ಶ್ರೀನಗರದಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ; ತನಿಖೆಗೆ ಡಿಜಿಸಿಎ ಆದೇಶ
x
ಶ್ರೀನಗರದಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ

ಶ್ರೀನಗರದಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ; ತನಿಖೆಗೆ ಡಿಜಿಸಿಎ ಆದೇಶ

ಗುರುವಾರವಷ್ಟೇ ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಮುಖ್ಯ ಪೈಲಟ್‌ ಅಸ್ವಸ್ಥಗೊಂಡಿದ್ದರು. ಸಹ-ಪೈಲಟ್ ಕೂಡಲೇ ವಿಮಾನವನ್ನು ಮಸ್ಕತ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್‌ ಮಾಡಿದ್ದರು.


ಮುಂಬೈನಿಂದ ಕಾಶ್ಮೀರದ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ಬಳಿಕ ಪಾರ್ಕಿಂಗ್ ಬೇ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಗಂಭೀರತೆ ಪರಿಗಣಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಅಪಘಾತ ನಡೆದಿದ್ದು ಹೇಗೆ?

ನವಿ ಮುಂಬೈನಿಂದ ಶ್ರೀನಗರಕ್ಕೆ ಸಂಚರಿಸುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ ‘6ಇ 225’ (VT-NOG) ವಿಮಾನವು ನಿಗದಿತ ವೇಳಾಪಟ್ಟಿಯಂತೆ ರನ್‌ ವೇನಲ್ಲಿ ಲ್ಯಾಂಡ್ ಆಗಿತ್ತು. ಬೆಳಿಗ್ಗೆ 9 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಪಾರ್ಕಿಂಗ್ ಬೇ ಬಳಿ ವಿಮಾನವನ್ನು ಪಾರ್ಕಿಂಗ್ ಮಾಡಲು ತರುತ್ತಿದ್ದಾಗ ಕಂಬಕ್ಕೆ ವಿಮಾನದ ಒಂದು ಭಾಗ ಡಿಕ್ಕಿಯಾಗಿದೆ. ತಕ್ಷಣವೇ ಎಚ್ಚೆತ್ತ ವಿಮಾನ ನಿಲ್ದಾಣ ಸಿಬ್ಬಂದಿ ಮ್ಯಾನುಯಲ್ ಏರ್‌ಕ್ರಾಫ್ಟ್‌ ಮೆಟ್ಟಿಲುಗಳನ್ನು ಜೋಡಿಸಿ, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

24 ಗಂಟೆಗಳಲ್ಲಿ 2ನೇ ಘಟನೆ

ಗುರುವಾರಷ್ಟೇ ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ಸಂಸ್ಥೆಯ ‘6ಇ 1302’ (A321) ವಿಮಾನದ ಮುಖ್ಯ ಪೈಲಟ್‌ಗಳಲ್ಲಿ ಒಬ್ಬರು ಹಾರಾಟದ ನಡುವೆಯೇ ಅಸ್ವಸ್ಥಗೊಂಡಿದ್ದರು. ಸಹ-ಪೈಲಟ್ ವಿಮಾನವನ್ನು ತುರ್ತಾಗಿ ಓಮನ್ನ ಮಸ್ಕತ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ಲ್ಯಾಂಡಿಂಗ್‌ ಮಾಡಿದ್ದರು. ಬೆಂಗಳೂರು ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಗಿತ್ತು.

ಏನಿದು ವಿಡಿಜಿಎಸ್ ವ್ಯವಸ್ಥೆ?

ವಿಮಾನ ನಿಲ್ದಾಣದ ನಿಲುಗಡೆ ಜಾಗದಲ್ಲಿ ಪೈಲಟ್ಗೆ ವಿಮಾನವನ್ನು ನಿಖರವಾದ ಸೆಂಟರ್‌ ಲೈನ್‌ನಲ್ಲಿ ನಿಲ್ಲಿಸಲು ಮಾರ್ಗದರ್ಶನ ನೀಡುವ ಲೇಸರ್ ಮತ್ತು ಎಲೆಕ್ಟ್ರಾನಿಕ್ ಡಿಸ್ಪ್ಲೇ ಕಂಬವನ್ನು ‘ವಿಶ್ಯುವಲ್ ಡಾಕಿಂಗ್ ಗೈಡೆನ್ಸ್ ಸಿಸ್ಟಮ್’ ಎಂದು ಕರೆಯಲಾಗುತ್ತದೆ. ಈ ಘಟನೆಯು ಸಿಬ್ಬಂದಿ ನೀಡಿದ ಸೂಚನೆಯಿಂದಲೋ, ಲೇಸರ್ ಸೆನ್ಸರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಸಂಭವಿಸಿದೆಯೋ ಎಂಬುದನ್ನು ತಾಂತ್ರಿಕ ತಂಡ ತನಿಖೆ ನಡೆಸುತ್ತಿದೆ.

Read More
Next Story