
ಆಕಾಶದ ಅದ್ಭುತ ಸೂರ್ಯಕಿರಣ್: 30ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಭಾರತೀಯ ವಾಯುಪಡೆ
ಮೂರು ದಶಕಗಳಲ್ಲಿ ಆಕಾಶದಲ್ಲಿ ಬರೆದ ಸಾಹಸಗಾಥೆಗಳು ವರ್ಣನಾತೀತ. ವಾಯುಪಡೆಯ ರಾಯಭಾರಿಗಳು ಎಂದೇ ಖ್ಯಾತಿಯಾಗಿರುವ ಈ ತಂಡವು, ದೇಶ-ವಿದೇಶಗಳಲ್ಲಿ ತನ್ನ ಅದ್ಭುತ ಕೌಶಲ್ಯದಿಂದ ಲಕ್ಷಾಂತರ ಜನರ ಮನಗೆದ್ದಿದೆ.
ಭಾರತೀಯ ವಾಯುಪಡೆಯ ಶೌರ್ಯ, ಶಿಸ್ತು ಮತ್ತು ಕೌಶಲ್ಯದ ಸಂಕೇತವಾಗಿರುವ 'ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ' ತನ್ನ ಅಸ್ತಿತ್ವದ 30ನೇ ವಸಂತವನ್ನು ಸಂಭ್ರಮಿಸುತ್ತಿದೆ. ಮೇ 26ರಂದು ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪುತ್ತಿರುವ ಸೂರ್ಯಕಿರಣ್ ತಂಡ, ಕಳೆದ ಮೂರು ದಶಕಗಳಲ್ಲಿ ಆಕಾಶದಲ್ಲಿ ಬರೆದ ಸಾಹಸಗಾಥೆಗಳು ವರ್ಣನಾತೀತ. ಭಾರತೀಯ ವಾಯುಪಡೆಯ ರಾಯಭಾರಿಗಳು ಎಂದೇ ಖ್ಯಾತಿಯಾಗಿರುವ ಈ ತಂಡವು, ದೇಶ-ವಿದೇಶಗಳಲ್ಲಿ ತನ್ನ ಅದ್ಭುತ ಕೌಶಲ್ಯದಿಂದ ಲಕ್ಷಾಂತರ ಜನರ ಮನಗೆದ್ದಿದೆ.
ಸೂರ್ಯನ ಕಿರಣಗಳು ಎಂಬ ಅರ್ಥವನ್ನು ಹೊತ್ತ ಸೂರ್ಯಕಿರಣ್ ತಂಡವು 1996ರ ಮೇ 27ರಂದು ರಾಜ್ಯದ ಬೀದರ್ ವಾಯುನೆಲೆಯಲ್ಲಿ ಸ್ಥಾಪನೆಯಾಯಿತು. ಆರಂಭಿಕ ದಿನಗಳಲ್ಲಿ ಕಿರಣ್ ಎಂಕೆ-II ವಿಮಾನಗಳನ್ನು ಬಳಸಿ ತರಬೇತಿ ಪಡೆದ ತಂಡ, ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಕೊಯಮತ್ತೂರಿನಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿತು. ಅಂದಿನಿಂದ ಪ್ರಾರಂಭವಾದ ಈ ಪಯಣ, ಅಪ್ರತಿಮ ನಿಖರತೆ ಮತ್ತು ಸಾಹಸಮಯ ಕೌಶಲ್ಯದ ಮೂಲಕ ಇಂದು ಜಗತ್ತಿನ ಅತ್ಯುತ್ತಮ ಏರೋಬ್ಯಾಟಿಕ್ ತಂಡಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು
ಸೂರ್ಯಕಿರಣ್ ತಂಡವು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಕಳೆದ 30 ವರ್ಷಗಳಲ್ಲಿ ಸುಮಾರು 800ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡುವ ಮೂಲಕ ತನ್ನ ಛಾಪು ಮೂಡಿಸಿದೆ. ಚೀನಾ, ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್, ಸಿಂಗಾಪುರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯ ವಾಯುಪಡೆಯ ಶಕ್ತಿಯನ್ನು ಪ್ರದರ್ಶಿಸಿದೆ. ವಿದೇಶಿ ಮಣ್ಣಿನಲ್ಲಿ ಭಾರತದ ಧ್ವಜವನ್ನು ಹೊತ್ತು ಹಾರಾಡುವಾಗ ಈ ತಂಡವು ವಹಿಸುವ ಮುತುವರ್ಜಿ ಮತ್ತು ನಿಖರತೆ, ದೇಶದ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವಲ್ಲಿಯೂ ಸಹಕಾರಿಯಾಗಿದೆ.
ತಂಡದ ಯಶಸ್ಸಿನ ಹಿಂದೆ ಆಧುನಿಕ ತಂತ್ರಜ್ಞಾನದ ಬಳಕೆಯೂ ಇದೆ. 2015ರಿಂದೀಚೆಗೆ, ತಂಡವು ಅತ್ಯಾಧುನಿಕ 'ಹಾಕ್ ಎಂಕೆ-132 ವಿಮಾನಗಳನ್ನು ಬಳಸುತ್ತಿದೆ. ಕೆಂಪು ಮತ್ತು ಬಿಳಿ ಬಣ್ಣದ ಈ ವಿಮಾನಗಳು ಒಂಬತ್ತರ ಗುಂಪಿನಲ್ಲಿ ಆಕಾಶದಲ್ಲಿ ಹಾರಾಡುವ ದೃಶ್ಯವು ಕಣ್ಣಿಗೆ ಹಬ್ಬದಂತಿರುತ್ತದೆ. ಈ ವಿಮಾನಗಳ ವೇಗ, ಚಲನಶೀಲತೆ ಮತ್ತು ಅವುಗಳ ನಿರ್ವಹಣೆಯಲ್ಲಿರುವ ನಿಖರತೆ ಎಸ್‌ಕೆಎಟಿನ ಸಾಹಸಗಳಿಗೆ ಬಲ ತುಂಬಿದೆ.
ಕಠಿಣ ತರಬೇತಿ ಹಾಗೂ ಶಿಸ್ತು
ಒಂಬತ್ತು ವಿಮಾನಗಳು ಕೇವಲ ಒಂದೆರಡು ಅಡಿಗಳ ಅಂತರದಲ್ಲಿ, ಅತೀ ಕಡಿಮೆ ಎತ್ತರದಲ್ಲಿ ಅತ್ಯಂತ ವೇಗವಾಗಿ ಹಾರಾಟ ನಡೆಸುವಾಗ ಬೇಕಾಗುವ ಏಕಾಗ್ರತೆ ಮತ್ತು ಸಮನ್ವಯವು ಅಸಾಧಾರಣವಾದದ್ದು. ಇದಕ್ಕಾಗಿ ಪೈಲಟ್‌ಗಳು ಅತ್ಯಂತ ಕಠಿಣ ಮತ್ತು ತೀವ್ರವಾದ ತರಬೇತಿಯನ್ನು ಪಡೆಯುತ್ತಾರೆ. ಪ್ರತಿ ಮನೋವರ್ ಅಥವಾ ಸಾಹಸದ ಹಿಂದೆಯೂ ನೂರಾರು ಗಂಟೆಗಳ ಅಭ್ಯಾಸ ಮತ್ತು ನಿರಂತರವಾದ ವಿಶ್ಲೇಷಣೆ ಇರುತ್ತದೆ. ಪೈಲಟ್‌ಗಳ ನಡುವಿನ ಪರಸ್ಪರ ನಂಬಿಕೆ ಮತ್ತು ಸಂವಹನವೇ ಈ ತಂಡದ ಬಲ. ಪ್ರತಿಯೊಬ್ಬ ಪೈಲಟ್‌ನ ಚಲನವಲನಗಳು ಮತ್ತೊಬ್ಬ ಪೈಲಟ್‌ಗೆ ಸಂಪೂರ್ಣವಾಗಿ ತಿಳಿದಿರಬೇಕು. ಆಗಲೇ ಅಂತಹ ಭವ್ಯವಾದ ಏರೋಬ್ಯಾಟಿಕ್ ಪ್ರದರ್ಶನ ಸಾಧ್ಯ.
30ನೇ ವರ್ಷದ ಸಂಭ್ರಮ
ಬೀದರ್ ವಾಯುನೆಲೆಯಲ್ಲಿ ನಡೆಯಲಿರುವ 30ನೇ ವಾರ್ಷಿಕೋತ್ಸವದ ಆಚರಣೆಯು ಕೇವಲ ಒಂದು ಉತ್ಸವವಲ್ಲ, ಇದು ಭಾರತೀಯ ವಾಯುಪಡೆಯ ಸಾಹಸ ಮನೋಭಾವಕ್ಕೆ ಸಲ್ಲಿಸುವ ನಮನ. ದಶಕಗಳ ಕಾಲ ದೇಶಕ್ಕಾಗಿ ದುಡಿದ ಎಲ್ಲ ಪೈಲಟ್‌ಗಳು, ತಾಂತ್ರಿಕ ಸಿಬ್ಬಂದಿ ಮತ್ತು ಬೆಂಬಲ ತಂಡದ ಸದಸ್ಯರ ಪರಿಶ್ರಮವೇ ಇಂದು ಸೂರ್ಯಕಿರಣ್ ತಂಡವನ್ನು ವಿಶ್ವದ ದರ್ಜೆಯನ್ನಾಗಿ ರೂಪಿಸಿದೆ. ಹೊಸ ಪೀಳಿಗೆಯ ಯುವಕರಿಗೆ ವಾಯುಪಡೆಯತ್ತ ಆಕರ್ಷಿತರಾಗಲು ಮತ್ತು ದೇಶ ಸೇವೆಗೆ ಧುಮುಕಲು ಸೂರ್ಯಕಿರಣ್ ತಂಡವು ದೊಡ್ಡ ಸ್ಪೂರ್ತಿಯ ಸೆಲೆಯಾಗಿದೆ.
ಸೂರ್ಯಕಿರಣ್ ಏರೋಬ್ಯಾಟಿಕ್ ತಂಡವು ಭಾರತೀಯ ವಾಯುಪಡೆಯ ಅತ್ಯಂತ ಅಮೂಲ್ಯವಾದ ಆಸ್ತಿ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಸಾಹಸಗಳೊಂದಿಗೆ, ತಾಂತ್ರಿಕ ನಾವೀನ್ಯತೆಗಳೊಂದಿಗೆ ಈ ತಂಡವು ಆಕಾಶದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವುದರಲ್ಲಿ ಸಂಶಯವಿಲ್ಲ. ಮೂರು ದಶಕಗಳ ಪಯಣವು ಯಶಸ್ಸಿನ ಶಿಖರವನ್ನು ಏರಿದೆ, ಮತ್ತು ಈ ಸಂಭ್ರಮವು ಮುಂಬರುವ ದಿನಗಳಿಗೆ ಹೊಸ ಭರವಸೆಯನ್ನು ನೀಡಿದೆ.

