ಇಂಡೋನೇಷ್ಯಾದಲ್ಲಿ ಪ್ರಕೃತಿ ತಾಂಡವ: ಸರಣಿ ಭೂಕಂಪಕ್ಕೆ 38 ಮಂದಿ ಸಾವು
x

ಇಂಡೋನೇಷ್ಯಾದಲ್ಲಿ ಪ್ರಕೃತಿ ತಾಂಡವ: ಸರಣಿ ಭೂಕಂಪಕ್ಕೆ 38 ಮಂದಿ ಸಾವು

ಶನಿವಾರ ಮುಂಜಾನೆ 5:58ರ ಸುಮಾರಿಗೆ ಇಂಡೋನೇಷ್ಯಾದ ಫ್ಲೋರ್ಸ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ದಾಖಲಾಗಿದೆ. ಕಂಪನವು ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.


Click the Play button to hear this message in audio format

ಅಗ್ನಿಪರ್ವತಗಳು ಮತ್ತು ಭೂಕಂಪಗಳಿಗೆ ಹೆಸರುವಾಸಿಯಾದ ಇಂಡೋನೇಷ್ಯಾ ದೇಶವು ಶನಿವಾರ ಭೀಕರ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾಗಿದೆ. ಕೆಲವೇ ಗಂಟೆಗಳ ಅಂತರದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ದೇಶದ ಸುಮಾತ್ರಾ ಮತ್ತು ಫ್ಲೋರ್ಸ್ ದ್ವೀಪಗಳನ್ನು ತಲ್ಲಣಗೊಳಿಸಿವೆ. ಈ ದುರಂತದಲ್ಲಿ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದು, ನೂರಾರು ಕಟ್ಟಡಗಳು ನೆಲಸಮವಾಗಿವೆ. ಸಾವಿರಾರು ಜನರು ಪ್ರಾಣಭಯದಿಂದ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ.

ಶನಿವಾರ ಮುಂಜಾನೆ 5:58ರ ಸುಮಾರಿಗೆ ಇಂಡೋನೇಷ್ಯಾದ ಫ್ಲೋರ್ಸ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ದಾಖಲಾಗಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಈ ಕಂಪನವು ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಇದರ ಕೇಂದ್ರಬಿಂದುವು ಪೂರ್ವ ನುಸಾ ತೆಂಗಾರ ಪ್ರಾಂತ್ಯದ ಎಂಡೆ ನಗರದ ವಾಯುವ್ಯಕ್ಕೆ 68 ಕಿಮೀ ದೂರದಲ್ಲಿತ್ತು. ಭೂಕಂಪದ ತೀವ್ರತೆಗೆ ಹಲವು ಹಳ್ಳಿಗಳು ಮಣ್ಣುಪಾಲಾಗಿವೆ. ಸಿಕ್ಕಾ, ಮಂಗಾರೈ ಮತ್ತು ಪೂರ್ವ ಮಂಗಾರೈ ಪ್ರದೇಶಗಳಲ್ಲಿ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿವೆ. ಮಂಗಾರೈನ ರಿಯೋಕ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ 16 ಮಂದಿ ಮೃತಪಟ್ಟಿದ್ದು, ಅವರ ಶವಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ. ಒಟ್ಟಾರೆ ಈ ಘಟನೆಯಲ್ಲಿ 38ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಸಂಜೆ ಮತ್ತೆ 6.9 ತೀವ್ರತೆಯ ಭೂಕಂಪನ

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ, ಸಂಜೆ ವೇಳೆಗೆ ಪಶ್ಚಿಮ ಸುಮಾತ್ರ ದ್ವೀಪದಲ್ಲಿ ಮತ್ತೊಂದು 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಮೆಡಾನ್ ನಗರದ ಆಗ್ನೇಯಕ್ಕೆ 126 ಕಿಲೋಮೀಟರ್ ದೂರದಲ್ಲಿ ಕೇಂದ್ರಬಿಂದುವನ್ನು ಹೊಂದಿತ್ತು. ಇದು ಸುಮಾರು 183 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದರಿಂದ ಪ್ರಾಣಹಾನಿ ಕಡಿಮೆ ಇರಬಹುದೆಂದು ನಿರೀಕ್ಷಿಸಲಾಗಿದ್ದರೂ, ಈಗಾಗಲೇ ಕಂಪನದಿಂದ ಶಿಥಿಲಗೊಂಡಿದ್ದ ಕಟ್ಟಡಗಳು ಮತ್ತಷ್ಟು ಹಾನಿಗೀಡಾಗಿವೆ. 7.7 ತೀವ್ರತೆಯ ಭೂಕಂಪದ ಬೆನ್ನಲ್ಲೇ ಸುನಾಮಿಯ ಭೀತಿ ಉಂಟಾಗಿತ್ತು. ಕರಾವಳಿ ತೀರದ ಜನರು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಸಾವಿರಾರು ಗ್ರಾಮಸ್ಥರು ಮನೆಗಳನ್ನು ತೊರೆದು ತಾತ್ಕಾಲಿಕ ಆಶ್ರಯ ತಾಣಗಳಿಗೆ ಧಾವಿಸಿದರು. ಅದೃಷ್ಟವಶಾತ್, ಇಂಡೋನೇಷ್ಯಾದ ಹವಾಮಾನಶಾಸ್ತ್ರ ಮತ್ತು ಭೂಭೌತಶಾಸ್ತ್ರ ಸಂಸ್ಥೆಯು ಸಮುದ್ರ ಮಟ್ಟದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡುಬಂದಿಲ್ಲ ಎಂದು ದೃಢಪಡಿಸಿದ ನಂತರ ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಳ್ಳಲಾಯಿತು.

ಮೂಲಸೌಕರ್ಯಗಳ ಮೇಲೆ ದುಷ್ಪರಿಣಾಮ

ಭೂಕಂಪದಿಂದಾಗಿ ಪ್ರದೇಶದ ಸಂಪರ್ಕ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಸಂವಹನ ವ್ಯವಸ್ಥೆ ವಿಫಲವಾಗಿದೆ. ಇದರಿಂದ ರಕ್ಷಣಾ ತಂಡಗಳಿಗೆ ಮಾಹಿತಿಯನ್ನು ಪಡೆಯುವುದು ಕಷ್ಟಸಾಧ್ಯವಾಗಿದೆ. ಫ್ಲೋರ್ಸ್ ದ್ವೀಪದ ಜೀವನಾಡಿಯಾಗಿರುವ ಸುಮಾರು 700 ಕಿಲೋಮೀಟರ್ ಉದ್ದದ 'ಟ್ರಾನ್ಸ್-ಫ್ಲೋರ್ಸ್ ಹೆದ್ದಾರಿ' ಭೂಕುಸಿತದಿಂದಾಗಿ ಅಲ್ಲಲ್ಲಿ ಕಡಿತಗೊಂಡಿದೆ. ಲ್ಯಾಬುವಾನ್ ಬಾಜೊದಿಂದ ಲಾರಾಂಟುಕಾವರೆಗಿನ ಪ್ರದೇಶ ಸಂಪರ್ಕ ಕಡಿತಗೊಂಡಿದ್ದು, ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಅಧಿಕಾರಿಗಳು ಪರದಾಡುವಂತಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಾಗೇಕಿಯೊ ರೀಜೆನ್ಸಿಯೊಂದರಲ್ಲೇ ಸುಮಾರು 2 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. ಶೋಧ ತಂಡಗಳು ಅವಶೇಷಗಳನ್ನು ತೆರವುಗೊಳಿಸುತ್ತಿದ್ದು, ಸಾವುನೋವುಗಳ ಸಂಖ್ಯೆ ಏರಿಕೆಯಾಗುವ ಆತಂಕವಿದೆ. ಭೂಕಂಪನದ ನಂತರ ಸರಣಿ ಕಂಪನಗಳು ಸಂಭವಿಸುತ್ತಿರುವುದರಿಂದ ಜನಸಾಮಾನ್ಯರು ತಮ್ಮ ಮನೆಗಳಿಗೆ ಮರಳಲು ಹೆದರುತ್ತಿದ್ದಾರೆ.

Read More
Next Story