
ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಟೇಕಾಫ್‌ಗೆ 100 ಮೀಟರ್ ಬಾಕಿ ಇರುವಾಗ ಸ್ಪಾರ್ಕ್ ಕಾಣಿಸಿಕೊಂಡಿದೆ. ಪೈಲಟ್ ಸಮಯಪ್ರಜ್ಞೆಯಿಂದ 236 ಮಂದಿ ಸುರಕ್ಷಿತವಾಗಿದ್ದಾರೆ.
ಮಂಗಳೂರು| ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: 236 ಮಂದಿ ಕೂದಲೆಳೆ ಅಂತರದಲ್ಲಿ ಪಾರು
ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಟೇಕಾಫ್‌ಗೆ 100 ಮೀಟರ್ ಬಾಕಿ ಇರುವಾಗ ಸ್ಪಾರ್ಕ್ ಕಾಣಿಸಿಕೊಂಡಿದೆ. ಪೈಲಟ್ ಸಮಯಪ್ರಜ್ಞೆಯಿಂದ 236 ಮಂದಿ ಸುರಕ್ಷಿತವಾಗಿದ್ದಾರೆ.
ರಾಜ್ಯದಲ್ಲಿ ಎರಡು ವಿಮಾನ ನಿಲ್ದಾಣಗಳಲ್ಲಿ ಒಂದೇ ದಿನ ಇಂಡಿಗೋ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಘಟನೆ ಆತಂಕ ಮೂಡಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ, ಮಂಗಳೂರು ವಿಮಾನ ನಿಲ್ದಾಣದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಟೇಕಾಫ್‌ಗೆ ಕೆಲವೇ ಕ್ಷಣಗಳು ಬಾಕಿ ಇರುವಾಗ ವಿಮಾನದ ಚಕ್ರದಲ್ಲಿ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.
229 ಪ್ರಯಾಣಿಕರು, 7 ಸಿಬ್ಬಂದಿ ಇದ್ದ ವಿಮಾನ
ಸೋಮವಾರ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ 229 ಪ್ರಯಾಣಿಕರು ಮತ್ತು ಏಳು ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 236 ಜನರಿದ್ದರು. ಸಂಜೆ 6.10ರ ಸುಮಾರಿಗೆ ವಿಮಾನ ಟೇಕಾಫ್‌ಗೆ ಸಿದ್ಧವಾಗಿತ್ತು. ರನ್‌ವೇನಲ್ಲಿ ವೇಗವಾಗಿ ಚಲಿಸುತ್ತಿದ್ದ ವಿಮಾನ ಟೇಕಾಫ್ ಆಗಲು ಕೇವಲ 100 ಮೀಟರ್ ಅಂತರ ಬಾಕಿ ಇರುವಾಗ ಅದರ ಕೆಳಭಾಗದಲ್ಲಿ ಬೆಂಕಿಯ ಕಿಡಿಯೊಂದಿಗೆ ಸ್ಪಾರ್ಕ್ ಕಾಣಿಸಿಕೊಂಡಿದೆ.
ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ವಿಮಾನದಲ್ಲಿ ಸ್ಪಾರ್ಕ್ ಕಾಣಿಸಿಕೊಂಡಿದ್ದನ್ನು ಗಮನಿಸಿದ ಪೈಲಟ್ ತಕ್ಷಣವೇ ವಿಮಾನದ ವೇಗವನ್ನು ಕಡಿಮೆ ಮಾಡಿ ತುರ್ತು ಬ್ರೇಕ್ ಹಾಕಿ ರನ್‌ವೇನಲ್ಲೇ ನಿಲ್ಲಿಸಿದ್ದಾರೆ. ವಿಮಾನದ ಚಕ್ರವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ. ಟೇಕಾಫ್‌ನ ಕೊನೆಯ ಕ್ಷಣದಲ್ಲಿ ಪೈಲಟ್ ವಿಮಾನವನ್ನು ನಿಲ್ಲಿಸಿದ್ದರಿಂದ 236 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಪೈಲಟ್‌ನ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಮಾನ ಟೇಕಾಫ್ ಆಗಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಮಧುರೈಗೆ ತೆರಳಬೇಕಿದ್ದ ವಿಮಾನದಲ್ಲೂ ದೋಷ
ಇದಕ್ಕೂ ಮುನ್ನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧುರೈಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲೂ ಟೇಕಾಫ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. 92 ಪ್ರಯಾಣಿಕರಿದ್ದ ಆ ವಿಮಾನದ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ತುರ್ತು ಬ್ರೇಕ್ ಹಾಕಿ ವಿಮಾನವನ್ನು ರನ್‌ವೇನಲ್ಲೇ ನಿಲ್ಲಿಸಿದ್ದರು.
ಒಂದೇ ದಿನ ಕರ್ನಾಟಕದ ಎರಡು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ ಟೇಕಾಫ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

