No recruitment for now | High Court postpones hearing on 56% reservation
x

ಹೈಕೋರ್ಟ್‌

ಆಸ್ಪತ್ರೆಗೆ ದಾಖಲಾಗದಿದ್ದರೂ ವಿಮೆ ಸಿಗಲೇಬೇಕು - ಹೈಕೋರ್ಟ್ ಆದೇಶ

ಅಧುನಿಕ ತಂತ್ರಜ್ಞಾನದಿಂದಾಗಿ ಯಾವುದೇ ಅಪಾಯವಿಲ್ಲದೆ ರೋಗಿಗಳು ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾರೆ. ಈ ಬದಲಾವಣೆಯನ್ನು ಒಪ್ಪಿಕೊಳ್ಳದ ವಿಮಾ ಕಂಪನಿಯ ಹಳೆಯ ನಿಯಮಗಳು ಅಪ್ರಸ್ತುತ.


Click the Play button to hear this message in audio format

ಹಳೆಯ ಪದ್ಧತಿಯಂತೆ ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ದಾಖಲಾಗುವುದು ಮಾತ್ರವೇ ಚಿಕಿತ್ಸೆಯ ಮಾನದಂಡವಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಗೆ ದಾಖಲಾಗದೆಯೇ ನೀಡುವ ಆಧುನಿಕ ಚಿಕಿತ್ಸೆಗಳಿಗೂ ವಿಮಾ ಸೌಲಭ್ಯ ಸಿಗಲೇಬೇಕು ಎಂದು ಮಹತ್ವದ ತೀರ್ಪು ನೀಡಿದೆ.

ಮಂಗಳೂರಿನ ನಿವಾಸಿ, ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಜಿ. ಪದ್ಮನಾಭ ಶೆಟ್ಟಿ ಅವರು ನಾಲ್ಕನೇ ಹಂತದ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ವೈದ್ಯರ ಸಲಹೆಯಂತೆ ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೀಮೋಥೆರಪಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಯ ಮುಂದುವರೆದ ಭಾಗವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ‘ಝೋಲಾಡೆಕ್ಸ್’ ಮತ್ತು ‘ಎಕ್ಸ್‌ಗೇವಾ’ ಎಂಬ ಇಂಜೆಕ್ಷನ್‌ಗಳನ್ನು ಪಡೆಯಬೇಕಿತ್ತು. ಇದಕ್ಕಾಗಿ ಅವರು ಒಟ್ಟು 2,85,470 ರೂ.ಗಳನ್ನು ಖರ್ಚು ಮಾಡಿದ್ದರು. ಆದರೆ, ಈ ಇಂಜೆಕ್ಷನ್‌ಗಳ ವೆಚ್ಚವನ್ನು ಮರುಪಾವತಿಸಲು ವಿಮಾ ಕಂಪನಿ ನಿರಾಕರಿಸಿತು. ರೋಗಿ ಈ ಇಂಜೆಕ್ಷನ್ ಪಡೆಯಲು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರಲಿಲ್ಲ, ಇದು ಹೊರರೋಗಿ ಚಿಕಿತ್ಸೆಯಾಗಿದೆ. ಆದ್ದರಿಂದ ನಿಯಮದಂತೆ ವಿಮಾ ಸೌಲಭ್ಯ ನೀಡಲು ಬರುವುದಿಲ್ಲ ಎಂಬ ತಾಂತ್ರಿಕ ಕಾರಣವನ್ನು ವಿಮಾ ಕಂಪನಿ ಮುಂದೊಡ್ಡಿತ್ತು.

ಲೋಕ ಅದಾಲತ್‌ನಿಂದ ಹೈಕೋರ್ಟ್‌ವರೆಗೆ

ವಿಮಾ ಕಂಪನಿಯ ನಿರಾಕರಣೆಯನ್ನು ಪ್ರಶ್ನಿಸಿ ಪದ್ಮನಾಭ ಶೆಟ್ಟಿ ಅವರು ಮಂಗಳೂರಿನ ಲೋಕ ಅದಾಲತ್ ಮೆಟ್ಟಿಲೇರಿದ್ದರು. ಅಲ್ಲಿನ ತೀರ್ಪು ರೋಗಿಯ ಪರವಾಗಿ ಬಂದಿತ್ತು. ಆದರೆ, ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ವಿಮಾ ಕಂಪನಿಯ ವಾದವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಹೈಕೋರ್ಟ್ ನೀಡಿದ ಐತಿಹಾಸಿಕ ತೀರ್ಪು

ಹೈಕೋರ್ಟ್ ತನ್ನ ತೀರ್ಪಿನಲ್ಲಿ ವಿಮಾ ಕಂಪನಿಯ ವಾದವನ್ನು ಹಾಸ್ಯಾಸ್ಪದ ಎಂದು ಕರೆದಿದೆ. ನ್ಯಾಯಾಲಯದ ಪ್ರಮುಖ ಅವಲೋಕನಗಳನ್ನು ಗಮನಿಸಿದರೆ, ಹಿಂದೆ ಒಂದು ಸಣ್ಣ ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆಗಾಗಿ ರೋಗಿಗಳು ಹಲವು ದಿನ ಆಸ್ಪತ್ರೆಯಲ್ಲಿ ಉಳಿಯಬೇಕಿತ್ತು. ಆದರೆ ಇಂದು ಅತ್ಯಾಧುನಿಕ ತಂತ್ರಜ್ಞಾನದ ಕಾರಣದಿಂದ ಕೆಲವೇ ನಿಮಿಷಗಳಲ್ಲಿ, ಯಾವುದೇ ಅಪಾಯವಿಲ್ಲದೆ ರೋಗಿಗಳು ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾರೆ. ವಿಜ್ಞಾನ ಬೆಳೆದಂತೆ ಚಿಕಿತ್ಸಾ ವಿಧಾನಗಳೂ ಬದಲಾಗಿವೆ. ಈ ಬದಲಾವಣೆಯನ್ನು ಒಪ್ಪಿಕೊಳ್ಳದ ವಿಮಾ ಕಂಪನಿಯ ಹಳೆಯ ನಿಯಮಗಳು ಅಪ್ರಸ್ತುತ. ರೋಗಿ ತನ್ನಿಚ್ಛೆಯಂತೆ ಈ ಚಿಕಿತ್ಸೆ ಪಡೆದಿಲ್ಲ. ವೈದ್ಯರ ಕಡ್ಡಾಯ ಲಿಖಿತ ಸಲಹೆಯ ಮೇರೆಗೆ ಮತ್ತು ಕ್ಯಾನ್ಸರ್ ನಿಯಂತ್ರಣಕ್ಕಾಗಿ ಈ ಇಂಜೆಕ್ಷನ್ ಪಡೆದಿದ್ದಾರೆ. ಕೀಮೋಥೆರಪಿಯ ವೆಚ್ಚವನ್ನು ಒಪ್ಪಿಕೊಂಡಿರುವ ವಿಮಾ ಕಂಪನಿಯು, ಅದೇ ಕೀಮೋಥೆರಪಿಯ ಮುಂದುವರೆದ ಭಾಗವಾದ ಇಂಜೆಕ್ಷನ್ ವೆಚ್ಚವನ್ನು ನಿರಾಕರಿಸುವುದು ತರ್ಕಬದ್ಧವಲ್ಲ. ವಿಮೆ ನೀಡುವಾಗ ಸಾರ್ವಜನಿಕರಿಗೆ ಸುಗಮ ಸೇವೆ ಒದಗಿಸುವುದು ವಿಮಾ ಕಂಪನಿಯ ಜವಾಬ್ದಾರಿ. ಆದರೆ, ಅಲ್ಪಸ್ವಲ್ಪ ಹಣ ಉಳಿಸಲು ವೃದ್ಧ ರೋಗಿಗಳನ್ನು ಇಂತಹ ತಾಂತ್ರಿಕ ನೆಪಗಳನ್ನು ಒಡ್ಡಿ ಕೋರ್ಟ್ ಮೆಟ್ಟಿಲೇರುವಂತೆ ಮಾಡುವುದು ಅವರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ವಿಮಾ ಕಂಪನಿಗೆ ದಂಡ, ಎಚ್ಚರಿಕೆ

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ವೃದ್ಧ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಅಲೆದಾಡಿಸಿದ ವಿಮಾ ಕಂಪನಿಯ ನಡೆಯ ಬಗ್ಗೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಾಲಯವು ವಿಮಾ ಕಂಪನಿಗೆ ಲೋಕ ಅದಾಲತ್ ಆದೇಶಿಸಿದ ಮೊತ್ತವನ್ನು ಬಡ್ಡಿ ಸಹಿತ 30 ದಿನಗಳೊಳಗೆ ಪಾವತಿಸಬೇಕು. ಅರ್ಜಿದಾರರು ಈ ಕಾನೂನು ಹೋರಾಟಕ್ಕಾಗಿ ಪಟ್ಟಿರುವ ಶ್ರಮ ಮತ್ತು ಖರ್ಚುಗಳನ್ನು ಸರಿದೂಗಿಸಲು ಹೆಚ್ಚುವರಿಯಾಗಿ 50 ಸಾವಿರ ರೂ. ಪರಿಹಾರವನ್ನು ನೀಡಬೇಕು ಎಂದು ತಿಳಿಸಿದೆ.

ಈ ತೀರ್ಪಿನ ಮಹತ್ವವೇನು?

ಈ ತೀರ್ಪು ವಿಮಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ವಿಮಾ ಕಂಪನಿಗಳು 24 ಗಂಟೆ ಆಸ್ಪತ್ರೆ ದಾಖಲಾತಿಯನ್ನು ನೆಪವಾಗಿಟ್ಟುಕೊಂಡು ಹಲವು ಹಕ್ಕುಗಳನ್ನು ತಿರಸ್ಕರಿಸುತ್ತವೆ. ಆದರೆ ಈಗಿನ ತೀರ್ಪು, ವೈದ್ಯಕೀಯ ತಂತ್ರಜ್ಞಾನ ಆಧುನಿಕಗೊಂಡಿರುವಾಗ ವಿಮಾ ಕಂಪನಿಗಳು ತಮ್ಮ ನಿಯಮಾವಳಿಗಳನ್ನು ಬದಲಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದೆ. ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಆಧುನಿಕ ಇಂಜೆಕ್ಷನ್‌ಗಳು, ಲಸಿಕೆಗಳು ಮತ್ತು ದಿನದ ಆಸ್ಪತ್ರೆ ಚಿಕಿತ್ಸೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಚಿಕಿತ್ಸೆಗಳನ್ನು ಕೇವಲ ಒಪಿಡಿ ಎಂದು ವರ್ಗೀಕರಿಸಿ ವಿಮೆಯನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದು ಲಕ್ಷಾಂತರ ವಿಮಾ ಪಾಲಿಸಿದಾರರಿಗೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ದೊಡ್ಡ ಭರವಸೆಯನ್ನು ನೀಡಿದೆ.

Read More
Next Story