ರಾಜ್ಯದ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ
x

ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದೆ.

ರಾಜ್ಯದ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದೆ. ಕರಾವಳಿ, ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ, ಬೆಂಗಳೂರಿನಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಸಿಕ್ಕಿದೆ. ಸಾರ್ವಜನಿಕರಿಗೆ ಎಚ್ಚರಿಕೆ ಸೂಚನೆ ನೀಡಲಾಗಿದೆ.


Click the Play button to hear this message in audio format

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆ ಆಗಸ್ಟ್ 5ರಂದು ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯೊಂದಿಗೆ ಕೆಲವೆಡೆ ಬಿರುಗಾಳಿಯೂ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಭಾರೀ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಸಮುದ್ರ ತೀರದ ಭಾಗಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.

ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ

ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಕೆಲವೆಡೆ ಗಂಟೆಗೆ ೪೦ ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.

ಮಲೆನಾಡಿಗೂ ಭಾರಿ ಮಳೆ ಸಾಧ್ಯತೆ

ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಗುಡ್ಡ ಪ್ರದೇಶಗಳಲ್ಲಿ ಭೂಕುಸಿತ ಹಾಗೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕಾಗಿದೆ.

ಬೆಂಗಳೂರಿನಲ್ಲೂ ಮಳೆಯ ಸಾಧ್ಯತೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ನಿರೀಕ್ಷೆಯಿದೆ.

ಆಗಸ್ಟ್ 6ಕ್ಕೂ ಮಳೆ ಮುಂದುವರಿಕೆ

ಆಗಸ್ಟ್ 6ರಂದು ಕೂಡ ಕರಾವಳಿ ಭಾಗದಲ್ಲಿ ಮಳೆಯ ತೀವ್ರತೆ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಕೆಲವು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.

ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸೂಚನೆ

ಮಳೆ ಮತ್ತು ಗಾಳಿ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನದಿ, ಹೊಳೆ ಹಾಗೂ ತಗ್ಗು ಪ್ರದೇಶಗಳಿಗೆ ಅನಗತ್ಯವಾಗಿ ತೆರಳದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಗುಡ್ಡ ಪ್ರದೇಶಗಳಲ್ಲಿ ಸಂಚರಿಸುವವರು ಹವಾಮಾನ ಮಾಹಿತಿಯನ್ನು ಗಮನಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ದಾಖಲೆ ಮಳೆ

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಅತಿ ಹೆಚ್ಚು 16 ಸೆಂ.ಮೀ. ಮಳೆ ದಾಖಲಾಗಿದ್ದು, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 15 ಸೆಂ.ಮೀ. ಹಾಗೂ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ 14 ಸೆಂ.ಮೀ. ಮಳೆಯಾಗಿದೆ.

ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ 14 ಸೆಂ.ಮೀ., ಉತ್ತರ ಕನ್ನಡದ ಗೇರುಸೊಪ್ಪದಲ್ಲಿ 13 ಸೆಂ.ಮೀ. ಮತ್ತು ದಕ್ಷಿಣ ಕನ್ನಡದ ಶಕ್ತಿನಗರದಲ್ಲಿ 13 ಸೆಂ.ಮೀ. ಮಳೆಯಾಗಿದೆ. ಉಡುಪಿಯ ಕೊಲ್ಲೂರು ಹಾಗೂ ಬೆಳ್ತಂಗಡಿಯಲ್ಲಿ ತಲಾ 11 ಸೆಂ.ಮೀ., ಬಂಟ್ವಾಳದಲ್ಲಿ 10 ಸೆಂ.ಮೀ. ಮಳೆಯಾಗಿದೆ.

ಕಾರ್ಕಳ, ಪುತ್ತೂರು, ಮಾಣಿ, ಮೂಡಬಿದ್ರೆ, ಉತ್ತರ ಕನ್ನಡದ ಜಾಗಲಬೆಟ್ಟ ಹಾಗೂ ರಾಯಚೂರು ಜಿಲ್ಲೆಯ ಮಾನ್ವಿ ಸೇರಿದಂತೆ ಹಲವು ಪ್ರದೇಶಗಳಲ್ಲೂ ಗಮನಾರ್ಹ ಪ್ರಮಾಣದ ಮಳೆ ದಾಖಲಾಗಿದ್ದು, ಸ್ಥಳೀಯ ಜಲಾಶಯಗಳು ಮತ್ತು ನದಿಗಳ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ.

Read More
Next Story