
ಸಾಂದರ್ಭಿಕ ಚಿತ್ರ
ಕಾವೇರಿ ವನ್ಯಧಾಮದಲ್ಲಿ ಸೊಂಡಿಲಿಗೆ ಗಾಯವಾಗಿ ಒದ್ದಾಡುತ್ತಿದ್ದ ಗಂಡಾನೆ ಸಾವು
ವಾಸ್ತವದಲ್ಲಿ ಆನೆಯ ಸೊಂಡಿಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಇದರಿಂದಾಗಿ ಆನೆಗೆ ಯಾವುದೇ ಆಹಾರ ಸೇವಿಸಲು ಸಾಧ್ಯವಾಗದೆ, ತೀವ್ರವಾಗಿ ನಿತ್ರಾಣಗೊಂಡು ಕೊನೆಯುಸಿರೆಳೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಂಡಾನೆಯೊಂದು ಶುಕ್ರವಾರ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಆನೆಗೆ ಸಕಾಲದಲ್ಲಿ ಚಿಕಿತ್ಸೆ ನೀಡದೆ ಅರಣ್ಯ ಇಲಾಖೆ ತೋರಿದ ನಿರ್ಲಕ್ಷ್ಯವೇ ಆನೆಯ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾವೇರಿ ವನ್ಯಧಾಮದ ಗೋಪಿನಾಥಂ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿರುವ ಗೋಪಿನಾಥಂ ಜಲಾಶಯಕ್ಕೆ ನೀರು ಕುಡಿಯಲು ಬಂದಿದ್ದ ಈ ಕಾಡಾನೆ, ವಾಪಸ್ ಮೇಲಕ್ಕೆ ಬರಲಾಗದೆ ಜಲಾಶಯದ ಪಾತ್ರದಲ್ಲೇ ಉಳಿದುಕೊಂಡಿತ್ತು. ಮೇಲ್ನೋಟಕ್ಕೆ ಆನೆಯ ಕಾಲಿಗೆ ಗಾಯವಾಗಿರಬಹುದು ಎಂದು ಶಂಕಿಸಿದ ಸ್ಥಳೀಯರು, ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು, ಪಟಾಕಿ ಸಿಡಿಸಿ ಆನೆಯನ್ನು ಮತ್ತೆ ಕಾಡಿಗೆ ಓಡಿಸುವ ಪ್ರಯತ್ನ ಮಾಡಿದ್ದರು.
ಆದರೆ, ವಾಸ್ತವದಲ್ಲಿ ಆನೆಯ ಸೊಂಡಿಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಇದರಿಂದಾಗಿ ಆನೆಗೆ ಯಾವುದೇ ಆಹಾರ ಸೇವಿಸಲು ಸಾಧ್ಯವಾಗದೆ, ತೀವ್ರವಾಗಿ ನಿತ್ರಾಣಗೊಂಡು ಕೊನೆಯುಸಿರೆಳೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
"ಗಾಯಗೊಂಡಿದ್ದ ಗಂಡಾನೆಯೊಂದು ಪದೇಪದೇ ಜಲಾಶಯದ ಬಳಿ ನೀರಿಗೆ ಬಂದು ನಿಲ್ಲುತ್ತಿರುವ ಬಗ್ಗೆ ನಾವು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿದ್ದೆವು. ಆದರೂ ಅಧಿಕಾರಿಗಳು ಆನೆಗೆ ಸೂಕ್ತ ಚಿಕಿತ್ಸೆ ಒದಗಿಸಲು ಮುಂದಾಗಲಿಲ್ಲ ಅಥವಾ ಬೇರೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. ಅವರ ಈ ನಿರ್ಲಕ್ಷ್ಯವೇ ಒಂದು ಜೀವವನ್ನು ಬಲಿತೆಗೆದುಕೊಂಡಿದೆ," ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಹಾಗೂ ಆನೆಯ ಸಾವಿನ ನಿಖರ ಕಾರಣದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸುರೇಂದ್ರ ಅವರಿಗೆ ಕರೆ ಮಾಡಲಾಯಿತಾದರೂ, ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.

