ಪಶುವೈದ್ಯೆ ಸಮೀಕ್ಷಾ ರೆಡ್ಡಿ ಬಲಿ ಪಡೆದಿದ್ದ ನೀರಾನೆ ಸಾವು; ಅಧಿಕಾರಿಗಳ ವಿರುದ್ಧ  ನಿರ್ಲಕ್ಷ್ಯದ ಆರೋಪ
x
ಡಾ.ಸಮೀಕ್ಷಾ ರೆಡ್ಡಿ ಕೊಂದ ನೀರಾನೆ

ಪಶುವೈದ್ಯೆ ಸಮೀಕ್ಷಾ ರೆಡ್ಡಿ ಬಲಿ ಪಡೆದಿದ್ದ ನೀರಾನೆ ಸಾವು; ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ

ಏ.11ರಂದು ಮರಿ ಗರ್ಭದಲ್ಲೇ ಮೃತಪಟ್ಟಿತ್ತು. ಅಂದಿನಿಂದ ಹಂಸಿಣಿಯ ಆರೋಗ್ಯ ಕ್ಷೀಣಿಸುತ್ತಲೇ ಸಾಗಿತ್ತು. ಪರಿಣತರ ತಂಡ ನಿರಂತರ ಚಿಕಿತ್ಸೆ ನೀಡಿದರೂ ಫಲಿಸದೇ ನೀರಾನೆ ಕೊನೆಯುಸಿರೆಳೆದಿದೆ.


Click the Play button to hear this message in audio format

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಪಶು ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ಹಂಸಿಣಿ ಹೆಸರಿನ 12 ವರ್ಷದ ಹೆಣ್ಣು ನೀರಾನೆ ಮೃತಪಟ್ಟಿದೆ. ಮೃಗಾಲಯದ ನಿರ್ವಹಣೆ ಕುರಿತ ಆರೋಪಗಳು, ಅನುಮಾನವು ನೀರಾನೆ ಸಾವಿನಿಂದ ಮತ್ತಷ್ಟು ಹೆಚ್ಚಾಗಿದೆ.

ಕಳೆದ ಮಾ.19ರಂದು ಗರ್ಭಿಣಿಯಾಗಿದ್ದ ಹಂಸಿಣಿಗೆ ಚಿಕಿತ್ಸೆ ನೀಡಲು ಹೋದಾಗ ಅದು ಆಕ್ರಮಣಕಾರಿಯಾಗಿ ವರ್ತಿಸಿ ಯುವ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರನ್ನು ಬಲಿ ಪಡೆದಿತ್ತು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಅಂದಿನಿಂದಲೂ ನೀರಾನೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಮೃಗಾಲಯದ ಸಿಬ್ಬಂದಿ ಸಮರ್ಪಕ ಚಿಕಿತ್ಸೆ ನೀಡಿರಲಿಲ್ಲ.

ಗರ್ಭದಲ್ಲೇ ಮರಿ ಸಾವು, ಆರೋಗ್ಯ ಗಂಭೀರ

ಹಂಸಿಣಿ ಗರ್ಭಧಾರಣೆಯ ನಿರೀಕ್ಷಿತ ಅವಧಿ ಮುಗಿದಿದ್ದರೂ ಮರಿ ಜನಿಸಿರಲಿಲ್ಲ. ಏ.10ರಂದು ಮೈಸೂರಿನ ವನ್ಯಜೀವಿ ಪಶು ವೈದ್ಯರ ತಂಡ ತಪಾಸಣೆ ನಡೆಸಿದಾಗ ಹಂಸಿಣಿಯ ಗರ್ಭದಲ್ಲೇ ಗಂಭೀರ ಸೋಂಕು ಇರುವುದು ಪತ್ತೆಯಾಗಿತ್ತು. ದುರದೃಷ್ಟವಶಾತ್ ಏ.11ರಂದು ಮರಿ ಗರ್ಭದಲ್ಲೇ ಮೃತಪಟ್ಟಿತ್ತು. ಅಂದಿನಿಂದ ಹಂಸಿಣಿಯ ಆರೋಗ್ಯ ಕ್ಷೀಣಿಸುತ್ತಲೇ ಸಾಗಿತ್ತು. ಪರಿಣತರ ತಂಡ ನಿರಂತರ ಚಿಕಿತ್ಸೆ ನೀಡಿದರೂ ಫಲಿಸದೇ ನೀರಾನೆ ಕೊನೆಯುಸಿರೆಳೆದಿದೆ.

ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

ಮಾ.19ರಿಂದ ಏಪ್ರಿಲ್ 14ರವರೆಗೆ ಮೃಗಾಲಯದಲ್ಲಿ ಈ ದುರಂತಗಳ ಸರಣಿ ನಿರ್ವಹಣೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಗರ್ಭಿಣಿ ನೀರಾನೆಗೆ ಚಿಕಿತ್ಸೆಯ ಸಮಯದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ, ಇಲ್ಲವೇ ಎಂಬ ಅನುಮಾನಗಳಿಗೂ ಕಾರಣವಾಗಿದೆ.

ವೈದ್ಯೆ ಸಮೀಕ್ಷಾ ರೆಡ್ಡಿ ಮೃತಪಟ್ಟು ತಿಂಗಳು ಕಳೆದರೂ ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಿರಲು ಕಾರಣ ಹಾಗೂ ಪ್ರಾಣಿಗಳ ಆಹಾರ ಪೂರೈಕೆ ಮತ್ತು ಔಷಧೋಪಚಾರದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಮೃಗಾಲಯದ ನಿರ್ವಹಣೆಯನ್ನು ಅನುಮಾನದಿಂದ ನೋಡುವಂತಾಗಿದೆ.

"ವನ್ಯಪ್ರಾಣಿಗಳ ರಕ್ಷಣೆಯ ಹೆಸರಿನಲ್ಲಿ ಸರ್ಕಾರದಿಂದ ಬರುವ ಅನುದಾನವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಾಣಿಗಳ ಆಹಾರದಲ್ಲೂ ಲಂಚ ಪಡೆಯುವ ಭ್ರಷ್ಟ ವ್ಯವಸ್ಥೆಗೆ ಇನ್ನು ಎಷ್ಟು ಜೀವಗಳು ಬಲಿಯಾಗಬೇಕು?" ಎಂದು ಪರಿಸರ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವನ್ಯಜೀವಿಗಳ ಸಾವು ಮತ್ತು ಕರ್ತವ್ಯನಿರತ ವೈದ್ಯೆಯ ಬಲಿ ಕೇವಲ ಆಕಸ್ಮಿಕವಲ್ಲ. ಇದು ವ್ಯವಸ್ಥಿತ ಪಿತೂರಿ. ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃಗಾಲಯದಲ್ಲಿ ಪಾರದರ್ಶಕತೆ ತರಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.

ಮೃಗಾಲಯದ ನಿರ್ವಹಣೆಯಲ್ಲಿ ಲೋಪ

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಸಾವಿಗೂ ಮುನ್ನ ನಡೆಸಿದ್ದ ವಾಟ್ಸ್ ಆಪ್ ಚಾಟ್ಗಳಿಂದ ಬೆಳಕಿಗೆ ಬಂದಿತ್ತು.

ಸಫಾರಿಯಲ್ಲಿ ಪ್ರಾಣಿಗಳ ಆರೋಗ್ಯ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಪ್ರಾಣಿಗಳಿಗೆ ಅಗತ್ಯವಿರುವ ಔಷಧೋಪಚಾರ ಮತ್ತು ಆಹಾರ ಪೂರೈಕೆ ಸರಿಯಾಗಿಲ್ಲ ಎಂದು ಸಮೀಕ್ಷಾ ಅವರು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.

ಸಮೀಕ್ಷಾ ಅವರ ಮಾವ ರಾಜಶೇಖರ್ ಅವರು, 'ಸಮೀಕ್ಷಾ ಸಾವು ಒಂದು ವ್ಯವಸ್ಥಿತ ಸಂಚು. ಅಲ್ಲಿನ ಮುರುಳಿ ಮನೋಹರ್ ಎಂಬ ಸಿಬ್ಬಂದಿ ಈ ಸಾವಿನ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಅಧಿಕಾರಿಗಳ ಅನುಮತಿ ಇಲ್ಲದೆ ಆ ದಿನ ಜೀಪ್ ಸಫಾರಿ ಒಳಗೆ ಹೋಗಿದ್ದು ಹೇಗೆ? ನೀರಾನೆ ಇರುವ ಆವರಣದ ಗೇಟ್ ಕೀ ತೆಗೆದವರು ಯಾರು?” ಎಂದು ಪ್ರಶ್ನಿಸಿದ್ದರು.

ದೂರು ನೀಡಿದ್ದಕ್ಕೆ ಕಿರುಕುಳ?

ಮೃಗಾಲಯದಲ್ಲಿ ಪ್ರಾಣಿಗಳಿಗೆ ಸರಿಯಾದ ಆಹಾರ ನೀಡುತ್ತಿಲ್ಲ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಸಮೀಕ್ಷಾ ಧ್ವನಿ ಎತ್ತಿದ್ದರು. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ದೂರನ್ನೂ ನೀಡಿದ್ದರು. ಇದೇ ಕಾರಣಕ್ಕೆ ಆಕೆಗೆ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಘಟನೆ ನಡೆದ ಸಮಯದಲ್ಲಿ ಸಮೀಕ್ಷಾ ಅವರ ಜೊತೆಗಿದ್ದ ಜೀಪ್ ಚಾಲಕ ಕಾರ್ತಿಕ್ ಎಂಬಾತ ಸದ್ಯ ನಾಪತ್ತೆಯಾಗಿದ್ದು, ಅಧಿಕಾರಿಗಳು ಆತನನ್ನು ಬಚ್ಚಿಡುತ್ತಿದ್ದಾರೆ ಎಂದು ದೂರಿದ್ದರು.

ಡಾ.ಸಮೀಕ್ಷಾ ರೆಡ್ಡಿ ಸಾವು ಹೇಗಾಯಿತು?

ಡಾ. ಸಮೀಕ್ಷಾ ಅವರು ಮೃಗಾಲಯದ ಆಸ್ಪತ್ರೆಯಲ್ಲಿದ್ದ 'ಸನ್ ಕಾನರ್' ಹಕ್ಕಿಗೆ ರಾತ್ರಿ 10.30 ರ ಸುಮಾರಿಗೆ ಚಿಕಿತ್ಸೆ ನೀಡಲು ತೆರಳಿದ್ದರು. ಆ ಬಳಿಕ ರಾತ್ರಿ 11.45ರ ಸುಮಾರಿಗೆ 'ಹಂಸಿಣಿ' ಹೆಸರಿನ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ (ಇನ್‌ಫ್ರಾರೆಡ್ ಥರ್ಮೋಗ್ರಫಿ) ಮೂಲಕ ಪರೀಕ್ಷಿಸಲು ಆವರಣದೊಳಗೆ ಪ್ರವೇಶಿಸಿದ್ದರು. ಪರೀಕ್ಷೆ ಮುಗಿಯುತ್ತಿದ್ದಂತೆಯೇ ಕೆರಳಿದ ನೀರಾನೆಯು ಏಕಾಏಕಿ ಅವರ ಮೇಲೆ ತೀವ್ರವಾಗಿ ದಾಳಿ ನಡೆಸಿತ್ತು.

ದಾಳಿಯ ತೀವ್ರತೆಗೆ ವೈದ್ಯೆಯ ಹೊಟ್ಟೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಜೊತೆಗೆ ಯಕೃತ್ತಿಗೂ (ಲಿವರ್) ತೀವ್ರ ಹಾನಿಯಾಗಿತ್ತು. ತಕ್ಷಣವೇ ಮೃಗಾಲಯದ ಸಿಬ್ಬಂದಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದರು.

Read More
Next Story