ಬೆಟ್ಟಿಂಗ್ ಪ್ರಕರಣ| ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಎಫ್ಐಆರ್; ತನಿಖೆಗೆ ಹೈಕೋರ್ಟ್ ತಡೆ
x
ಡಾ.ಜಿ.ಪರಮೇಶ್ವರ್‌

ಬೆಟ್ಟಿಂಗ್ ಪ್ರಕರಣ| ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಎಫ್ಐಆರ್; ತನಿಖೆಗೆ ಹೈಕೋರ್ಟ್ ತಡೆ

ಗೃಹ ಸಚಿವರ ವಿರುದ್ಧ ಎಫ್ಐಆರ್‌ ದಾಖಲಿಸಿ, ತನಿಖೆಗೆ ಸೂಚಿಸಿದ್ದ ಕೆಳಹಂತದ ನ್ಯಾಯಾಲಯ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ತಮಾಷೆಗಾಗಿ ಆಡಿದ ಮಾತುಗಳಿಗೂ ಪ್ರಕರಣ ದಾಖಲಿಸಬಹುದೇ ಎಂದು ಪ್ರಶ್ನಿಸಿದೆ.


ತುಮಕೂರಿನಲ್ಲಿ ಕಬಡ್ಡಿ ಟೂರ್ನಿಯ ವೇಳೆ 500 ರೂ. ಬೆಟ್ಟಿಂಗ್ ಕಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಹೈಕೋರ್ಟ್ ಬಿಗ್‌ ರಿಲೀಫ್‌ ನೀಡಿದೆ.

ಗೃಹ ಸಚಿವರ ವಿರುದ್ಧ ಎಫ್ಐಆರ್‌ ದಾಖಲಿಸಿ, ತನಿಖೆಗೆ ಸೂಚಿಸಿದ್ದ ಕೆಳಹಂತದ ನ್ಯಾಯಾಲಯ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ತಮಾಷೆಗಾಗಿ ಆಡಿದ ಮಾತುಗಳಿಗೂ ಪ್ರಕರಣ ದಾಖಲಿಸಬಹುದೇ ಎಂದು ಪ್ರಶ್ನಿಸಿದೆ.

ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠವು, ಜನಪ್ರತಿನಿಧಿಗಳ ವಿರುದ್ಧ ತನಿಖೆಗೆ ಆದೇಶಿಸುವ ಮುನ್ನ ಅಧೀನ ನ್ಯಾಯಾಲಯಗಳು ಶಿಷ್ಟಾಚಾರ ಪಾಲಿಸಬೇಕು.

ಗೃಹ ಸಚಿವರು ಉದ್ದೇಶಪೂರ್ವಕವಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ತಮಾಷೆಗಾಗಿ ಆಡಿದ ಮಾತುಗಳನ್ನೇ ಆಧರಿಸಿ ಎಫ್ಐಆರ್ ದಾಖಲಿಸಲು ಸೂಚಿಸುವುದು ಸರಿಯಲ್ಲ. ಇಂತಹ ದೂರಿನ ಮೇಲೆ ತನಿಖೆಗೆ ಆದೇಶಿಸುವ ಮೊದಲು ಪೊಲೀಸರಿಂದ ಸೂಕ್ತ ವಿವರಣೆ ಪಡೆಯಬೇಕಿತ್ತು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ ಏನು?

ತುಮಕೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಕಬಡ್ಡಿ ಟೂರ್ನಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು 500 ರೂ. ಬೆಟ್ಟಿಂಗ್‌ ಕಟ್ಟಿದ್ದರು. ಚಿಕ್ಕೋಡಿ ಹಾಗೂ ವಿಜಯಪುರ ತಂಡಗಳ ನಡುವಿನ ಅಂತಿಮ ಪಂದ್ಯದಲ್ಲಿ ರೋಚಕ ಹೋರಾಟ ನಡೆಯುತ್ತಿತ್ತು. ಚಿಕ್ಕೋಡಿ ತಂಡ ಗೆಲ್ಲಲಿದೆ ಎಂದು ಪರಮೇಶ್ವರ್ 500 ರೂ. ಬಾಜಿ ಕಟ್ಟಿದ್ದರು. ಪಂದ್ಯದಲ್ಲಿ ವಿಜಯಪುರ ತಂಡ ಜಯ ಗಳಿಸಿತು. ತಾವು ಸೋತಿದ್ದನ್ನು ಒಪ್ಪಿಕೊಂಡ ಸಚಿವರು, ವೇದಿಕೆಯ ಮೇಲೆ ಪ್ರಶಸ್ತಿ ವಿತರಿಸುವಾಗ ಸ್ವತಃ ತಾವೇ ಈ ವಿಷಯ ಬಹಿರಂಗಪಡಿಸಿದ್ದರು.

ಸಚಿವರ ಈ ಹೇಳಿಕೆಯು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಬೆಟ್ಟಿಂಗ್ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿ ಹೆಚ್.ಆರ್. ನಾಗಭೂಷಣ್ ಎಂಬುವರು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿತ್ತು.

ಡಾ. ಜಿ. ಪರಮೇಶ್ವರ್ ಪರವಾಗಿ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿ, "ಇದು ಯಾವುದೇ ದುರುದ್ದೇಶದಿಂದ ಕೂಡಿದ ಬೆಟ್ಟಿಂಗ್ ಅಲ್ಲ, ಕೇವಲ ಕ್ರೀಡಾ ಸ್ಫೂರ್ತಿಯಿಂದ ನಡೆಸಿದ ಹಾಸ್ಯದ ಪ್ರಸಂಗವಷ್ಟೇ" ಎಂದು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತನಿಖೆಗೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

Read More
Next Story