
ರೌಡಿಗಳೊಂದಿಗೆ ನೆಂಟಸ್ತಿಕೆ ಬೇಡ, ಜನರೊಂದಿಗೆ ಮಾನವೀಯತೆ ಇರಲಿ: ಖರ್ಗೆ ತಾಕೀತು
ರಾಜ್ಯದಲ್ಲಿ ಮಾದಕ ವಸ್ತುಗಳ ಪಿಡುಗನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಬೇಡ ಬ್ರೋ ಅಭಿಯಾನವನ್ನು ಮಿಷನ್ ಮೋಡ್‌ನಲ್ಲಿ ಕೈಗೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.
ಪೊಲೀಸ್ ಇಲಾಖೆಯು ಕೇವಲ ಕಾನೂನು ಸುವ್ಯವಸ್ಥೆ ಪಾಲಿಸುವ ಯಂತ್ರವಲ್ಲ, ಅದು ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಅಡಿಪಾಯ. ಇಲಾಖೆಯ ಸಿಬ್ಬಂದಿ ಪ್ರಾಮಾಣಿಕವಾಗಿ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ, ಅವರ ಬೆನ್ನಿಗೆ ಸರ್ಕಾರ ಮತ್ತು ಗೃಹ ಸಚಿವನಾಗಿ ತಾನು ಖಂಡಿತ ನಿಲ್ಲುತ್ತೇನೆ. ಆದರೆ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಯಾವುದೇ ಕಾರಣಕ್ಕೂ ರಕ್ಷಣೆ ನೀಡುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ 'ಗೃಹ ಸಚಿವರೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ಪೊಲೀಸ್ ಕಾನ್ಸ್‌ಟೇಬಲ್‌ಗಳು, ಎಎಸ್‌ಐ ಮತ್ತು ಎಸ್‌ಐಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಿದರು.
ರಾಜ್ಯದಲ್ಲಿ ಮಾದಕ ವಸ್ತುಗಳ ಪಿಡುಗನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಬೇಡ ಬ್ರೋ ಅಭಿಯಾನವನ್ನು ಮಿಷನ್ ಮೋಡ್‌ನಲ್ಲಿ ಕೈಗೊಳ್ಳಬೇಕು. ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾರು ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ, ಯಾವ ಮೆಡಿಕಲ್ ಶಾಪ್‌ಗಳಲ್ಲಿ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾದಕ ಔಷಧಗಳು ಮಾರಾಟವಾಗುತ್ತಿವೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಸಹಜವಾಗಿ ತಿಳಿದಿರುತ್ತದೆ. ಗುರಿ ನೀಡಿದಾಗ ಮಾತ್ರ ಕೆಲಸ ಮಾಡುವ ಪ್ರವೃತ್ತಿ ಸರಿಯಲ್ಲ. ಇದು ನಮ್ಮ ಯುವ ಪೀಳಿಗೆಯ ಭವಿಷ್ಯದ ಪ್ರಶ್ನೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಗಾಂಜಾ ಬೆಳೆಯುತ್ತಿರುವುದು ಕಳವಳಕಾರಿ ಸಂಗತಿ. ನೆರೆ ರಾಜ್ಯದ ಪೊಲೀಸರು ಬಂದು ದಾಳಿ ನಡೆಸುವ ಪರಿಸ್ಥಿತಿ ರಾಜ್ಯದ ಪೊಲೀಸರಿಗೆ ಮುಜುಗರ ತರಬಾರದು ಎಂದು ಹೇಳಿದರು.
ರೌಡಿಗಳೊಂದಿಗೆ ನೆಂಟಸ್ತಿಕೆ ಬೇಡ
ರೌಡಿ ಚಟುವಟಿಕೆಗಳ ನಿಯಂತ್ರಣದಲ್ಲಿ ಪೊಲೀಸರು ಅತ್ಯಂತ ಕಠಿಣ ನಿಲುವು ತೆಗೆದುಕೊಳ್ಳಬೇಕು. ರೌಡಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದು, ಅವರ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಹೋಗುವುದು, ಅವರಿಗೆ ಮಾಹಿತಿ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ರೌಡಿಗಳು ಪೊಲೀಸರಿಗೆ ಹೆದರಬೇಕು, ಸಾರ್ವಜನಿಕರು ಪೊಲೀಸರಿಗೆ ಹೆದರಬಾರದು. ಪೊಲೀಸರ ಕೈ ಸ್ವಚ್ಛವಾಗಿದ್ದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ತಂತ್ರಜ್ಞಾನದ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚು ಸಂವೇದನಾಶೀಲರಾಗಬೇಕು. ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರ ಸ್ಪಂದನೆ ಅತ್ಯಂತ ವೇಗವಾಗಿರಬೇಕು. ಮಹಿಳೆಯೊಬ್ಬರು ತಮ್ಮ ಖಾಸಗಿ ಚಿತ್ರ ಅಥವಾ ವಿಡಿಯೋ ದುರ್ಬಳಕೆಯಾಗುತ್ತಿದೆ ಎಂದು ದೂರು ನೀಡಿದಾಗ, ಅದನ್ನು ನಿರ್ಲಕ್ಷಿಸಬೇಡಿ. ಸಮ್ಮತಿ ಇದೆ ಎಂದ ಮಾತ್ರಕ್ಕೆ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಹಕ್ಕಿದೆ ಎಂದರ್ಥವಲ್ಲ. ಮಹಿಳೆಯ ಗೌರವಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆರೋಗ್ಯ, ಬಡ್ತಿ, ಕುಟುಂಬದ ಯೋಗಕ್ಷೇಮ
ಪೊಲೀಸ್ ಸಿಬ್ಬಂದಿಯ ಒತ್ತಡದ ಕೆಲಸದ ಸ್ವರೂಪವನ್ನು ಅರ್ಥಮಾಡಿಕೊಂಡಿರುವ ಸರ್ಕಾರ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪ್ರತ್ಯೇಕ ಯೋಜನೆಗಳನ್ನು ರೂಪಿಸುತ್ತಿದೆ. ಕೇವಲ ಸೇವಾವಧಿ ಆಧಾರದ ಮೇಲೆ ಬಡ್ತಿ ನೀಡುವುದಲ್ಲದೆ, ಕರ್ತವ್ಯದ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಸಹ ಬಡ್ತಿಗೆ ಪರಿಗಣಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆಯೂ ಸರ್ಕಾರಕ್ಕೆ ಕಾಳಜಿ ಇದೆ. ಕೇವಲ ಡಿಗ್ರಿ ಪಡೆಯುವುದು ಮುಖ್ಯವಲ್ಲ, ಕೈಗಾರಿಕೆಗೆ ಬೇಕಾದ ಕೌಶಲ್ಯ ಪಡೆಯುವುದು ಮುಖ್ಯ. ಐಟಿ-ಬಿಟಿ ಇಲಾಖೆಯ ನಿಪುಣ ಕರ್ನಾಟಕ ಕಾರ್ಯಕ್ರಮದ ಮೂಲಕ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಕೌಶಲ್ಯ ತರಬೇತಿ, ಭಾಷಾ ಜ್ಞಾನ ಮತ್ತು ಸಂವಹನ ಕೌಶಲ್ಯ ಕಲಿಸಲು ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸ್ನೇಹಪರ ಪೊಲೀಸ್ ಠಾಣೆ ಅಂದರೆ ಕಟ್ಟಡವಲ್ಲ
ಸ್ನೇಹಪರ ಪೊಲೀಸ್ ಠಾಣೆ ಅಂದರೆ ಕೇವಲ ಹೊಸ ಕಟ್ಟಡಗಳಲ್ಲ, ಸಿಬ್ಬಂದಿಯ ನಡವಳಿಕೆ. ಠಾಣೆಗೆ ಬರುವ ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ಅವರಿಗೆ ಅದು ಮೊದಲ ಬಾರಿ ಎದುರಾಗಿರುವ ಸಮಸ್ಯೆಯಾಗಿರಬಹುದು, ಆದರೆ ನಮಗೆ ದಿನನಿತ್ಯದ ಕೆಲಸ. ಈ ವ್ಯತ್ಯಾಸವನ್ನು ಅರಿತುಕೊಂಡು ಮಾನವೀಯತೆಯಿಂದ ವರ್ತಿಸಿ ಎಂದು ಸಲಹೆ ನೀಡಿದರು. ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹಳ ದೊಡ್ಡದು. ಹೂಡಿಕೆದಾರರು ಬಂಡವಾಳ ಹಾಕುವ ಮುನ್ನ ಆ ರಾಜ್ಯದ ಸುರಕ್ಷತೆಯನ್ನು ನೋಡುತ್ತಾರೆ. ನೀವು ಕೇವಲ ಪೊಲೀಸರಲ್ಲ, ನೀವು ಕರ್ನಾಟಕದ ಮುಖ. ನೀವು ನೀಡುವ ವಿಶ್ವಾಸವೇ ರಾಜ್ಯದ ಆರ್ಥಿಕತೆಗೆ ಬಲ ಎಂದರು. ಸಿಬ್ಬಂದಿ ಪ್ರಸ್ತಾಪಿಸಿದ ವರ್ಗಾವಣೆ, ಬಡ್ತಿ, ಆರೋಗ್ಯ ವಿಮೆ ಮತ್ತು ಪದಕಗಳಿಗೆ ಸಂಬಂಧಿಸಿದ ಸವಾಲುಗಳನ್ನು ದಾಖಲಿಸಿಕೊಂಡ ಸಚಿವರು, ಅವುಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

