
ಕರ್ನಾಟಕದಲ್ಲಿ ಮತ್ತೆ ಹಿಜಾಬ್ ಕಿಚ್ಚು: ರಾಜ್ಯ ಸರ್ಕಾರದ ಆದೇಶಕ್ಕೆ ಬಿಜೆಪಿ, ಹಿಂದೂ ಸಂಘಟನೆಗಳ ತೀವ್ರ ಆಕ್ರೋಶ!
ಕರ್ನಾಟಕದಲ್ಲಿ ಹಿಜಾಬ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಅನುಮತಿ ನೀಡಿದೆ ಎಂಬ ಆದೇಶದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿ ಹೊರಡಿಸಿರುವ ಆದೇಶ ಈಗ ರಾಜ್ಯಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷದ ನಾಯಕರು ಮತ್ತು ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಹೋರಾಟದ ಹಾದಿ ಹಿಡಿದಿವೆ.
ಮುಸ್ಲಿಮರ ಓಲೈಕೆ ರಾಜಕಾರಣ ಆರ್. ಅಶೋಕ್ ಕಿಡಿ
ಸರ್ಕಾರದ ಈ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರ ಮುನಿಸಿಗೆ ಮುಲಾಮು ಹಚ್ಚಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಶುದ್ಧ ವೋಟ್ ಬ್ಯಾಂಕ್ ರಾಜಕಾರಣ," ಎಂದು ಕಿಡಿಕಾರಿದ್ದಾರೆ.
ಇಸ್ಲಾಮೀಕರಣದ ಷಡ್ಯಂತ್ರ: ಸುನೀಲ್ ಕೆ.ಆರ್ ಆರೋಪ
ಹಿಂದೂಪರ ಮುಖಂಡ ಸುನೀಲ್ ಕೆ.ಆರ್ ಮಾತನಾಡಿ, "ಸರ್ಕಾರ ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಹೊರಟಿದೆ. ಮೂಲಭೂತವಾದಿ ಸಂಘಟನೆಗಳ ಪರವಾಗಿ ನಿಂತಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಈ ಆದೇಶದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ," ಎಂದು ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯ 'ಮಮತಾ ಬ್ಯಾನರ್ಜಿ' ಆಗ್ತಿದ್ದಾರೆ: ಯಶ್‌ಪಾಲ್ ಸುವರ್ಣ
ಉಡುಪಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ, "ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕದ ಮಮತಾ ಬ್ಯಾನರ್ಜಿ ಆಗಲು ಹೊರಟಿದ್ದಾರೆ. ಹಿಜಾಬ್‌ಗೆ ಅವಕಾಶ ಕೊಡುವ ಮೂಲಕ ಕರಾವಳಿಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕೋಮು ಭಾವನೆ ಕದಡುತ್ತಿದ್ದಾರೆ. ದಾವಣಗೆರೆ ಉಪಚುನಾವಣೆ ಲಾಭಕ್ಕಾಗಿ ಈ ಓಲೈಕೆ ರಾಜಕಾರಣ ಮಾಡಲಾಗುತ್ತಿದೆ," ಎಂದು ಗುಡುಗಿದ್ದಾರೆ.
ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಂದಿನ ನಡೆ:
ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಸರ್ಕಾರ ಇಂತಹ ಆದೇಶ ಹೊರಡಿಸಿರುವುದು ತಪ್ಪು ಎಂಬ ನಿಲುವಿಗೆ ಬಂದಿರುವ ಹಿಂದೂ ಸಂಘಟನೆಗಳು ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿವೆ. ಈ ಆದೇಶಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಲ್ಯ ಅಥವಾ ಪಂಚೆ ಧರಿಸಿ ಶಾಲೆಗೆ ಹೋಗುವ ಸಾಧ್ಯತೆಯಿದ್ದು, ಓಲೈಕೆ ರಾಜಕಾರಣ ಬಿಟ್ಟು ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಯತ್ತ ಸರ್ಕಾರ ಗಮನಹರಿಸಬೇಕು ಎಂದು ಪ್ರತಿಪಕ್ಷಗಳು ಒತ್ತಡ ಹೇರಿವೆ.

