
ಕರ್ನಾಟಕ ಹೈಕೋರ್ಟ್
ಖಾಸಗಿ ಜಮೀನಿನಲ್ಲಿ ಒಳಚರಂಡಿ ಪೈಪ್‌ಲೈನ್: ಬಿಡಬ್ಲ್ಯೂಎಸ್‌ಎಸ್‌ಬಿ ಕಾಯ್ದೆ ಎತ್ತಿಹಿಡಿದ ಹೈಕೋರ್ಟ್
ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರ ನೀಡುವ ಕಾಯ್ದೆಯ ಸೆಕ್ಷನ್ 77ರ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ತೀರ್ಪು ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ಮಹಾನಗರದ ಮೂಲಸೌಕರ್ಯ ಯೋಜನೆಗಳಿಗೆ ದೊಡ್ಡ ಬಲ ನೀಡಿದೆ.
ಖಾಸಗಿ ವ್ಯಕ್ತಿಗಳ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳದೆ ಮತ್ತು ಮೊದಲೇ ಪರಿಹಾರ ನೀಡದೆ ಒಳಚರಂಡಿ ಪೈಪ್‌ಲೈನ್‌ಗಳನ್ನು ಅಳವಡಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯೂಎಸ್‌ಎಸ್‌ಬಿ) ಅಧಿಕಾರ ನೀಡುವ ಕಾಯ್ದೆಯ ಸೆಕ್ಷನ್ 77ರ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಈ ಮಹತ್ವದ ತೀರ್ಪು ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ಮಹಾನಗರದ ಮೂಲಸೌಕರ್ಯ ಯೋಜನೆಗಳಿಗೆ ದೊಡ್ಡ ಬಲ ನೀಡಿದೆ.
ಬೆಂಗಳೂರು ಉತ್ತರ ತಾಲೂಕಿನ ಹೆಣ್ಣೂರು ಗ್ರಾಮದ ಟಿ.ಎನ್. ಚಂದ್ರಶೇಖರ ಗೌಡ ಮತ್ತು ನಾಗವಾರದ 80 ವರ್ಷದ ಜೆಥ್ರೋನಿಕಾ ಸೇರಿದಂತೆ ಹಲವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜಲಮಂಡಳಿ ಅಧಿಕಾರಿಗಳು ತಮ್ಮ ಖಾಸಗಿ ಜಮೀನಿಗೆ ಅತಿಕ್ರಮವಾಗಿ ಪ್ರವೇಶಿಸಿ, ಮಾಲೀಕರ ಅನುಮತಿ ಪಡೆಯದೇ 5 ರಿಂದ 8 ಅಡಿ ವ್ಯಾಸದ ಬೃಹತ್ ಒಳಚರಂಡಿ ಪೈಪ್‌ಲೈನ್‌ಗಳನ್ನು ಅಳವಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಅಥವಾ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡದೆ ಪೈಪ್‌ಲೈನ್ ಹಾಕುವುದು ಸಂವಿಧಾನದ ವಿಧಿ 300(ಎ) ರ ಅಡಿಯಲ್ಲಿರುವ 'ಆಸ್ತಿ ಹಕ್ಕಿನ' ಉಲ್ಲಂಘನೆ ಎಂದು ಅರ್ಜಿದಾರರು ವಾದಿಸಿದ್ದರು. ಅಲ್ಲದೆ, ಬಿಡಬ್ಲ್ಯೂಎಸ್‌ಎಸ್‌ಬಿ ಕಾಯಿದೆಯ ಸೆಕ್ಷನ್ 77ನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿದ್ದರು. ತಮ್ಮ ಜಮೀನಿಗೆ ಆದ ಹಾನಿಯನ್ನು ಸರಿಪಡಿಸಲು ಮತ್ತು ಪರಿಹಾರವಾಗಿ 10 ಲಕ್ಷ ರೂಪಾಯಿ ನೀಡುವಂತೆ ಅವರು ಮನವಿ ಮಾಡಿದ್ದರು.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಗಳನ್ನು ವಜಾಗೊಳಿಸುವ ಮೂಲಕ ಜಲಮಂಡಳಿಯ ಅಧಿಕಾರವನ್ನು ಎತ್ತಿಹಿಡಿದಿದೆ. ಬೆಂಗಳೂರಿನಂತಹ ಬೃಹತ್ ಮಹಾನಗರದ ಲಕ್ಷಾಂತರ ಜನರ ಆರೋಗ್ಯ ಮತ್ತು ನೈರ್ಮಲ್ಯವು ಜಲಮಂಡಳಿಯ ಕಾರ್ಯನಿರ್ವಹಣೆಯ ಮೇಲೆ ಅವಲಂಬಿತವಾಗಿದೆ. ವೈಯಕ್ತಿಕ ಆಸ್ತಿಯ ಹಿತಾಸಕ್ತಿಗಿಂತ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯೇ ಮುಖ್ಯ ಎಂದು ಪೀಠ ಒತ್ತಿ ಹೇಳಿದೆ. ಸೆಕ್ಷನ್ 77ರ ಪ್ರಕಾರ, ಜಮೀನಿನ ಮಾಲೀಕತ್ವ ಬದಲಾಗುವುದಿಲ್ಲ. ಜಮೀನು ಮಾಲೀಕರ ಬಳಿಯೇ ಉಳಿಯುತ್ತದೆ. ಜಲಮಂಡಳಿಗೆ ಕೇವಲ ಪೈಪ್‌ಲೈನ್ ಹಾಕಲು ಮತ್ತು ಅದನ್ನು ನಿರ್ವಹಿಸಲು ಬಳಕೆಯ ಹಕ್ಕು ಮಾತ್ರ ಇರುತ್ತದೆ. ಆದ್ದರಿಂದ, ಪ್ರತಿ ಸಣ್ಣ ಪೈಪ್‌ಲೈನ್‌ಗೂ ಬೃಹತ್ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಒಂದು ವೇಳೆ ಪ್ರತಿ ಅಡಿಗೂ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕೆಂದರೆ, ನಗರದ ಇಡೀ ಒಳಚರಂಡಿ ಮತ್ತು ಜಲ ಸರಬರಾಜು ಯೋಜನೆಗಳು ಆಡಳಿತಾತ್ಮಕವಾಗಿ ಮತ್ತು ಆರ್ಥಿಕವಾಗಿ ಸ್ಥಗಿತಗೊಳ್ಳುತ್ತವೆ. ಇದು ನಗರದ ನೈರ್ಮಲ್ಯ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪರಿಹಾರದ ಕುರಿತಾದ ನಿರ್ದೇಶನಗಳು
ನ್ಯಾಯಾಲಯವು ಜಲಮಂಡಳಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಕಾಮಗಾರಿ ನಡೆಸುವಾಗ ಖಾಸಗಿ ಜಮೀನಿಗೆ ಆದಷ್ಟು ಕನಿಷ್ಠ ಹಾನಿ ಮಾಡಬೇಕು. ಒಂದು ವೇಳೆ ಕಾಮಗಾರಿಯಿಂದಾಗಿ ಬೆಳೆ ಅಥವಾ ಜಮೀನಿಗೆ ಭೌತಿಕ ನಷ್ಟ ಉಂಟಾಗಿದ್ದರೆ, ಕಾಯ್ದೆಯ ನಿಯಮಗಳ ಪ್ರಕಾರ ಜಲಮಂಡಳಿಯು ಪೂರ್ಣ ನಷ್ಟ ಪರಿಹಾರವನ್ನು ನೀಡಲೇಬೇಕು. ಈ ಪರಿಹಾರದ ಹಣ ಪಾವತಿಯು ಕಾಮಗಾರಿ ಆರಂಭಿಸಲು ಪೂರ್ವಾಪರ ಷರತ್ತಲ್ಲ. ಅಂದರೆ, ಕಾಮಗಾರಿ ನಿಲ್ಲಿಸುವಂತಿಲ್ಲ, ಆದರೆ ಪರಿಹಾರವನ್ನು ನಂತರದಲ್ಲಿ ಕಾನೂನುಬದ್ಧವಾಗಿ ನೀಡಬೇಕು ಎಂದು ಹೇಳಿದೆ.
ತೀರ್ಪಿನ ಮಹತ್ವ
ಈ ತೀರ್ಪು ನಗರ ಯೋಜನಾ ಪ್ರಾಧಿಕಾರಗಳಿಗೆ ಮತ್ತು ಜಲಮಂಡಳಿಯಂತಹ ಸಂಸ್ಥೆಗಳಿಗೆ ದೊಡ್ಡ ನಿರಾಳತೆ ನೀಡಿದೆ. ಬೆಂಗಳೂರಿನಲ್ಲಿ ಜನಸಂಖ್ಯೆ ಸ್ಫೋಟವಾಗುತ್ತಿರುವ ಈ ಹೊತ್ತಿನಲ್ಲಿ, ಪ್ರತಿ ಬಾರಿಯೂ ಖಾಸಗಿ ಜಮೀನಿನ ಮಾಲೀಕರೊಂದಿಗೆ ಕಾನೂನು ಸಮರ ನಡೆಸಿದರೆ ನಗರದ ಒಳಚರಂಡಿ ವ್ಯವಸ್ಥೆ ಕುಸಿದು ಬೀಳುವ ಭೀತಿಯಿತ್ತು. 'ಸಾರ್ವಜನಿಕ ಹಿತಾಸಕ್ತಿ' ಎಂಬ ಪರಿಕಲ್ಪನೆಯನ್ನು ಮೇಲಕ್ಕೆತ್ತಿ ಹಿಡಿದಿರುವ ನ್ಯಾಯಾಲಯ, ಖಾಸಗಿ ಹಿತಾಸಕ್ತಿ ಸಾರ್ವಜನಿಕ ಆರೋಗ್ಯಕ್ಕೆ ಅಡ್ಡಿಯಾಗಬಾರದು ಎಂದು ಎಚ್ಚರಿಸಿದೆ. ಅದೇ ಸಮಯದಲ್ಲಿ, ಸರ್ಕಾರಿ ಸಂಸ್ಥೆಗಳು ಖಾಸಗಿ ಆಸ್ತಿಗಳಿಗೆ ಅನಗತ್ಯ ಹಾನಿ ಮಾಡಬಾರದು ಮತ್ತು ಸಂಭವಿಸಿದ ನಷ್ಟಕ್ಕೆ ನ್ಯಾಯಯುತ ಪರಿಹಾರ ನೀಡುವ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಬಾರದು ಎಂಬ ಎಚ್ಚರಿಕೆಯನ್ನೂ ನೀಡಿದೆ. ಇನ್ನು ಮುಂದೆ ಜಲಮಂಡಳಿಯು ಪೈಪ್‌ಲೈನ್ ಕಾಮಗಾರಿಗಳನ್ನು ಅಡೆತಡೆಯಿಲ್ಲದೆ ಕೈಗೊಳ್ಳಲು ಸಾಧ್ಯವಾಗಲಿದೆ, ಆದರೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ.

