
ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ KHCF ಸ್ಥಾಪನೆಗೆ ಪ್ರವಾಸೋದ್ಯಮ ಇಲಾಖೆ ಸಜ್ಜು
ರಾಜ್ಯದಲ್ಲಿನ 239 ತಾಲ್ಲೂಕುಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಸ್ಮಾರಕಗಳು, ಪುರಾತತ್ವ ತಾಣಗಳನ್ನು ಗುರುತಿಸಲಾಗಿದೆ. ಹೀಗಾಗಿ KHCF ಮೂಲಕ ರಕ್ಷಿಸಲು ಕ್ರಮ ಕೈಗೊಂಡಿದೆ.
ರಾಜ್ಯದ ಗತವೈಭವದ ಪ್ರತೀಕವಾಗಿರುವ ಐತಿಹಾಸಿಕ ಸ್ಮಾರಕಗಳು, ಪುರಾತತ್ವ ತಾಣಗಳು ಮತ್ತು ವಸ್ತುಸಂಗ್ರಹಾಲಯಗಳ ಸಂರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ. ಇವುಗಳ ವ್ಯವಸ್ಥಿತ ನಿರ್ವಹಣೆ ಮತ್ತು ಜಾಗತಿಕ ಮಟ್ಟದಲ್ಲಿ ನಮ್ಮ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಪರಂಪರೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ಕೆಎಚ್‌ಸಿಎಫ್) ಸ್ಥಾಪಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿರುವ 239 ತಾಲ್ಲೂಕುಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳನ್ನು ಗುರುತಿಸಲಾಗಿದೆ. ಈ ಸಾಂಸ್ಕೃತಿಕ ಸಂಪತ್ತನ್ನು ಕೇವಲ ಸರ್ಕಾರದ ಅನುದಾನದಿಂದ ಮಾತ್ರ ಸಂರಕ್ಷಿಸುವುದು ಸವಾಲಿನ ಕೆಲಸವಾಗಿದೆ. ಸ್ಮಾರಕಗಳ ಸಂರಕ್ಷಣೆ, ಪುನಶ್ಚೇತನ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ದೀರ್ಘಕಾಲಿಕ ಮತ್ತು ಸ್ಥಿರವಾದ ಹಣಕಾಸು ವ್ಯವಸ್ಥೆಯ ಅಗತ್ಯವಿದೆ. ಈ ಕೊರತೆಯನ್ನು ನೀಗಿಸಲು ಮತ್ತು ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸಲು ಕೆಎಚ್‌ಸಿಎಫ್ ಅನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಖಾಸಗಿ, ಸಾರ್ವಜನಿಕ ಸಹಭಾಗಿತ್ವಕ್ಕೆ ಒತ್ತು
ಈ ಫೌಂಡೇಶನ್‌ನ ಪ್ರಮುಖ ಆಕರ್ಷಣೆಯೆಂದರೆ 'ಅಡಾಪ್ಟ್ ಎ ಮಾನ್ಯುಮೆಂಟ್' ಯೋಜನೆಯ ವಿಸ್ತರಣೆಯಾಗಿದೆ. ಇದರಡಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯ ಮೂಲಕ ದೊಡ್ಡ ಮಟ್ಟದ ಆರ್ಥಿಕ ನೆರವು ಪಡೆಯುವುದು. ಜಗತ್ತಿನ ವಿವಿಧ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ತವರು ನೆಲದ ಸ್ಮಾರಕಗಳ ಸಂರಕ್ಷಣೆಗೆ ಕೈಜೋಡಿಸಲು ಅವಕಾಶ ಕಲ್ಪಿಸುವುದು. ಸಾರ್ವಜನಿಕರು ಮತ್ತು ದಾನಿಗಳು ತಮಗೆ ಆಸಕ್ತಿಯಿರುವ ನಿರ್ದಿಷ್ಟ ಸ್ಮಾರಕ ಅಥವಾ ವಸ್ತುಸಂಗ್ರಹಾಲಯದ ಉನ್ನತೀಕರಣಕ್ಕೆ ನೇರ ಕೊಡುಗೆ ನೀಡಲು ಅವಕಾಶವಿರುತ್ತದೆ. ಕೆಎಚ್‌ಸಿಎಫ್ ಕೇವಲ ಕಲ್ಲು-ಮಣ್ಣಿನ ಸ್ಮಾರಕಗಳ ರಕ್ಷಣೆಗೆ ಸೀಮಿತವಾಗುವುದಿಲ್ಲ. ಇದು ಕರ್ನಾಟಕದ ಕಲೆ, ಸಾಹಿತ್ಯ, ವಾಸ್ತುಶಿಲ್ಪ ಮತ್ತು ಜನಪದ ಕಲೆಗಳನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುವ ವೇದಿಕೆಯಾಗಲಿದೆ. ಜಾಗತಿಕ ಕನ್ನಡಿಗರನ್ನು ಸಾಂಸ್ಕೃತಿಕ ರಾಯಭಾರಿಗಳಾಗಿ ರೂಪಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳು ಮತ್ತು ವಿನಿಮಯ ಚಟುವಟಿಕೆಗಳನ್ನು ಆಯೋಜಿಸುವುದು ಇದರ ಗುರಿಯಾಗಿದೆ. ಪಠ್ಯಪುಸ್ತಕಗಳ ಇತಿಹಾಸಕ್ಕೆ ಸೀಮಿತವಾಗದೆ, ಯುವಕರು ನೇರವಾಗಿ ಸ್ಮಾರಕಗಳಿಗೆ ಭೇಟಿ ನೀಡುವ ಮತ್ತು ಸ್ಥಳೀಯ ಪರಂಪರೆಯೊಂದಿಗೆ ಸಂಪರ್ಕ ಹೊಂದುವ ರೀತಿಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಪಾರದರ್ಶಕ ಆಡಳಿತ ವ್ಯವಸ್ಥೆ
ಹಣಕಾಸು ನಿರ್ವಹಣೆಯ ವಿಷಯದಲ್ಲಿ ಸರ್ಕಾರ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರಿಕೆ ವಹಿಸಿದೆ. ಫೌಂಡೇಶನ್‌ನ ಅಡಿಪಾಯದಲ್ಲಿಯೇ ಲೆಕ್ಕಪತ್ರ ನಿರ್ವಹಣೆ, ಆಡಿಟ್ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಖಚಿತಪಡಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಕರ್ನಾಟಕದ ಸ್ಮಾರಕಗಳು ಕೇವಲ ನಿರ್ಜೀವ ಕಟ್ಟಡಗಳಲ್ಲ, ಅವು ನಮ್ಮ ಇತಿಹಾಸ ಮತ್ತು ಕಲೆಯ ಜೀವಂತ ಸಾಕ್ಷಿಗಳು. ಮುಂದಿನ ಪೀಳಿಗೆಗೆ ಈ ಪರಂಪರೆಯನ್ನು ಹೆಮ್ಮೆಯಿಂದ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅವರು, ಸರ್ಕಾರ ಮತ್ತು ಸಮಾಜದ ಜಂಟಿ ಜವಾಬ್ದಾರಿಯ ಅಡಿಯಲ್ಲಿ ಈ ಸಂಪನ್ಮೂಲಗಳನ್ನು ನಿರ್ವಹಿಸುವುದು ಅನಿವಾರ್ಯ. ದಾನಿಗಳಿಗೆ ನೇರ ಸಂಪರ್ಕ ಮತ್ತು ಸ್ಪಷ್ಟವಾದ ಆಡಳಿತ ವ್ಯವಸ್ಥೆಯನ್ನು ನೀಡುವುದೇ ಈ ಫೌಂಡೇಶನ್‌ನ ವಿಶೇಷತೆ ಎಂದು ತಿಳಿಸಿದರು.
ಭಾರತೀಯ ಪರಂಪರೆಯ ರಕ್ಷಣೆಯಲ್ಲಿ ಹೊಸ ಮಾದರಿ
ಕೆಎಚ್‌ಸಿಎಫ್ ಭಾರತದಲ್ಲೇ ವಿಶಿಷ್ಟವಾದ ಮಾದರಿಯಾಗುವ ಲಕ್ಷಣಗಳನ್ನು ಹೊಂದಿದೆ. ಐತಿಹಾಸಿಕ ಸ್ಮಾರಕಗಳನ್ನು ಕೇವಲ ಪ್ರವಾಸೋದ್ಯಮ ತಾಣಗಳಾಗಿ ನೋಡದೆ, ಅವುಗಳನ್ನು ಒಂದು ಸಾಂಸ್ಕೃತಿಕ ಚಳವಳಿಯ ಭಾಗವನ್ನಾಗಿ ಮಾಡುವ ಸರ್ಕಾರಿ ಪ್ರಯತ್ನವು ರಾಜ್ಯದ ಸಾಂಸ್ಕೃತಿಕ ಉನ್ನತಿಗೆ ನಾಂದಿ ಹಾಡಲಿದೆ. ಸಚಿವ ಸಂಪುಟದ ಒಪ್ಪಿಗೆ ಪಡೆದ ನಂತರ ಈ ಫೌಂಡೇಶನ್ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದ್ದು, ರಾಜ್ಯದ ಇತಿಹಾಸವನ್ನು ಜಾಗತಿಕ ವೇದಿಕೆಯಲ್ಲಿ ಮತ್ತಷ್ಟು ಪ್ರಖರವಾಗಿ ಬೆಳಗಲು ಇದು ಸಹಕಾರಿಯಾಗಲಿದೆ.

