
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಕ್ಕಿ ಡಿಕ್ಕಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಕ್ಕಿ ಡಿಕ್ಕಿ: ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ಇಂಡಿಗೋ ವಿಮಾನ (6E-6283) ಸಂಜೆ 7.04ಕ್ಕೆ ಬೆಂಗಳೂರಿನಿಂದ ಮುಂಬೈಗೆ ಹೊರಡಬೇಕಿತ್ತು. ವಿಮಾನವು ಟೇಕಾಫ್ ಆಗಿ ವೇಗವನ್ನು ಪಡೆದುಕೊಳ್ಳುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದ ಎಂಜಿನ್‌ಗೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ವಿಮಾನವು ವಾಪಸ್ ಆಗಮಿಸಿದ ಘಟನೆ ಇಂದು (ಜೂನ್ 6) ನಡೆದಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಪೈಲಟ್ ಕೂಡಲೇ ಎಚ್ಚೆತ್ತು ವಿಮಾನವನ್ನು ನಿಲ್ದಾಣಕ್ಕೆ ಮರಳಿಸಿದ್ದಾರೆ.
ಇಂಡಿಗೋ ವಿಮಾನ (6E-6283) ಸಂಜೆ 7.04ಕ್ಕೆ ಬೆಂಗಳೂರಿನಿಂದ ಮುಂಬೈಗೆ ಹೊರಡಬೇಕಿತ್ತು. ವಿಮಾನವು ಟೇಕಾಫ್ ಆಗಿ ವೇಗವನ್ನು ಪಡೆದುಕೊಳ್ಳುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೈಲಟ್ ಸುರಕ್ಷತಾ ದೃಷ್ಟಿಯಿಂದ ವಿಮಾನವನ್ನು ವಾಪಸ್ ವಿಮಾನ ನಿಲ್ದಾಣಕ್ಕೆ ತಂದಿಳಿಸಿದರು. ವಿಮಾನದಲ್ಲಿದ್ದ ಏರ್‌ಬಸ್ ಎ 321 ನಿಯೋ ವಿಮಾನದ ಎರಡೂ ಎಂಜಿನ್‌ಗಳನ್ನು ತಾಂತ್ರಿಕ ತಂಡ ತೀವ್ರ ತಪಾಸಣೆಗೆ ಒಳಪಡಿಸಿತು. ತಾಂತ್ರಿಕ ತಪಾಸಣೆಯ ನಂತರ ವಿಮಾನವು ಸುರಕ್ಷಿತವಾಗಿದೆ ಎಂದು ದೃಢಪಟ್ಟ ಬಳಿಕ, ರಾತ್ರಿ 8.46ಕ್ಕೆ ವಿಮಾನವು ತನ್ನ ಮುಂಬೈ ಪ್ರಯಾಣವನ್ನು ಪುನರಾರಂಭಿಸಿತು.
ಅಮೆರಿಕದಲ್ಲಿ 'ಬಾಂಬ್' ಹೆಸರಿನ ಗೊಂದಲದಿಂದ ವಿಮಾನ ವಾಪಸ್
ಇದೇ ರೀತಿಯ ಮತ್ತೊಂದು ಘಟನೆ ಅಮೆರಿಕದಲ್ಲಿ ನಡೆದಿದ್ದು, ಬ್ಲೂಟೂತ್ ಸಾಧನದ ಹೆಸರಿನಿಂದಾಗಿ ಭದ್ರತಾ ಆತಂಕ ಉಂಟಾಗಿ ವಿಮಾನವೊಂದು ತುರ್ತಾಗಿ ವಾಪಸ್ ಬಂದಿದೆ. ಮೇ 30ರಂದು ನ್ಯೂಯಾರ್ಕ್‌ನ ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೇನ್‌ನ ಪಾಲ್ಮಾ ಡಿ ಮಲ್ಲೋರ್ಕಾಗೆ ಯುನೈಟೆಡ್ ಏರ್‌ಲೈನ್ಸ್ ವಿಮಾನವು 190 ಪ್ರಯಾಣಿಕರೊಂದಿಗೆ ಹೊರಟಿತ್ತು. ಸುಮಾರು ಮೂರು ಗಂಟೆಗಳ ಪ್ರಯಾಣದ ನಂತರ, ಸಿಬ್ಬಂದಿಯೊಬ್ಬರು ಪ್ರಯಾಣಿಕರ ಬ್ಲೂಟೂತ್ ಸಾಧನಗಳನ್ನು ಪರಿಶೀಲಿಸುವಾಗ ಒಂದು ಸಾಧನಕ್ಕೆ 'ಬಾಂಬ್' ಎಂದು ಹೆಸರಿಟ್ಟಿರುವುದು ಕಂಡುಬಂದಿದೆ. ಇದರಿಂದಾಗಿ ಬಾಂಬ್ ಭೀತಿ ಉಂಟಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ವಾಪಸ್ ಕರೆಸಲಾಯಿತು. ನಂತರದ ತನಿಖೆಯಲ್ಲಿ, ಅದು 16 ವರ್ಷದ ಬಾಲಕನೊಬ್ಬ ತನ್ನ ಫಿಟ್‌ಬಿಟ್ ವಾಚ್‌ಗೆ ಇಟ್ಟಿದ್ದ ತಮಾಷೆಯ ಹೆಸರೆಂದು ತಿಳಿದುಬಂದಿದೆ. ಈ ಘಟನೆಯು ವಿಮಾನಯಾನದಲ್ಲಿ ಇಂತಹ ಸಣ್ಣ ನಿರ್ಲಕ್ಷ್ಯಗಳು ಎಷ್ಟು ದೊಡ್ಡ ಗೊಂದಲಕ್ಕೆ ಕಾರಣವಾಗಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

