
ರಾವಳಿಯಲ್ಲಿ ಮಳೆ ಬಿರುಸಾಗಿದ್ದು, ದಕ್ಷಿಣ ಕನ್ನಡದಲ್ಲಿ ಆರೆಂಜ್ ಅಲರ್ಟ್ ಘೋಷಿಸಿ ಶಾಲೆಗಳಿಗೆ ರಜೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ: ಶಾಲೆಗಳಿಗೆ ರಜೆ ಘೋಷಣೆ
ಕರಾವಳಿಯಲ್ಲಿ ಮಳೆ ಬಿರುಸಾಗಿದ್ದು, ದಕ್ಷಿಣ ಕನ್ನಡದಲ್ಲಿ ಆರೆಂಜ್ ಅಲರ್ಟ್ ಘೋಷಿಸಿ ಶಾಲೆಗಳಿಗೆ ರಜೆ ನೀಡಲಾಗಿದೆ. ಘಟ್ಟ ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಇದ್ದು, ಜನರು ಎಚ್ಚರದಿಂದಿರಲು ಸೂಚನೆ ನೀಡಲಾಗಿದೆ.
ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕುಗೊಂಡಿದ್ದು, ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಜುಲೈ 18 ಮತ್ತು 19ರಂದು ಕರಾವಳಿ ಜಿಲ್ಲೆಗಳ ಹಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಶನಿವಾರ ರಜೆ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಭೂಕುಸಿತ ಸಂಭವಿಸುವ ಆತಂಕ ಎದುರಾಗಿದ್ದು, ಸಾರ್ವಜನಿಕರು ಮತ್ತು ಪ್ರಯಾಣಿಕರು ಎಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರೊಂದಿಗೆ ಕರಾವಳಿ ತೀರದಲ್ಲಿ ಗಂಟೆಗೆ 30ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಹಾಗೂ ನದಿ ಪಾತ್ರದ ನಿವಾಸಿಗಳು ಜಾಗರೂಕರಾಗಿರಲು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಬಿರುಗಾಳಿ ಸಹಿತ ಮಳೆ
ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಒಂದೆರಡು ಕಡೆ ಭಾರೀ ಮಳೆಯ ಮುನ್ಸೂಚನೆ ಇದೆ. ಇತ್ತ ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲೂ ಮಳೆ ಚುರುಕಾಗಲಿದ್ದು, ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಜೊತೆಗೆ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲೂ ಮಳೆ ಸಾಧ್ಯತೆ
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಈ ಭಾಗದಲ್ಲೂ ಗಾಳಿಯ ವೇಗ ಹೆಚ್ಚಿರಲಿದ್ದು, ಮುಂದಿನ 24 ರಿಂದ 48 ಗಂಟೆಗಳ ಕಾಲ ಸಾರ್ವಜನಿಕರು ಹವಾಮಾನ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೋರಲಾಗಿದೆ.

