿಕಾನ್ ಸಿಟಿಯಲ್ಲಿ ಖಾಕಿ ಕಟ್ಟೆಚ್ಚರ, ಹುಚ್ಚಾಟ ನಡೆಸುವವರಿಗೆ ಜೈಲು!
ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಗೆ ಅಲರ್ಟ್ ಆಗಿರುವ ಬೆಂಗಳೂರು ಪೊಲೀಸರು, ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯಲಿದ್ದು, ಕ್ರೀಡಾ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಗೆ ಅಲರ್ಟ್ ಆಗಿರುವ ಬೆಂಗಳೂರು ಪೊಲೀಸರು, ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಂದ್ಯದ ಫಲಿತಾಂಶ ಏನೇ ಆದರೂ ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಕ್ರೀಡಾಭಿಮಾನಿಗಳಿಗಾಗಿ ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಕಹಿ ಘಟನೆಯಿಂದ ಎಚ್ಚೆತ್ತ ಪೊಲೀಸ್ ಇಲಾಖೆ
ಕಳೆದ ವರ್ಷ ಆರ್‌ಸಿಬಿ ತಂಡ ವಿಜಯೋತ್ಸವದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ಭೀಕರ ದುರಂತ ಇಡೀ ಬೆಂಗಳೂರು ನಗರವನ್ನೇ ನಡುಗಿಸಿತ್ತು. ಆ ಕಹಿ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಈ ಬಾರಿ ಯಾವುದೇ ಸಣ್ಣ ತಪ್ಪುಗಳಿಗೂ ಆಸ್ಪದ ನೀಡದಂತೆ ನಿಗಾ ವಹಿಸುತ್ತಿದೆ. ಇಂದಿನ ಫೈನಲ್ ಪಂದ್ಯದ ಫಲಿತಾಂಶದ ನಂತರ ಅಭಿಮಾನಿಗಳ ಅತಿರೇಕದ ವರ್ತನೆಗೆ ಬ್ರೇಕ್ ಹಾಕಲು ಖಾಕಿ ಪಡೆ ರಸ್ತೆಗಿಳಿದಿದೆ.
ಹುಚ್ಚಾಟ ನಡೆಸಿದರೆ ಕಠಿಣ ಕ್ರಮ
"ಕ್ರೀಡೆ ಎಂಬುದು ಮನರಂಜನೆಗಾಗಿ ಇರಬೇಕೇ ಹೊರತು ಮತ್ತೊಬ್ಬರ ನೆಮ್ಮದಿ ಕೆಡಿಸಲು ಅಲ್ಲ. ಪ್ರತಿಯೊಬ್ಬ ಅಭಿಮಾನಿಯೂ ಜವಾಬ್ದಾರಿಯುತವಾಗಿ ವರ್ತಿಸಬೇಕು. ಕಳೆದ ವರ್ಷದ ಘಟನೆಯನ್ನು ಯಾರೂ ಮರೆಯಬಾರದು. ನಗರದ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸರ ಮಾರ್ಗಸೂಚಿಗಳನ್ನು ಮೀರಿ ಯಾರಾದರೂ ಹುಚ್ಚಾಟ ನಡೆಸಿದರೆ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು." ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದಾದ್ಯಂತ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಹಾಗೂ ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿದೆ. ಸಾರ್ವಜನಿಕರು ಸುರಕ್ಷಿತವಾಗಿ ಮನೆಯಲ್ಲೇ ಕುಳಿತು ಪಂದ್ಯ ಆನಂದಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕೆಂದು ಪೊಲೀಸ್ ಇಲಾಖೆ ವಿನಂತಿಸಿದೆ.
ಪೊಲೀಸ್ ಇಲಾಖೆಯ ಮಾರ್ಗಸೂಚಿಗಳೇನು?
ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಕ್ರಿಕೆಟ್ ಪ್ರೇಮಿಗಳು ಕಡ್ಡಾಯವಾಗಿ ಪಾಲಿಸಲು ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.
• ರಸ್ತೆ, ಸರ್ಕಲ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕೂಡಿ ವಿಜಯೋತ್ಸವ ಆಚರಿಸುವಂತಿಲ್ಲ.
• ಸೂಕ್ತ ಅನುಮತಿ ಪಡೆಯದೇ ರಸ್ತೆ ಬದಿಗಳಲ್ಲಿ ಅಥವಾ ಸಾರ್ವಜನಿಕವಾಗಿ ದೊಡ್ಡ ಎಲ್ಇಡಿ ಸ್ಕ್ರೀನ್ ಅಳವಡಿಸಿ ಪಂದ್ಯ ಪ್ರಸಾರ ಮಾಡುವಂತಿಲ್ಲ.
• ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಪಟಾಕಿ ಸಿಡಿಸುವಂತಿಲ್ಲ. ಜೀವಕ್ಕೆ ಅಪಾಯ ತರುವಂತಹ ವಸ್ತುಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
• ಜನಸಂದಣಿ ಹೆಚ್ಚಾಗಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಸಾರ್ವಜನಿಕರು ಶಾಂತಿ ಹಾಗೂ ಶಿಸ್ತು ಕಾಪಾಡಿಕೊಳ್ಳಬೇಕು.
• ವಾಹನ ಸವಾರರು ಸಂಚಾರ ವಿಭಾಗದ ಪೊಲೀಸರು ನೀಡುವ ಸಲಹೆ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
• ಮಧ್ಯರಾತ್ರಿ ಬೈಕ್ ಜಾಥಾ ನಡೆಸುವುದು, ಅತಿವೇಗದ ಚಾಲನೆ, ವ್ಹೀಲಿಂಗ್ನಂತಹ ಸ್ಟಂಟ್‌ಗಳು ಹಾಗೂ ಕರ್ಕಶವಾಗಿ ಹಾರ್ನ್ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
• ರಸ್ತೆಗಳನ್ನು ಬ್ಲಾಕ್ ಮಾಡಿ, ವಾಹನ ಸವಾರರಿಗೆ ತೊಂದರೆ ಕೊಟ್ಟು ಸಂಭ್ರಮಾಚರಣೆ ಮಾಡುವಂತಿಲ್ಲ.
• ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಅಥವಾ ಕುಡಿದು ರಂಪಾಟ ಮಾಡಿ ಅಸಭ್ಯವಾಗಿ ವರ್ತಿಸಿದರೆ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುವುದು.
• ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಂಗಳಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಅಥವಾ ದ್ವೇಷಪೂರಿತ ಪೋಸ್ಟ್‌ಗಳನ್ನು ಹಾಕುವಂತಿಲ್ಲ.
• ಪಂದ್ಯದ ಫಲಿತಾಂಶದ ಹೆಸರಿನಲ್ಲಿ ಎದುರಾಳಿ ತಂಡದ ಅಭಿಮಾನಿಗಳನ್ನು ವೈಯಕ್ತಿಕವಾಗಿ ನಿಂದಿಸುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಬಾರದು.

