
ದೈವ ನಿಂದನೆ ಪ್ರಕರಣ| 4 ವಾರದಲ್ಲಿ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಲು ಹೈಕೋರ್ಟ್ ನಿರ್ದೇಶನ
ನಟ ರಣವೀರ್ ಸಿಂಗ್ ಪರ ವಕೀಲರು ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚನೆ ಪ್ರಮಾಣ ಪತ್ರವನ್ನು ಸಲ್ಲಿಸಿದರು. ಯಾರಿಗೂ ನೋವುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ತಿಳಿಸಿದರು.
ಕಾಂತಾರ ಚಾಪ್ಟರ್-1 ಚಿತ್ರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯನ್ನು ಅಪಹಾಸ್ಯ ಮಾಡಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಹೈಕೋರ್ಟ್, ಒಂದು ತಿಂಗಳೊಳಗೆ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವಂತೆ ನಿರ್ದೇಶನ ನೀಡಿದೆ.
ಪವಿತ್ರ ದೈವಾಚರಣೆಯನ್ನು ಅವಹೇಳನ ಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಲು ಕೋರಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.
ನಟ ರಣವೀರ್ ಸಿಂಗ್ ಪರ ವಕೀಲರು ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚನೆಯ ಪ್ರಮಾಣ ಪತ್ರವನ್ನು ಸಲ್ಲಿಸಿದರು. ರಣವೀರ್ ಯಾರಿಗೂ ನೋವುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ. ತಪ್ಪಿನ ಅರಿವಾದ ಹಿನ್ನೆಲೆ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದರು. ಅಲ್ಲದೆ, ದೋಷಮುಕ್ತರಾಗುವ ಸಲುವಾಗಿ ದೇವಸ್ಥಾನಕ್ಕೆ ಭೇಟಿ ನೀಡಲು ಸಿದ್ಧರಿರುವುದಾಗಿಯೂ ವಕೀಲರು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿವಾದಿ ಪರ ವಕೀಲರು, ದೂರುದಾರರ ಪರ ವಕೀಲರು, ಕೇವಲ ಕ್ಷಮೆಯಾಚಿಸಿದರೆ ಸಾಲದು, ದೇವಸ್ಥಾನಕ್ಕೆ ಭೇಟಿ ನೀಡುವ ದಿನಾಂಕವನ್ನು ಸ್ಪಷ್ಟಪಡಿಸಬೇಕು. ಅಪಮಾನವು ದೊಡ್ಡ ಮಟ್ಟದಲ್ಲಿ ನಡೆದಿದೆ. ಆದ್ದರಿಂದ ಪ್ರಾಯಶ್ಚಿತ್ತವೂ ಆಗಬೇಕು ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ನಟ ರಣವೀರ್ ಸಿಂಗ್ ಅವರು ಮುಂದಿನ ನಾಲ್ಕು ವಾರಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆಯಬೇಕು ಎಂದು ಸೂಚಿಸಿದರು. ಈ ಷರತ್ತಿನೊಂದಿಗೆ ಅವರ ವಿರುದ್ಧದ ಎಫ್‌ಐಆರ್ ಕುರಿತ ಅರ್ಜಿಯನ್ನು ಇತ್ಯರ್ಥಪಡಿಸಲಾಯಿತು.
ಚಲನಚಿತ್ರೋತ್ಸವದ ವೇಳೆ ಹೇಳಿಕೆ
2025ರ ನ.28ರಂದು ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ನಟ ರಣವೀರ್ ಸಿಂಗ್ ಅವರು ಈ ವಿವಾದದ ಕಿಡಿ ಹೊತ್ತಿಸಿದ್ದರು. ವೇದಿಕೆಯ ಮೇಲೆ ಮಾತನಾಡುತ್ತಿದ್ದ ನಟ ರಣವೀರ್ ಸಿಂಗ್, ಕಾಂತಾರ ಚಿತ್ರದಲ್ಲಿನ ಪಂಜುರ್ಲಿ ಅಥವಾ ಗುಳಿಗ ದೈವದ ದೈವಿಕ ಅಭಿವ್ಯಕ್ತಿಗಳನ್ನು (ದೈವ ನರ್ತನದ ಸನ್ನೆಗಳನ್ನು) ಹಾಸ್ಯಮಯವಾಗಿ ಅನುಕರಿಸಿದ್ದರು. ಅಷ್ಟೇ ಅಲ್ಲದೆ, ಚಿತ್ರದಲ್ಲಿ ತೋರಿಸಲಾದ ಪವಿತ್ರ ಶಕ್ತಿಯನ್ನು ಭೂತ ಅಥವಾ ಸ್ತ್ರೀ ಭೂತ ಎಂದು ಸಂಬೋಧಿಸಿದ್ದರು. ಲಕ್ಷಾಂತರ ಅಭಿಮಾನಿಗಳಿರುವ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಣವೀರ್ ಸಿಂಗ್ ಮಾಡಿದ ಈ ಅನುಕರಣೆಯು ಕರಾವಳಿ ಕರ್ನಾಟಕದ ದೈವ ಭಕ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ದೈವ ಎಂಬುದು ಕೇವಲ ದೆವ್ವ ಅಥವಾ ಭೂತವಲ್ಲ, ಅದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಮತ್ತು ಪರಮ ಪವಿತ್ರ ಶಕ್ತಿ ಎಂಬ ವಾದದೊಂದಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ನಟರೊಬ್ಬರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂಥ ವ್ಯಂಗ್ಯ ಪ್ರದರ್ಶಿಸುವ ಮೂಲಕ ಕಾಂತಾರ ಚಲನಚಿತ್ರ ಮಾತ್ರವಲ್ಲದೇ, ತುಳು ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಆಧ್ಯಾತ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಿದ್ದಾರೆ. ಇದು ದೈವ ಭಕ್ತರು ಮತ್ತು ಸಾರ್ವಜನಿಕರಿಗೆ ತೀವ್ರ ಮಾನಸಿಕ ಯಾತನೆ, ಕೋಪ ಮತ್ತು ಅಸಮಾಧಾನ ಉಂಟು ಮಾಡಿದೆ. ಇದು ಸಾರ್ವಜನಿಕ ಶಾಂತಿ ಭಂಗಗೊಳಿಸುವ ಮತ್ತು ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸಬಹುದು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿತ್ತು.
ಎಫ್‌ಐಆರ್ ದಾಖಲು
ರಣವೀರ್ ಸಿಂಗ್ ಅವರ ವರ್ತನೆಯು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದೆ. ಅಲ್ಲದೇ, ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಬಹುದು ಎಂದು ಆರೋಪಿಸಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರಣವೀರ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು.

