
ವಿದ್ಯಾರ್ಥಿಗಳ ಪ್ರತಿಭಟನೆ ಜೋರು - 18 ಬೇಡಿಕೆಗಳಿಗೆ ಒಪ್ಪುತ್ತಾ ಐಐಟಿ ಬಾಂಬೆ?
ಸೆಪ್ಟೆಂಬರ್ 18ರ ಸಂಜೆ 20 ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕಾವು ಜೋರಾಗಿದೆ.
ಐಐಟಿ ಬಾಂಬೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಭಾನುವಾರ ತಡರಾತ್ರಿ ಹೊಸ ತಿರುವು ಸಿಕ್ಕಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಮುಂದಿಟ್ಟಿದ್ದ 18 ಅಂಶಗಳ ಬೇಡಿಕೆಗಳ ಪಟ್ಟಿಯನ್ನು ಪರಿಗಣಿಸಲು ಸಂಸ್ಥೆಯ ಆಡಳಿತ ಒಪ್ಪಿಗೆ ಸೂಚಿಸಿದೆ. ವಿದ್ಯಾರ್ಥಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಐಐಟಿ ಬಾಂಬೆ ನಿರ್ದೇಶಕ ಪ್ರೊ. ಶಿರೀಷ್ ಕೇದಾರೆ ಅವರು ಬೇಡಿಕೆಗಳ ಪಟ್ಟಿಗೆ ಸಹಿ ಹಾಕಿದ್ದಾರೆ.
ಸೆಪ್ಟೆಂಬರ್ 18ರ ಸಂಜೆ 20 ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ಆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅದರ ಹೊಣೆಯನ್ನು ಸಂಸ್ಥೆಯೇ ಹೊತ್ತುಕೊಳ್ಳಬೇಕು ಎಂಬ ಬೇಡಿಕೆ ಜೋರಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಸಂಸ್ಥೆಯ ಮುಖ್ಯ ದ್ವಾರದ ಬಳಿ ಧರಣಿ ನಡೆಸುತ್ತಿದ್ದರು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಲ್ಲಿ, ವಾಕೋಡೆ ಆತ್ಮಹತ್ಯೆಗೂ ಮುನ್ನ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಣೆ ನಡೆಸಿದ್ದ ಪ್ರಾಧ್ಯಾಪಕ ಸೂರ್ಯನಾರಾಯಣ ದೂಳ್ಳಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದೆ. ಈ ವಿಚಾರವನ್ನು ವಿದ್ಯಾರ್ಥಿಗಳು ಸಭೆಯಲ್ಲಿ ಪ್ರಸ್ತಾಪಿಸಿದಾಗ, ನಿರ್ದೇಶಕ ಕೇದಾರೆ ಅವರು ಸಂಸ್ಥೆ “ನಿಗದಿತ ಪ್ರಕ್ರಿಯೆಯಂತೆ ಮುಂದುವರಿಯಲಿದೆ” ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯ ಬಳಿಕ 18 ಅಂಶಗಳ ಬೇಡಿಕೆಗಳ ಪಟ್ಟಿಗೆ ಸಹಿ ಹಾಕಲಾಗಿದೆ. ಆದರೆ, ಇದರಿಂದ ಪ್ರತಿಯೊಂದು ಬೇಡಿಕೆಯ ಮೇಲೂ ತಕ್ಷಣವೇ ನಿರ್ಧಾರ ಕೈಗೊಳ್ಳಲಾಗಿದೆ ಎಂದರ್ಥವಲ್ಲ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
18 ಅಂಶಗಳ ಬೇಡಿಕೆಗಳೇನು?
ವಾಕೋಡೆ ಸಾವಿನ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಸೆಪ್ಟೆಂಬರ್ 30ರೊಳಗೆ ಮಧ್ಯಂತರ ವರದಿ ಹಾಗೂ ಅಕ್ಟೋಬರ್ 15ರೊಳಗೆ ಅಂತಿಮ ವರದಿ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ನಿರ್ದೇಶಕರು, ವಿದ್ಯಾರ್ಥಿ ವ್ಯವಹಾರಗಳ ಡೀನ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಮುಕ್ತ ಸಭೆ ನಡೆಸಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಗಿದೆ.
ಇದರ ಜೊತೆಗೆ ಪ್ರಾಧ್ಯಾಪಕರಿಗೆ ನೀತಿ ಸಂಹಿತೆ ರೂಪಿಸುವುದು, ಬೋಧಕ ಮತ್ತು ಸಿಬ್ಬಂದಿಗೆ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ತರಬೇತಿ ನೀಡುವುದು, ನೇರ ಸಮಾಲೋಚನಾ ಸೇವೆಗಳನ್ನು ಸುಧಾರಿಸುವುದು, ಶಿಸ್ತು ಕ್ರಮ ಸಮಿತಿಯ ಕಾರ್ಯವಿಧಾನದಲ್ಲಿ ಬದಲಾವಣೆ ತರುವುದು ಹಾಗೂ ಸಂಸ್ಥೆಯ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಹೆಚ್ಚಿನ ಪ್ರತಿನಿಧಿತ್ವ ಕಲ್ಪಿಸುವ ಬೇಡಿಕೆಗಳೂ ಇವೆ.
ವಿದ್ಯಾರ್ಥಿಗಳ ಮಾನಸಿಕ ಒತ್ತಡ ಹಾಗೂ ಸಮಸ್ಯೆಗಳನ್ನು ಪರಿಶೀಲಿಸಲು ವಿದ್ಯಾರ್ಥಿಗಳು, ಬೋಧಕರು, ಮಾನಸಿಕ ಆರೋಗ್ಯ ತಜ್ಞರು ಮತ್ತು ಬಾಹ್ಯ ತಜ್ಞರನ್ನು ಒಳಗೊಂಡ ಕಾರ್ಯಪಡೆ ರಚಿಸಬೇಕು ಎಂದು ಆಗ್ರಹಿಸಲಾಗಿದೆ.
ಸಂಸ್ಥೆಯ ಆಸ್ಪತ್ರೆಯಲ್ಲಿ 24 ಗಂಟೆಗಳ ಮನೋವೈದ್ಯರ ಸೇವೆ ಸೇರಿದಂತೆ ಮಾನಸಿಕ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಬೇಕು. ಸೆಪ್ಟೆಂಬರ್ 26ರೊಳಗೆ ಬೇಡಿಕೆಗಳ ಅನುಷ್ಠಾನದ ಕುರಿತು ಲಿಖಿತ ಯೋಜನೆ ನೀಡಬೇಕು. ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ಭರವಸೆಯನ್ನೂ ವಿದ್ಯಾರ್ಥಿಗಳು ಕೇಳಿದ್ದಾರೆ. ಪ್ರಸ್ತಾವಿತ ಸುಧಾರಣೆಗಳನ್ನು ಒಂದು ತಿಂಗಳೊಳಗೆ ಜಾರಿಗೊಳಿಸದಿದ್ದರೆ ನಿರ್ದೇಶಕರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನೂ ವಿದ್ಯಾರ್ಥಿಗಳು ಮುಂದಿಟ್ಟಿದ್ದಾರೆ.
ಏನಿದು ಘಟನೆ?
ಸಾಹಿಲ್ ವಾಕೋಡೆ ಎರಡನೇ ವರ್ಷದ ಎನರ್ಜಿ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಸೆಪ್ಟೆಂಬರ್ 18ರಂದು ನಡೆದ ಮಧ್ಯಂತರ ಪರೀಕ್ಷೆಯಲ್ಲಿ ಅವರು ಮೊಬೈಲ್ ಬಳಸಿದ್ದರು ಎಂದು ಆರೋಪಿಸಲಾಗಿತ್ತು. ಪ್ರಶ್ನೆಪತ್ರಿಕೆಯನ್ನು ಚಾಟ್ ಜಿಪಿಟಿಗೆ ಅಪ್‌ಲೋಡ್ ಮಾಡಿ ಉತ್ತರ ಪಡೆಯಲು ಪ್ರಯತ್ನಿಸಿದ್ದ ಎಂದು ಐಐಟಿ ಬಾಂಬೆ ತಿಳಿಸಿತ್ತು.
ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಆತನ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ ಮತ್ತು ಆತನಿಗೆ ಸಮಾಲೋಚನೆ ನೀಡಿ, ಈ ಘಟನೆ ಅವರ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಲಾಗಿತ್ತು ಎಂದು ಸಂಸ್ಥೆ ಹೇಳಿದೆ. ನಂತರ ವಾಕೋಡೆ ತಮ್ಮ ವಸತಿ ನಿಲಯದ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ
ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರಿಕೆ
ವಾಕೋಡೆ ಅವರ ಪೋಷಕರ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದು, ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನೂ ಅನ್ವಯಿಸಲಾಗಿದೆ. ಕುಟುಂಬದವರು ಜಾತಿ ಆಧಾರಿತ ಕಿರುಕುಳದ ಆರೋಪ ಮಾಡಿದ್ದಾರೆ. ಪ್ರಕರಣದ ತನಿಖೆಯನ್ನು ಮುಂಬೈ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಪ್ರಕರಣದಲ್ಲಿ ಪ್ರಾಧ್ಯಾಪಕ ಸೂರ್ಯನಾರಾಯಣ ದೂಳ್ಳಾ ಅವರ ಹೆಸರೂ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ಆದರೆ ಐಐಟಿ ಬಾಂಬೆ ಜಾತಿ ತಾರತಮ್ಯದ ಆರೋಪವನ್ನು ನಿರಾಕರಿಸಿದ್ದು, ವಾಕೋಡೆ ಅವರು ಸಂಸ್ಥೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಘಟಕ ಅಥವಾ ಆಡಳಿತಕ್ಕೆ ಈ ಕುರಿತು ಯಾವುದೇ ದೂರು ನೀಡಿರಲಿಲ್ಲ ಎಂದು ಹೇಳಿದೆ.

