ಔಷಧಗಳ ಲೂಟಿಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಸಚಿವ ಯು.ಟಿ. ಖಾದರ್ ಆಗ್ರಹ
x

ಔಷಧಗಳ ಲೂಟಿಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಸಚಿವ ಯು.ಟಿ. ಖಾದರ್ ಆಗ್ರಹ

ರಾಜ್ಯದ ಹಾಸ್ಟೆಲ್‌ಗಳು, ಪಿಜಿಗಳು, ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು 'ಕ್ಯೂಆರ್ ಕೋಡ್' ಆಧಾರಿತ ದೂರು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ಹೇಳಿದ್ದಾರೆ.


Click the Play button to hear this message in audio format

ಖಾಸಗಿ ಆಸ್ಪತ್ರೆಗಳು ಮತ್ತು ಔಷಧ ಕಂಪನಿಗಳು ಜೀವರಕ್ಷಕ ಔಷಧಗಳ ಮೇಲೆ ವಿಧಿಸುತ್ತಿರುವ ವಿಪರೀತ ದರವನ್ನು ನಿಯಂತ್ರಿಸಬೇಕೆಂದು ಆರೋಗ್ಯ ಸಚಿವ ಯು.ಟಿ. ಖಾದರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರ ಜೊತೆಗೆ, ರಾಜ್ಯದ ಹಾಸ್ಟೆಲ್‌ಗಳು, ಪಿಜಿಗಳು ಮತ್ತು ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು 'ಕ್ಯೂಆರ್ ಕೋಡ್' ಆಧಾರಿತ ದೂರು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.

ಮಂಗಳೂರಲ್ಲಿ ಮಾತನಾಡಿದ ಅವರು, ಔಷಧಗಳ ಅತಿಯಾದ ದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ನೇರ ಅಧಿಕಾರವಿಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. "ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ಕೇವಲ ಪಟ್ಟಿ ಮಾಡಲಾದ ಔಷಧಗಳ ಮೇಲೆ ಮಾತ್ರ ನಿಯಂತ್ರಣ ಹೊಂದಿದೆ. ಉಳಿದ ಔಷಧಗಳ ಮೇಲೆ ಕಂಪನಿಗಳು ನೂರಾರು ಪಟ್ಟು ಲಾಭ ಪಡೆಯುತ್ತಿವೆ" ಎಂದು ಆರೋಪಿಸಿದರು. ಸರಿಸುಮಾರು 5 ಸಾವಿರ ರೂ. ಮೌಲ್ಯದ ಇಂಜೆಕ್ಷನ್ ಅನ್ನು ರೋಗಿಗಳಿಗೆ 60 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಒಂದು ಚಿಕಿತ್ಸೆಗೆ 70-80 ಸಾವಿರ ರೂ. ವೆಚ್ಚವಾಗಬೇಕಾದ ಜಾಗದಲ್ಲಿ 7.5 ಲಕ್ಷ ರೂ. ವರೆಗೆ ವಸೂಲಿ ಮಾಡಲಾಗುತ್ತಿದೆ. ಈ ಅನ್ಯಾಯದ ವಿರುದ್ಧ ಸುಪ್ರೀಂ ಕೋರ್ಟ್ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಕೂಡಲೇ ಕೇಂದ್ರ ಸರ್ಕಾರ 186 ಹೈ-ಬ್ರ್ಯಾಂಡ್ ಔಷಧಗಳನ್ನು ನಿಯಂತ್ರಣ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.

'ಕ್ಯೂಆರ್ ಕೋಡ್' ಮೂಲಕ ಆಹಾರ ಸುರಕ್ಷತೆ

ರಾಜ್ಯದ ಹೋಟೆಲ್‌ಗಳು, ಆಸ್ಪತ್ರೆಗಳ ಕ್ಯಾಂಟೀನ್, ಪಿಜಿ ಮತ್ತು ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ಸರಬರಾಜಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ಸರ್ಕಾರ ತಾಂತ್ರಿಕ ಆವಿಷ್ಕಾರಕ್ಕೆ ಮುಂದಾಗಿದೆ. ಸಾರ್ವಜನಿಕರು ಗುಣಮಟ್ಟವಿಲ್ಲದ ಆಹಾರ ಕಂಡ ತಕ್ಷಣ, ಆ ಸ್ಥಳದಲ್ಲಿರುವ 'ಕ್ಯೂಆರ್ ಕೋಡ್' ಸ್ಕ್ಯಾನ್ ಮಾಡಿ, ಫೋಟೋ ಸಮೇತ ದೂರು ದಾಖಲಿಸಬಹುದು. ಈ ದೂರುಗಳು ನೇರವಾಗಿ ಇಲಾಖಾ ಮೊಬೈಲ್‌ಗೆ ರವಾನೆಯಾಗುವುದರಿಂದ, ಸ್ಥಳೀಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದು ಕಡ್ಡಾಯವಾಗಿದೆ. "ಕೇವಲ ಲಾಭದ ಉದ್ದೇಶಕ್ಕಾಗಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು, ಇದು ಪಿಜಿ ಮತ್ತು ಹಾಸ್ಟೆಲ್ ನಿರ್ವಾಹಕರ ಸಾಮಾಜಿಕ ಜವಾಬ್ದಾರಿ" ಎಂದು ಎಚ್ಚರಿಸಿದರು.

ಹಿರಿಯ ನಾಗರಿಕರ ಪರಿಶೀಲನಾ ತಂಡ

ಆಹಾರ ಸುರಕ್ಷತಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಮತ್ತು ನಿರಂತರ ಮೇಲ್ವಿಚಾರಣೆಗಾಗಿ ಹೊಸ ಮಾರ್ಗೋಪಾಯವನ್ನು ಸಚಿವರು ಪ್ರಸ್ತಾಪಿಸಿದ್ದಾರೆ. ಪ್ರತಿ ತಾಲೂಕಿನಲ್ಲಿ 60 ವರ್ಷ ಮೇಲ್ಪಟ್ಟ ನಿವೃತ್ತ ಹಿರಿಯರನ್ನು ಒಳಗೊಂಡ ಪರಿಶೀಲನಾ ತಂಡವನ್ನು ರಚಿಸಿ, ಅವರು ಅನಿರೀಕ್ಷಿತ ತಪಾಸಣೆ ನಡೆಸುವಂತೆ ಮಾಡುವ ಚಿಂತನೆ ನಡೆದಿದೆ ಎಂದರು. ಇನ್ನು, ರಾಜ್ಯದಲ್ಲಿ ಹಾವು ಕಡಿತದ ಚಿಕಿತ್ಸೆಗೆ ಸಂಬಂಧಿಸಿದಂತೆ ಔಷಧ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 10 ವೈಲ್ಸ್ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 30 ವೈಲ್ಸ್ ಇಂಜೆಕ್ಷನ್‌ಗಳನ್ನು ಸಂಗ್ರಹಿಸಲಾಗಿದೆ. ಆಂಬ್ಯುಲೆನ್ಸ್‌ಗಳಲ್ಲಿ ಇವುಗಳನ್ನು ಕೊಂಡೊಯ್ಯಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯ ಕೊರತೆ ಇತ್ತು. ಮುಂದಿನ ಎರಡು ತಿಂಗಳೊಳಗೆ ಎಲ್ಲಾ 108 ಆಂಬ್ಯುಲೆನ್ಸ್‌ಗಳಲ್ಲಿ ಶೀತಲೀಕರಣ ವ್ಯವಸ್ಥೆ ಕಲ್ಪಿಸಿ, ತುರ್ತು ಚಿಕಿತ್ಸೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಆಹಾರ ಮತ್ತು ಔಷಧ ಗುಣಮಟ್ಟದ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜವಾಬ್ದಾರಿಯನ್ನು ಸ್ಪಷ್ಟಪಡಿಸಲು ನ.15 ರಂದು ಬೆಂಗಳೂರಿನಲ್ಲಿ ಮಹತ್ವದ ಚಿಂತನ ಸಭೆಯನ್ನು ಕರೆಯಲಾಗಿದೆ. ಇದರಲ್ಲಿ ವಿವಿಧ ರಾಜ್ಯಗಳ ಆಹಾರ ಮತ್ತು ಔಷಧ ಇಲಾಖೆಯ ಆಯುಕ್ತರು ಹಾಗೂ ತಜ್ಞರು ಭಾಗವಹಿಸಲಿದ್ದು, ಔಷಧಗಳ ದರ ನಿಯಂತ್ರಣ ಮತ್ತು ಗುಣಮಟ್ಟ ಸುಧಾರಣೆಗೆ ರಾಷ್ಟ್ರಮಟ್ಟದ ಕಾರ್ಯತಂತ್ರ ರೂಪಿಸಲಾಗುವುದು ಎಂದರು.

Read More
Next Story