
ಎರಡನೇ ಬಾರಿ ಅರಿವಳಿಕೆ ನೀಡಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದರು. ನಂತರ ಗಾಯಗೊಂಡಿರುವ ಚಿರತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಮೇಲೆ ಗಾಯಾಳು ಚಿರತೆ ದಾಳಿ
ಸೋಮವಾರ ರಾತ್ರಿ ರಸ್ತೆ ದಾಟುತ್ತಿದ್ದ ಚಿರತೆಗೆ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರತೆ ಹೆದ್ದಾರಿ ಬದಿಯ ಚರಂಡಿಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದೆ. ಅಲ್ಲಿಯೇ ರಾತ್ರಿ ಪೂರ್ತಿ ನೋವಿನಿಂದ ನರಳುತ್ತಿತ್ತು.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಚಿರತೆಯನ್ನು ರಕ್ಷಿಸುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಕೊಕ್ಕನೂರು ಗ್ರಾಮದ ಸಮೀಪ ಮಂಗಳವಾರ ಬೆಳಗ್ಗೆ ನಡೆದಿದೆ. ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಚಿರತೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರತೆ ಹೆದ್ದಾರಿ ಬದಿಯ ಚರಂಡಿಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದೆ. ಘಟನೆಯ ಬಳಿಕ ಅದು ಅಲ್ಲಿಯೇ ರಾತ್ರಿ ಪೂರ್ತಿ ನೋವಿನಿಂದ ನರಳುತ್ತಿತ್ತು.
ಈ ವಿಷಯ ಹೆದ್ದಾರಿ ಗಸ್ತು ಪೊಲೀಸರ ಗಮನಕ್ಕೆ ಬಂದಿದ್ದು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಗಾಯಗೊಂಡಿರುವ ಚಿರತೆಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರ ತಂಡ ಸ್ಥಳಕ್ಕೆ ತೆರಳಿತ್ತು.
ಅರಿವಳಿಕೆ ನೀಡಿದ ಬಳಿಕ ಸಿಬ್ಬಂದಿ ಮೇಲೆರಗಿದ ಚಿರತೆ
ಹಂಪಿಯಿಂದ ಆಗಮಿಸಿದ್ದ ಪಶುವೈದ್ಯರ ತಂಡದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆ ಸುಮಾರು 9 ಗಂಟೆಗೆ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದರು. ಮೊದಲ ಹಂತದಲ್ಲಿ ಚಿರತೆಗೆ ಅರಿವಳಿಕೆ ಇಂಜೆಕ್ಷನ್ ನೀಡಲಾಯಿತು. ಆದರೆ, ಅರಿವಳಿಕೆಯ ಪರಿಣಾಮ ಸಂಪೂರ್ಣವಾಗಿ ಕಾಣಿಸಿಕೊಳ್ಳುವ ಮುನ್ನವೇ ಚಿರತೆ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದೆ. ದಾಳಿಯಿಂದ ಸಿಬ್ಬಂದಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಎರಡನೇ ಬಾರಿ ಅರಿವಳಿಕೆ ನೀಡಿದ ಅರಣ್ಯಾಧಿಕಾರಿಗಳು
ಮೊದಲ ಪ್ರಯತ್ನದ ಬಳಿಕ ಮತ್ತೊಮ್ಮೆ ಅರಿವಳಿಕೆ ನೀಡಿದ ನಂತರ ಚಿರತೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಳಿಕ ಗಾಯಗೊಂಡಿದ್ದ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದು, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ ಎಂದು ಎಸಿಎಫ್ ಆನಂದ್ ತಿಳಿಸಿದ್ದಾರೆ. ಅಪಘಾತದಿಂದ ಚಿರತೆಗೆ ಉಂಟಾಗಿರುವ ಗಾಯಗಳ ಸ್ವರೂಪವನ್ನು ಪರಿಶೀಲಿಸಿ, ಅಗತ್ಯ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ.

