ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್‌ ಜಾಮೀನು ರದ್ದತಿಗೆ ಹೈಕೋರ್ಟ್ ನಿರಾಕರಣೆ
x

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್‌ ಜಾಮೀನು ರದ್ದತಿಗೆ ಹೈಕೋರ್ಟ್ ನಿರಾಕರಣೆ

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಬೈರತಿ ಬಸವರಾಜ್‌ಗೆ ಹೈಕೋರ್ಟ್ ರಿಲೀಫ್ ನೀಡಿದೆ. ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.


Click the Play button to hear this message in audio format

ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್‌ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಸೋಮವಾರ ವಜಾಗೊಳಿಸಿದೆ. ಈ ಆದೇಶದೊಂದಿಗೆ, ಮತ್ತೆ ಬಂಧನವಾಗುವ ಭೀತಿಯಲ್ಲಿದ್ದ ಶಾಸಕರಿಗೆ ದೊಡ್ಡ ನಿರಾಳತೆ ದೊರೆತಂತಾಗಿದೆ.

2025ರ ಜುಲೈ ತಿಂಗಳಲ್ಲಿ ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರೌಡಿಶೀಟರ್ ಬಿಕ್ಲು ಶಿವನ ಭೀಕರ ಕೊಲೆ ನಡೆದಿತ್ತು. ಈ ಘಟನೆಯು ನಗರದ ಕಾನೂನು ಸುವ್ಯವಸ್ಥೆಯ ಮೇಲೆ ದೊಡ್ಡ ಪ್ರಶ್ನೆ ಚಿಹ್ನೆಯನ್ನು ಹುಟ್ಟುಹಾಕಿತ್ತು. ಮೃತನ ತಾಯಿ ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಮೇರೆಗೆ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಈ ಪ್ರಕರಣದ ತೀವ್ರತೆಯನ್ನು ಪರಿಗಣಿಸಿ, ತನಿಖೆಯನ್ನು ಸಿಐಡಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್‌ ಅವರನ್ನು ಐದನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಬೈರತಿ ಬಸವರಾಜ್ ಮತ್ತು ಮತ್ತೊಬ್ಬ ಆರೋಪಿಯನ್ನು ಹೊರತುಪಡಿಸಿ, ಇತರೆ ಆರೋಪಿಗಳ ವಿರುದ್ಧ 4,236 ಪುಟಗಳ ಬೃಹತ್ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಕಾನೂನು ಹೋರಾಟದ ಹಾದಿ

ಶಾಸಕ ಬೈರತಿ ಬಸವರಾಜ್‌ ಅವರ ಬಂಧನಕ್ಕಾಗಿ ಅಂದಿನಿಂದಲೇ ಕಾನೂನು ಸಮರ ತೀವ್ರಗೊಂಡಿತ್ತು. ಫೆ.10ರಂದು ಹೈಕೋರ್ಟ್ ಶಾಸಕರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಕೂಡ ಅವರಿಗೆ ಜಾಮೀನು ನಿರಾಕರಿಸಿತು. ಸರ್ವೋಚ್ಚ ನ್ಯಾಯಾಲಯದ ಆದೇಶದ ಬೆನ್ನಲ್ಲೇ ಫೆ.12ರಂದು ಪೊಲೀಸರು ಶಾಸಕರನ್ನು ಬಂಧಿಸಿದ್ದರು. ಆದರೆ, ಮಾರ್ಚ್ 12ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. "ಆರೋಪಿಯು ತನಿಖೆಗೆ ಸಹಕರಿಸುತ್ತಿಲ್ಲ, ಪ್ರಶ್ನೆಗಳಿಗೆ ತಪ್ಪಾದ ಉತ್ತರಗಳನ್ನು ನೀಡುತ್ತಿದ್ದಾರೆ. ಅವರ ಬಂಧನ ಮತ್ತು ಹೆಚ್ಚಿನ ವಿಚಾರಣೆ ಅನಿವಾರ್ಯವಾಗಿದೆ" ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದರು.

ಹೈಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದ

ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲರು, ಆರೋಪಿಯು ಪ್ರಭಾವಿ ರಾಜಕಾರಣಿಯಾಗಿರುವುದರಿಂದ ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂದು ಎಚ್ಚರಿಸಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ರದ್ದು ಮಾಡಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬೈರತಿ ಬಸವರಾಜ್‌ ಅವರ ಪರ ವಕೀಲರು, "ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದ್ದು, ಇನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಇದೇ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಕೆಳ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಹೊಸ ಆಧಾರಗಳಿಲ್ಲ" ಎಂದು ಬಲವಾಗಿ ವಾದಿಸಿದರು. ಉಭಯ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿ, ಸರ್ಕಾರದ ಅರ್ಜಿಯನ್ನು ವಜಾಗೊಳಿಸಿತು.

Read More
Next Story