ಸ್ವಾತಂತ್ರ್ಯೋತ್ಸವದಲ್ಲಿ ನವ ಕರ್ನಾಟಕ ಸಂಕಲ್ಪ; ಕಾವೇರಿ ಕಾಡಲ್ಲಿ ಎನ್‌ಕೌಂಟರ್; ಮರಳಿ ಬಂದ ‘ಟೈಮ್‌ಕೀಪರ್’ ಗತವೈಭವ
ವಿಧಾನಸೌಧದಲ್ಲಿ ನಡೆದ ಫ್ರೀಡಂ ಹಬ್ಬದ ವೇಳೆ ಕಲಾ ಸಂಸ್ಕೃತಿಯ ಅನಾವರಣಗೊಂಡಿತು; ಕಾವೇರಿ ಕಾಡಲ್ಲಿ ಗುಂಡಿನ ಸದ್ದು ನಡೆದಿದೆ; ಜಾಲಹಳ್ಳಿಯಲ್ಲಿ ಎಚ್‌ಎಂಟಿಗೆ ಖರೀದಿಗೆ ಜನಸಾಗರ
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ವೇದಿಕೆಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಗೆ ಹಲವು ಹೊಸ ಯೋಜನೆಗಳ ಘೋಷಣೆಗಳನ್ನು ಮಾಡಿದ್ದಾರೆ.
ಈಗಾಗಲೇ ಮಾಡಿರುವ ಕೆಲಸಗಳಿಂದ ನಾನು ಮತ್ತು ನಮ್ಮ ಸರ್ಕಾರ ತೃಪ್ತಿಪಡುವುದಿಲ್ಲ. ವರ್ತಮಾನವನ್ನು ಭವಿಷ್ಯಕ್ಕೆ ಬೇಕಾದಂತೆ ರೂಪಿಸಬೇಕು ಎಂಬುದು ನನ್ನ ತೀರ್ಮಾನ. ಈ ದಿಕ್ಕಿನಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಈ ಸ್ವಾತಂತ್ರ್ಯ ದಿನದ ವೇದಿಕೆಯಲ್ಲಿ ನಿಂತು ಘೋಷಿಸುತ್ತಿದ್ದೇನೆ ಎಂದು ಹೊಸ ಯೋಜನೆಗಳನ್ನು ಅನಾವರಣಗೊಳಿಸಿದ್ದಾರೆ.
"ಯುವ ಉದ್ಯೋಗ ಸೇತು" ಎಂಬ ಹೊಸ ಯೋಜನೆ ಆರಂಭಿಸುವುದಾಗಿ ಘೋಷಿಸಿದ್ದಾರೆ. ಖಾಸಗಿ ವಲಯದಲ್ಲಿರುವ ಉದ್ಯೋಗದ ಅವಕಾಶಗಳನ್ನು ಯುವ ಜನರಿಗೆ ತಲುಪಿಸಲು ಸಮಗ್ರ ತಂತ್ರಾಂಶ ರೂಪಿಸಲಾಗುವುದು. ಈ ತಂತ್ರಾಂಶ ಉದ್ಯೋಗ ಹುಡುಕುವವರು, ಉದ್ಯೋಗ ನೀಡುವವರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರಲಿದೆ. 100 ಸರ್ಕಾರಿ ITI ಗಳನ್ನು ಉದ್ಯೋಗ ಆಧಾರಿತ ಕ್ಯಾಂಪಸ್‌ಗಳಾಗಿ ಬದಲಿಸಲಾಗುವುದು. ಖಾಸಗಿ ಕೈಗಾರಿಕೆಗಳ ಸಹಯೋಗದಲ್ಲಿ 10,000 ಯುವಕರಿಗೆ ಉದ್ಯೋಗದ ಅವಕಾಶ ಕಲ್ಪಿಸಲಾಗುವುದು ಎಂದು ಘೋಷಿಸಿದರು.
ಇನ್ನು, ಸ್ವಾತಂತ್ರ್ಯದ 80ನೇ ವರ್ಷದ ಸಂಭ್ರಮವು ದೇಶಾದ್ಯಂತ ಹೊಸ ಹುರುಪು ತಂದಿದೆ. ರಾಜಧಾನಿ ಬೆಂಗಳೂರು ಈ ಐತಿಹಾಸಿಕ ಕ್ಷಣವನ್ನು ಕೇವಲ ಧ್ವಜಾರೋಹಣಕ್ಕೆ ಸೀಮಿತಗೊಳಿಸದೆ, ಜನಸಾಮಾನ್ಯರನ್ನು ಒಳಗೊಂಡ 'ಫ್ರೀಡಂ ಹಬ್ಬ'ದ ಮೂಲಕ ಸಡಗರದಿಂದ ಆಚರಿಸುತ್ತಿದೆ. ನಾಡಿನ ಅಸ್ಮಿತೆಯ ಪ್ರತೀಕವಾದ ವಿಧಾನಸೌಧದ ಅಂಗಳವು ಇಂದು ದೇಶಭಕ್ತಿಯ ಸಾಕಾರರೂಪವಾಗಿ ಮಾರ್ಪಟ್ಟಿದೆ. 10 ಗಂಟೆಗಳ ಕಾಲ ಸತತವಾಗಿ ನಡೆಯಲಿರುವ ಈ ವೈವಿಧ್ಯಮಯ ಕಾರ್ಯಕ್ರಮವು ಕಲೆ, ಸಂಸ್ಕೃತಿ ಮತ್ತು ದೇಶಪ್ರೇಮದ ಅಪೂರ್ವ ಸಂಗಮವಾಗಿದೆ. ಬೆಳಗ್ಗೆಯಿಂದಲೇ ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ರಸ್ತೆಯು ವಿದ್ಯುತ್ ದೀಪಾಲಂಕಾರ ಮತ್ತು ವರ್ಣರಂಜಿತ ತೋರಣಗಳಿಂದ ಸಿಂಗಾರಗೊಂಡಿದೆ. ಬೃಹತ್ ಎಲ್‌ಇಡಿ ಪರದೆಗಳು, ಅಂಬೇಡ್ಕರ್ ವಿಧಿ ರಸ್ತೆಯ ಉದ್ದಕ್ಕೂ ತೆರೆದಿರುವ 120ಕ್ಕೂ ಹೆಚ್ಚು ಮಳಿಗೆಗಳು, ಮತ್ತು ಸಾಂಸ್ಕೃತಿಕ ತಂಡಗಳ ಸಿದ್ಧತೆಗಳು ಹಬ್ಬದ ವಾತಾವರಣವನ್ನು ನಿರ್ಮಿಸಿವೆ. ಗ್ರೇಟರ್‌ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ನಡೆದ ಅದ್ದೂರಿ ಸಿದ್ಧತೆಗಳು, ಸ್ವಾತಂತ್ರ್ಯ ಎಂಬುದು ಕೇವಲ ಸರ್ಕಾರಿ ಆಚರಣೆಯಲ್ಲ, ಅದು ನಾಗರಿಕರ ಹಬ್ಬ ಎಂಬುದನ್ನು ಸಾರುತ್ತಿವೆ.
ಹನೂರು ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿ ತೀವ್ರ ಸಂಚಲನ ಮೂಡಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ತೋಮಿಯರ್ ಪಾಳ್ಯ ಗ್ರಾಮದ ಅಂತೋನಿಸ್ವಾಮಿ, ಪೀಟರ್ ಮತ್ತು ಕುಮಾರ್ ಎಂಬುವವರು ಮೃತಪಟ್ಟಿದ್ದಾರೆ. ಈ ಘಟನೆಯು ಕಳ್ಳ ಬೇಟೆ ತಡೆಗೆ ಅರಣ್ಯ ಇಲಾಖೆ ಕೈಗೊಂಡ ಕ್ರಮ ಮತ್ತು ಅದಕ್ಕೆ ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ಪ್ರತಿರೋಧದ ನಡುವಿನ ಸಂಘರ್ಷ ಚರ್ಚೆಗೆ ಗ್ರಾಸವಾಗಿದೆ.
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಬೆಳಗಿನ ಜಾವ ಶಾಗ್ಯ ಬೀಟ್ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ, ಅಕ್ರಮವಾಗಿ ಕಾಡಿಗೆ ಪ್ರವೇಶಿಸಿ ವನ್ಯಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದ ಶಂಕಿತರ ಗುಂಪನ್ನು ಗಮನಿಸಿದ್ದಾರೆ. ಸಿಬ್ಬಂದಿ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಸೂಚಿಸಿದಾಗ, ಶಂಕಿತರು ತಮ್ಮ ಬಳಿಯಿದ್ದ ನಾಡಬಂದೂಕುಗಳಿಂದ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಎನ್‌ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆ, ತೋಮಿಯರ್ ಪಾಳ್ಯದ ಗ್ರಾಮಸ್ಥರು ಮತ್ತು ಮೃತರ ಸಂಬಂಧಿಕರು ಆಕ್ರೋಶದ ಕಟ್ಟೆಯೊಡೆದರು. ಶಾಗ್ಯ ಡಿಆರ್‌ಎಫ್‌ಒ ಕಚೇರಿಯ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಗ್ರಾಮಸ್ಥರ ವಾದದ ಪ್ರಕಾರ, ಮೃತಪಟ್ಟವರು ಕಳ್ಳ ಬೇಟೆಗಾರರಲ್ಲ, ಅವರು ದನ ಮೇಯಿಸುವವರು ಅಥವಾ ಕೃಷಿಕರು. ಅವರು ಬೇಟೆಯಾಡಲು ಹೋಗಿರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿಯನ್ನೇ ಮಾಡರಲಿಲ್ಲ. ಆದರೂ ಸಹ ಪ್ರತಿ ದಾಳಿಯ ಹೆಸರಿನಲ್ಲಿ ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ ಒಂದು ವೇಳೆ ಅವರು ಅಕ್ರಮವಾಗಿ ಪ್ರವೇಶಿಸಿದ್ದರೂ, ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕಿತ್ತೇ ಹೊರತು, ನೇರವಾಗಿ ಗುಂಡಿಕ್ಕಿ ಕೊಲ್ಲುವ ಅಗತ್ಯವಿರಲಿಲ್ಲ. ಘಟನೆಯ ಕುರಿತು ನಿವೃತ್ತ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥ ಅರಣ್ಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಎಚ್‌ಎಂಟಿ ವಾಚ್‌ಗಾಗಿ ಸರತಿ ಸಾಲು
ದೇಶದ ಹೆಮ್ಮೆಯ ಬ್ರ್ಯಾಂಡ್ ಹಾಗೂ 'ಭಾರತದ ಕಾಲಪಾಲಕ' ಎಂದೇ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿರುವ ಹೆಚ್‌ಎಂಟಿ (HMT) ವಾಚ್‌ಗಳ ಕ್ರೇಜ್ ಕನ್ನಡಿಗರಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರಲ್ಲಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದಕ್ಕೆ ಜ್ವಲಂತ ಸಾಕ್ಷಿಯಾಗಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಔಟ್‌ಲೆಟ್ ಮುಂಭಾಗ ಕಂಡುಬಂದ ಜನಸಾಗರವೇ ಕನ್ನಡಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹೆಚ್‌ಎಂಟಿ ಸಂಸ್ಥೆಯು ಮಾರುಕಟ್ಟೆಗೆ ಪರಿಚಯಿಸಿರುವ ವಿಶೇಷ ಸರಣಿಯ ಕೈಗಡಿಯಾರಗಳನ್ನು ಹೇಗಾದರೂ ಮಾಡಿ ತಮ್ಮದಾಗಿಸಿಕೊಳ್ಳಬೇಕು ಎಂಬ ಹಂಬಲದಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮುಗಿಬಿದ್ದಿದ್ದಾರೆ.
ಮುಂಜಾನೆಯ ಜಾಲಹಳ್ಳಿಯ ವಾತಾವರಣವು ಸಂಪೂರ್ಣವಾಗಿ ಹೆಚ್‌ಎಂಟಿ ವಾಚ್ ಪ್ರಿಯರ ಉತ್ಸಾಹದಿಂದ ಕಳೆಗಟ್ಟಿತ್ತು. ಈ ಲಿಮಿಟೆಡ್ ಎಡಿಷನ್ ವಾಚ್‌ಗಳಿಗಾಗಿ ಜನರು ಬರೋಬ್ಬರಿ ಎರಡು ಕಿಲೋಮೀಟರ್‌ಗಳಿಗೂ ಹೆಚ್ಚು ಉದ್ದದ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯವು ನೋಡುಗರನ್ನು ಬೆರಗುಗೊಳಿಸಿತು. ಕೇವಲ ಹಿರಿಯರು ಮಾತ್ರವಲ್ಲದೆ, ಇಂದಿನ ಸ್ಮಾರ್ಟ್‌ವಾಚ್ ಯುಗದ ಯುವಕರು ಹಾಗೂ ದೇಶ-ವಿದೇಶಗಳ ವಾಚ್ ಸಂಗ್ರಹಕಾರರು ಸಹ ಗಂಟೆಗಟ್ಟಲೆ ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ಕಾಯುತ್ತಿದ್ದರು.

