
ಅಮೆರಿಕದಲ್ಲಿ ಬ್ಯಾಂಕ್ ವಂಚನೆ: 100 ಮಿಲಿಯನ್ ಡಾಲರ್ ಹಗರಣದಲ್ಲಿ ಭಾರತೀಯ-ಅಮೆರಿಕನ್ ಬಂಧನ
ಕ್ಯಾಲಿಫೋರ್ನಿಯಾದ ಕೊರೊನಾ ಡೆಲ್ ಮಾರ್‌ನಲ್ಲಿ ವಾಸಿಸುತ್ತಿದ್ದ ಆರೋಪಿ ಮಹೇಂದರ್ ಮಖಿಜಾನಿ, ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾನೆ.
ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಗೆ ಕನ್ನ ಹಾಕಿದ ಆರೋಪದ ಮೇಲೆ 44 ವರ್ಷದ ಭಾರತೀಯ-ಅಮೆರಿಕನ್ ಪ್ರಜೆಯೊಬ್ಬರನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ. ಸುಮಾರು 100 ಮಿಲಿಯನ್ ಡಾಲರ್ (ಸುಮಾರು 800 ಕೋಟಿ ರೂ.ಗೂ ಅಧಿಕ) ಮೌಲ್ಯದ ಭಾರಿ ವಂಚನೆ ಎಸಗಿದ ಆರೋಪದ ಮೇಲೆ ಮಹೇಂದರ್ ಮಖಿಜಾನಿ ಎಂಬಾತನನ್ನು ಫೆಡರಲ್ ತನಿಖಾ ಸಂಸ್ಥೆಗಳು ಬಂಧಿಸಿವೆ.
ಕ್ಯಾಲಿಫೋರ್ನಿಯಾದ ಕೊರೊನಾ ಡೆಲ್ ಮಾರ್‌ನಲ್ಲಿ ವಾಸಿಸುತ್ತಿದ್ದ ಮಹೇಂದರ್ ಮಖಿಜಾನಿ, ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯ ಮೂಲದ ವ್ಯಕ್ತಿ. ಈತ ನ್ಯೂಪೋರ್ಟ್ ಬೀಚ್ ಮೂಲದ 'ಕ್ಯಾಂಟರ್ ಗ್ರೂಪ್ ವಿ ಎಲ್‌ಎಲ್‌ಸಿ' ಎಂಬ ಕಂಪನಿಯನ್ನು ನಿಯಂತ್ರಿಸುತ್ತಿದ್ದ. ಈ ಕಂಪನಿಯು ಬ್ಯಾಂಕ್ ಒಂದರೊಂದಿಗೆ ಸಾಲ ನೀಡುವ ವ್ಯವಹಾರವನ್ನು ಹೊಂದಿತ್ತು. ಸೆಂಟ್ರಲ್ ಡಿಸ್ಟ್ರಿಕ್ಟ್ ಆಫ್ ಕ್ಯಾಲಿಫೋರ್ನಿಯಾದ ಮೊದಲ ಸಹಾಯಕ ಅಮೆರಿಕನ್ ಅಟಾರ್ನಿ ಬಿಲಾಲ್ ಎಸ್ಸೇಲಿ ಅವರು ಈ ಬಂಧನದ ಕುರಿತು ಮಾಹಿತಿ ನೀಡಿದ್ದು, ಮಖಿಜಾನಿ ಮೇಲೆ ಫೆಡರಲ್ ಕ್ರಿಮಿನಲ್ ದೂರು ದಾಖಲಾಗಿದೆ. ಆರೋಪ ಸಾಬೀತಾದಲ್ಲಿ ಮಖಿಜಾನಿಗೆ ಗರಿಷ್ಠ 30 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂಬುದು ಕಾನೂನು ತಜ್ಞರು ಅಭಿಪ್ರಾಯವಾಗಿದೆ.
ವಂಚನೆಯ ಜಾಲ
ಮಖಿಜಾನಿ ತನ್ನ ವಂಚನೆಯನ್ನು ಅತ್ಯಂತ ಯೋಜಿತ ರೀತಿಯಲ್ಲಿ ನಡೆಸಿದ್ದ. ಬ್ಯಾಂಕ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ, ರಿಯಲ್ ಎಸ್ಟೇಟ್ ಆಸ್ತಿಯನ್ನು ಅಡಮಾನವಾಗಿ ಇರಿಸಿಕೊಂಡು ಸಾಲ ನೀಡುವ ಅಥವಾ ಖರೀದಿಸುವ ಉದ್ದೇಶದಿಂದ ಬ್ಯಾಂಕ್ ಮಖಿಜಾನಿಯ ಕಂಪನಿಗೆ ಸುಮಾರು 100 ಮಿಲಿಯನ್ ಡಾಲರ್ ಸಾಲ ನೀಡಿತ್ತು. ಈ ಸಾಲಕ್ಕೆ ಅಡಮಾನವಾಗಿ ಪಡೆದ ಆಸ್ತಿಗಳ ದಾಖಲೆಗಳನ್ನು ಮಖಿಜಾನಿ ತಿರುಚಿದ್ದ ಎಂದು ಹೇಳಲಾಗಿದೆ. 2024ರ ಸೆಪ್ಟೆಂಬರ್‌ನಿಂದ 2025ರ ಏಪ್ರಿಲ್ ನಡುವೆ, ಮಖಿಜಾನಿ ತನ್ನ ಕಂಪನಿಯು ಆಸ್ತಿಯ ಮೇಲೆ ಫಸ್ಟ್ ಲಿಯನ್ (ಸಾಲ ತೀರಿಸದಿದ್ದಲ್ಲಿ ಆಸ್ತಿಯ ಮೇಲೆ ಮೊದಲ ಹಕ್ಕು) ಸ್ಥಾನದಲ್ಲಿದೆ ಎಂದು ತೋರಿಸಲು ಟೈಟಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ನಕಲಿ ಮಾಡಿದ್ದನು. ಹಣವನ್ನು ಬೇರೆ ಬೇರೆ ಕಡೆ ವರ್ಗಾಯಿಸಲು ಮತ್ತು ಬ್ಯಾಂಕ್ ಅಧಿಕಾರಿಗಳನ್ನು ದಾರಿತಪ್ಪಿಸಲು ತನ್ನದೇ ಆದ ಅನೇಕ ಶೆಲ್ ಕಂಪನಿಗಳನ್ನು ಬಳಸಿಕೊಂಡಿದ್ದನು. ಬ್ಯಾಂಕ್ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದಾಗಲೂ, ಆಸ್ತಿ ದಾಖಲೆಗಳ ಬಗ್ಗೆ ಇದ್ದ ಸಂದೇಹಗಳನ್ನು ನಿವಾರಿಸುವ ನೆಪದಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಐಆರ್‌ಎಸ್ ತನಿಖೆಯ ಮಹತ್ವ
ಐಆರ್‌ಎಸ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ವಿಭಾಗದ ಲಾಸ್ ಏಂಜಲೀಸ್ ಫೀಲ್ಡ್ ಆಫೀಸ್‌ನ ವಿಶೇಷ ಏಜೆಂಟ್ ಡ್ಯಾರೆನ್ ಲಿಯಾನ್ ಈ ಪ್ರಕರಣದ ತನಿಖೆಯನ್ನು ಮುನ್ನಡೆಸಿದ್ದಾರೆ. ನಮ್ಮ ತಂಡವು ಹಣದ ಹರಿವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪ್ರತಿ ಹಂತದಲ್ಲೂ ವಂಚನೆ ನಡೆದಿರುವುದು ಕಂಡುಬಂದಿದೆ. ಸಂಕೀರ್ಣ ವರ್ಗಾವಣೆಗಳು ಮತ್ತು ನಕಲಿ ಖಾತೆಗಳ ಮೂಲಕ ಸಾರ್ವಜನಿಕ ಹಣವನ್ನು ದೋಚಲು ಮಖಿಜಾನಿ ಪ್ರಯತ್ನಿಸಿದ್ದಾನೆ ಎಂದು ಲಿಯಾನ್ ಹೇಳಿದ್ದಾರೆ. ಈ ಬಂಧನವು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಫೆಡರಲ್ ತನಿಖಾ ಸಂಸ್ಥೆಗಳ ಕಠಿಣ ನಿಲುವನ್ನು ಪ್ರತಿಬಿಂಬಿಸುತ್ತದೆ. ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ದಾಖಲೆಗಳನ್ನು ತಿರುಚಿ, ಹಣಕಾಸು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡರೆ ಅಂತಹವರನ್ನು ಕಾನೂನಿನ ಮುಂದೆ ನಿಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಅಮೆರಿಕದ ಬ್ಯಾಂಕಿಂಗ್ ಕಾನೂನುಗಳು ಅತ್ಯಂತ ಕಠಿಣವಾಗಿವೆ. ಮಖಿಜಾನಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ದೂರಿನಲ್ಲಿ, ಆತ ಉದ್ದೇಶಪೂರ್ವಕವಾಗಿ ಬ್ಯಾಂಕನ್ನು ವಂಚಿಸಿರುವುದು ಮತ್ತು ತಪ್ಪು ಮಾಹಿತಿಯನ್ನು ನೀಡಿರುವುದು ಸಾಬೀತಾಗಿದೆ. ಈ ಪ್ರಕರಣವು ಅಮೆರಿಕದ ಆರ್ಥಿಕ ಭದ್ರತೆಯ ಮೇಲೆ ಪ್ರಭಾವ ಬೀರುವ ಗಂಭೀರವಾದ 'ವೈಟ್ ಕಾಲರ್ ಕ್ರೈಮ್' ಎಂದು ಪರಿಗಣಿಸಲ್ಪಟ್ಟಿದೆ. ಸದ್ಯ ಮಖಿಜಾನಿ ಅವರ ಕಂಪನಿಯ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದ್ದು, ಬ್ಯಾಂಕ್ ಕಳೆದುಕೊಂಡಿರುವ ಆ ಹಣವನ್ನು ವಸೂಲಿ ಮಾಡಲು ತನಿಖಾ ಸಂಸ್ಥೆಗಳು ಮುಂದಾಗಿವೆ. ಈ ಪ್ರಕರಣವು ಅಮೆರಿಕದಲ್ಲಿ ವಾಸಿಸುವ ಅನಿವಾಸಿ ಭಾರತೀಯ ಸಮುದಾಯದ ಘನತೆಗೂ ಧಕ್ಕೆ ತರುವಂತಹದ್ದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

