
Yogesh Gowda Murder| ಸಾಕ್ಷಿ ನಾಶಪಡಿಸಿದ ಇನ್ಸ್‌ಪೆಕ್ಟರ್ ಟಿಂಗರಿಕರ್‌ಗೆ 7 ವರ್ಷ ಜೈಲು ಶಿಕ್ಷೆ
ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಟಿಂಗರಿಕರ್ ಪಾತ್ರ ಸ್ಪಷ್ಟವಾಗಿ ಕಾಣಿಸಿತು. ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದು, ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದು ಸಿಬಿಐ ತನಿಖೆಯಲ್ಲಿ ಸಾಬೀತಾಯಿತು.
ಅಧಿಕಾರ ಹಾಗೂ ಪ್ರಭಾವದ ನೆರಳಿನಲ್ಲಿ ಕಾನೂನನ್ನು ಗಾಳಿಗೆ ತೂರಿ, ಸತ್ಯವನ್ನು ಮರೆ ಮಾಚಲು ಪ್ರಯತ್ನಿಸಿದರೂ ಕಾನೂನಿನ ಕುಣಿಗೆ ಯಾವ ರೀತಿಯಲ್ಲಿ ಬಿಸಿ ಮುಟ್ಟಿಸಲಿದೆ ಎಂಬುದಕ್ಕೆ ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣದ ತೀರ್ಪು ಒಂದು ಜ್ವಲಂತ ಉದಾಹರಣೆಯಾಗಿದೆ.
ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಲು ಸಹಕರಿಸಿದ ಪೊಲೀಸ್ ಅಧಿಕಾರಿಯೂ ಶಿಕ್ಷೆಗೆ ಗುರಿಯಾಗಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣೆಯ ಮಾಜಿ ಇನ್ಸ್‌ಪೆಕ್ಟರ್ ಚೆನ್ನಕೇಶವ ಟಿಂಗರಿಕರ್ (ಅಪರಾಧಿ-19) ಅವರಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಐತಿಹಾಸಿಕ ಆದೇಶ ಹೊರಡಿಸಿದೆ.
2016ರ ಜೂನ್ 15ರಂದು ಧಾರವಾಡದ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಅವರನ್ನು ಅವರದ್ದೇ ಜಿಮ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ನಡೆದ ಸಮಯದಲ್ಲಿ ಚೆನ್ನಕೇಶವ ಟಿಂಗರಿಕರ್ ಧಾರವಾಡದ ಉಪನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಒಬ್ಬ ಪೊಲೀಸ್ ಅಧಿಕಾರಿಯ ಪ್ರಾಥಮಿಕ ಕರ್ತವ್ಯ ಅಪರಾಧ ನಡೆದಾಗ ನೈಜ ಅಪರಾಧಿಗಳನ್ನು ಪತ್ತೆಹಚ್ಚುವುದು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುವುದಾಗಿರುತ್ತದೆ. ಆದರೆ, ಟಿಂಗರಿಕರ್ ಅವರು ಈ ಪ್ರಕರಣದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಪ್ರಭಾವಿ ರಾಜಕಾರಣಿಗಳ ಸೂಚನೆಯಂತೆ ಅಸಲಿ ಆರೋಪಿಗಳನ್ನು ರಕ್ಷಿಸಲು ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪ ಎದುರಿಸುತ್ತಿದ್ದರು.
ಸಿಬಿಐ ತನಿಖೆಯಲ್ಲಿ ಬಯಲಾದ ಸತ್ಯ
ಆರಂಭದಲ್ಲಿ ಸ್ಥಳೀಯ ಪೊಲೀಸರು ನಡೆಸಿದ ತನಿಖೆಯಲ್ಲಿ ಅನೇಕ ಲೋಪದೋಷಗಳಿದ್ದವು. ನಂತರ ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಾಗ, ತನಿಖಾಧಿಕಾರಿಗಳು ಕೇವಲ ಕೊಲೆಗಡುಕರನ್ನು ಮಾತ್ರವಲ್ಲದೆ, ಅವರಿಗೆ ವ್ಯವಸ್ಥಿತವಾಗಿ ಬೆಂಬಲ ನೀಡಿದ ಒಳಸಂಚುಗಾರರನ್ನು ಪತ್ತೆಹಚ್ಚಿದರು. ಈ ವೇಳೆ ಇನ್ಸ್‌ಪೆಕ್ಟರ್ ಟಿಂಗರಿಕರ್ ಅವರ ಪಾತ್ರ ಸ್ಪಷ್ಟವಾಗಿ ಕಾಣಿಸಿತು. ಅವರು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದು, ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದು ಮತ್ತು ಮಹತ್ವದ ಪುರಾವೆಗಳನ್ನು ನಾಶಪಡಿಸಿದ್ದು ಸಿಬಿಐ ತನಿಖೆಯಲ್ಲಿ ಸಾಬೀತಾಯಿತು. ಹೀಗಾಗಿ ಅವರನ್ನು ಪ್ರಕರಣದ 19ನೇ ಆರೋಪಿಯನ್ನಾಗಿ ಹೆಸರಿಸಲಾಯಿತು.
ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ
ಚೆನ್ನಕೇಶವ ಟಿಂಗರಿಕರ್ ತನಿಖೆಯ ಹಂತದಲ್ಲಿ ಮತ್ತು ವಿಚಾರಣೆಯ ಸಮಯದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸತತ ಪ್ರಯತ್ನ ನಡೆಸಿದ್ದರು. 2016ರ ಅಕ್ಟೋಬರ್ 31ರಿಂದಲೇ ಅವರು ಯಾವುದೋ ಬಂದೋಬಸ್ತ್ ಕಾರಣ ನೀಡಿ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗುತ್ತಿದ್ದರು. ಇದನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿ, ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಧಾರವಾಡ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಅವರು, ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಇವರ ಅರ್ಜಿಯನ್ನು ವಜಾಗೊಳಿಸಿ, ತನಿಖೆಗೆ ಸಹಕರಿಸುವಂತೆ ಸೂಚಿಸಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದಾಗ, ಸಿಬಿಐ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಆ ಸಮಯದಲ್ಲಿ ಟಿಂಗರಿಕರ್ ಮನೆಯಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದರು.
ನ್ಯಾಯಾಲಯದ ಕಠಿಣ ತೀರ್ಪು
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಇನ್ಸ್‌ಪೆಕ್ಟರ್ ಟಿಂಗರಿಕರ್ ಅವರ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದರು. ಒಬ್ಬ ರಕ್ಷಕನೇ ಭಕ್ಷಕನಾದಾಗ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಅಂಶವನ್ನು ಆಧರಿಸಿ, ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಸಾಕ್ಷಿ ನಾಶ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಇವರ ಮೇಲಿನ ಆರೋಪಗಳು ಸಾಬೀತಾಗಿವೆ.
ಈ ತೀರ್ಪು ಕೇವಲ ಟಿಂಗರಿಕರ್ ಅವರಿಗೆ ನೀಡಿದ ಶಿಕ್ಷೆಯಲ್ಲ, ಬದಲಾಗಿ ಇಡೀ ಪೊಲೀಸ್ ಇಲಾಖೆಗೆ ನೀಡಿದ ಎಚ್ಚರಿಕೆಯಾಗಿದೆ. ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ತನಿಖೆಯನ್ನು ಹಾದಿ ತಪ್ಪಿಸುವ ಅಧಿಕಾರಿಗಳಿಗೆ ಇದು ಸಿಂಹಸ್ವಪ್ನವಾಗಲಿದೆ. ತನಿಖೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಅಧಿಕಾರಿಗಳೂ ಜೈಲು ಪಾಲಾಗಬೇಕಾಗುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನ. ಕೊಲೆ ಮಾಡಿದವರಿಗಿಂತಲೂ ಸಾಕ್ಷಿ ನಾಶ ಮಾಡಿದವರಿಗೆ ನೀಡುವ ಶಿಕ್ಷೆಯು ನ್ಯಾಯಾಂಗದ ಶಕ್ತಿಯನ್ನು ತೋರಿಸುತ್ತದೆ.

