ನೈಸ್‌ ರಸ್ತೆ ಟೋಲ್ ಸಂಗ್ರಹ ನಿಲ್ಲಿಸದಿದ್ದರೆ ಹೋರಾಟ : ಎಚ್‌ಡಿಕೆ ಎಚ್ಚರಿಕೆ
x

ನೈಸ್‌ ರಸ್ತೆ ಟೋಲ್ ಸಂಗ್ರಹ ನಿಲ್ಲಿಸದಿದ್ದರೆ ಹೋರಾಟ : ಎಚ್‌ಡಿಕೆ ಎಚ್ಚರಿಕೆ

ಹೈಕೋರ್ಟ್ ತೀವ್ರವಾಗಿ ಟೀಕಿಸಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಕ್ಷಣವೇ ನೈಸ್ ಕಂಪನಿಯ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು


Click the Play button to hear this message in audio format

ರಾಜ್ಯದ ಅತ್ಯಂತ ವಿವಾದಾತ್ಮಕ ಮತ್ತು ಬೃಹತ್ ಯೋಜನೆಗಳಲ್ಲಿ ಒಂದಾದ ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯು ಇದೀಗ ಮತ್ತೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆಯನ್ನು 'ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದು' ಎಂದು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ಟೀಕಿಸಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದು, ತಕ್ಷಣವೇ ನೈಸ್ ಕಂಪನಿಯ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಜುಲೈ 29ರಂದು ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದರು. "ನ್ಯಾಯಾಲಯವು ಈ ಯೋಜನೆಯನ್ನು ರಾಜ್ಯದ ಅತಿದೊಡ್ಡ ಹಗರಣ ಎಂದು ಕರೆದಿದೆ. ಯೋಜನೆಯಲ್ಲಿ ನಡೆದಿರುವ ವಂಚನೆ, ಅಕ್ರಮಗಳು ಮತ್ತು ವಾಹನ ಸವಾರರಿಂದ ನಡೆಯುತ್ತಿರುವ ಟೋಲ್ ಸುಲಿಗೆಯನ್ನು ಗಂಭೀರವಾಗಿ ಪರಿಗಣಿಸಿ, ತಜ್ಞರ ವಿಶೇಷ ತಂಡದಿಂದ ಸ್ವತಂತ್ರ ತನಿಖೆ ಹಾಗೂ ಫೊರೆನ್ಸಿಕ್ ಆಡಿಟ್ ನಡೆಸಬೇಕು ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನೈಸ್ ಕಂಪನಿಯು ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ನ್ಯಾಯಾಲಯವೇ ಹೇಳಿರುವಾಗ, ಸರ್ಕಾರ ಏಕೆ ಮೌನ ವಹಿಸಿದೆ? ಎಂದು ಪ್ರಶ್ನಿಸಿದರು.

ಸರ್ಕಾರಕ್ಕೆ ಎರಡು ವಾರಗಳ ಗಡುವನ್ನು ನೀಡಿದ್ದು, ಅಷ್ಟರೊಳಗೆ ಸರ್ಕಾರವು ಟೋಲ್ ಸಂಗ್ರಹಕ್ಕೆ ತಡೆ ಒಡ್ಡದಿದ್ದರೆ, ಜೆಡಿಎಸ್ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು. ತಕ್ಷಣವೇ ಸಾರ್ವಜನಿಕರು ಟೋಲ್ ಕಟ್ಟುವುದನ್ನು ನಿಲ್ಲಿಸಬೇಕು ಎಂದು ಅವರು ಕರೆ ನೀಡಿದರು. ಸರ್ಕಾರದ ರಕ್ಷಣೆಯ ಭರವಸೆ ಇಲ್ಲದಿದ್ದಾಗ ಜನರೇ ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಇದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಪ್ರಾಥಮಿಕ ಒಪ್ಪಂದ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಅಧಿಕಾರಿಗಳು ಮತ್ತು ಸರ್ಕಾರಗಳು ನೈಸ್ ಕಂಪನಿಗೆ ರೈತರ ಭೂಮಿಯನ್ನು ಮನಸೋಇಚ್ಚೆ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟವು. ಸುಮಾರು 20 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಲ್ಯಾಂಡ್ ಬ್ಯಾಂಕ್ ಹೆಸರಿನಲ್ಲಿ ವಶಪಡಿಸಿಕೊಳ್ಳಲಾಗಿದೆ. ರೈತರನ್ನು ಬೀದಿ ಪಾಲು ಮಾಡಿ, ಅವರ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಶೋಭಾ ಡೆವಲಪರ್ಸ್ ನಂಟಿನ ಬಗ್ಗೆ ಪ್ರಶ್ನೆ

ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ಸಾಕ್ಷಿಯೆಂಬಂತೆ ಶೋಭಾ ಡೆವಲಪರ್ಸ್ ಕಂಪನಿಗೆ ನೀಡಲಾದ ಎನ್.ಒ.ಸಿ ವಿಷಯವನ್ನು ಅವರು ಮುನ್ನೆಲೆಗೆ ತಂದರು. ಹೊಸಕೆರೆಹಳ್ಳಿ ಜಂಕ್ಷನ್ ಬಳಿ ರೈತರನ್ನು ಒಕ್ಕಲೆಬ್ಬಿಸಿ, ಅಲ್ಲಿ ಬಿಲ್ಡಿಂಗ್ ಕಟ್ಟಲು ನೈಸ್ ಕಂಪನಿಯು ಶೋಭಾ ಡೆವಲಪರ್ಸ್‌ಗೆ ಎನ್.ಒ.ಸಿ ನೀಡಿದೆ. ಈ ಭೂಮಿ ನೈಸ್ ಕಂಪನಿಯಪ್ಪನದೇ? ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗೆ ಪರಭಾರೆ ಮಾಡಲು ಇವರಿಗೆ ಅಧಿಕಾರ ನೀಡಿದವರು ಯಾರು? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಮೌನಕ್ಕೆ ಟೀಕೆ

ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ, ಜನಸಾಮಾನ್ಯರಿಗೆ ಲಂಚ ನೀಡಬೇಡಿ ಎಂದು ಕರೆ ನೀಡುತ್ತಿರುವ ಮುಖ್ಯಮಂತ್ರಿಯವರ ನಡೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. "ನೈಸ್ ಸಂಸ್ಥೆ ಮಾಡುತ್ತಿರುವ ಹಗಲು ದರೋಡೆ ನಿಮಗೆ ಕಾಣಿಸುತ್ತಿಲ್ಲವೇ? ಹೈಕೋರ್ಟ್ ತೀರ್ಪು ಕಣ್ಣಮುಂದೆಯೇ ಇದೆ. ರಾಜ್ಯ ಸರ್ಕಾರವು ಜಾಣಮೌನಕ್ಕೆ ಶರಣಾಗಿರುವುದು ಈ ಹಗರಣದಲ್ಲಿ ಸರ್ಕಾರಿ ವಲಯದವರೇ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಆರೋಪಿಸಿದರು.

ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರ ನೇತೃತ್ವದ ಸದನ ಸಮಿತಿಯು ಈ ಯೋಜನೆಯನ್ನು ಸರ್ಕಾರವೇ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಶಿಫಾರಸು ಮಾಡಿದ್ದನ್ನು ಕುಮಾರಸ್ವಾಮಿ ನೆನಪಿಸಿದರು. ರೈತರಿಗೆ ಕಳೆದ 20 ವರ್ಷಗಳಿಂದ ಪರಿಹಾರ ನೀಡಿಲ್ಲ. ಕೆಐಎಡಿಬಿ ಹಣ ನೀಡುವಲ್ಲಿ ವಿಫಲವಾಗಿದೆ. ಇತ್ತ ನೈಸ್ ಕಂಪನಿ ರೈತರ ಭೂಮಿಯನ್ನು ಕಬಳಿಸಿ ಲಾಭ ಮಾಡುತ್ತಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು, ನೈಸ್ ಅಧೀನದಲ್ಲಿರುವ ಭೂಮಿಯನ್ನು ಮರಳಿ ಪಡೆದು ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಒಂದು ವಾರದ ಕಾಲ ಕಾಯುತ್ತೇನೆ. ತದನಂತರ ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ, ಕಾನೂನುಬದ್ಧವಾಗಿ ಮತ್ತು ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

Read More
Next Story