2028ರ ಗುರಿಯೇ ಮುಖ್ಯ, ಕೆಟ್ಟ ಸರ್ಕಾರ ಹೋಗಲೇಬೇಕು: ಎಚ್.ಡಿ. ಕುಮಾರಸ್ವಾಮಿ
x

2028ರ ಗುರಿಯೇ ಮುಖ್ಯ, ಕೆಟ್ಟ ಸರ್ಕಾರ ಹೋಗಲೇಬೇಕು: ಎಚ್.ಡಿ. ಕುಮಾರಸ್ವಾಮಿ

ಮತ ಹಾಕಿದರೆ 40 ರಿಂದ 50 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂಬುದಾಗಿ ಜೆಡಿಎಸ್‌ ಶಾಸಕರಿಗೆ ಆಮಿಷ ತೋರಿಸಲಾಗಿದೆ. ಇದು ಕೇವಲ ಮತ ಸೆಳೆಯುವ ತಂತ್ರವಲ್ಲ, ಅಧಿಕಾರಕ್ಕಾಗಿನ ಅತಿರೇಕದ ರಾಜಕಾರಣ.


Click the Play button to hear this message in audio format

ವಿಧಾನ ಪರಿಷತ್ ಚುನಾವಣೆ ಮತ್ತು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದೀಗ ತೀವ್ರ ಸ್ವರೂಪ ಪಡೆದುಕೊಂಡಿವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪರಿಷತ್ ಚುನಾವಣೆಯಲ್ಲಿ ಶಾಸಕರನ್ನು ಸೆಳೆಯಲು ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿಗಳ ಆಮಿಷ ಒಡಲಾಗಿದೆ ಆರೋಪಿಸಿದ್ದಾರೆ. ಜೆಡಿಎಸ್‌ ಪಕ್ಷದ ಶಾಸಕರಿಗೆ ಮತ ಹಾಕಿದರೆ 40 ರಿಂದ 50 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಆಮಿಷ ತೋರಿಸಲಾಗಿದೆ. ಇದು ಕೇವಲ ಮತ ಸೆಳೆಯುವ ತಂತ್ರವಲ್ಲ, ಅಧಿಕಾರಕ್ಕಾಗಿನ ಅತಿರೇಕದ ರಾಜಕಾರಣ ಎಂದು ಕಿಡಿಕಾರಿದ್ದಾರೆ.

ಸರ್ಕಾರದ ಇಂತಹ ನಡೆಗಳು ಕ್ಷೇತ್ರದ ವಿಶ್ವಾಸವನ್ನು ಹಾಳು ಮಾಡುತ್ತಿವೆ. ಬಿರುಕು ಮೂಡಿಸುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಮುರಿಯುವುದು ಕಾಂಗ್ರೆಸ್‌ನ ಹಳೆಯ ಹುನ್ನಾರವಾಗಿದೆ. ಆದರೆ, ಇಂತಹ ತಂತ್ರಗಳಿಂದ ಮುಂದಿನ 2028ರ ಚುನಾವಣಾ ಫಲಿತಾಂಶದ ಮೇಲೆ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2028ರ ಗುರಿ, ಬಿಜೆಪಿ ನಾಯಕರ ಜೊತೆ ಚರ್ಚೆ

ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ನನ್ನ ಏಕೈಕ ಗುರಿ 2028ರ ಚುನಾವಣೆ. ರಾಜ್ಯದಲ್ಲಿ ಜನಪರ ಮತ್ತು ನಿರೀಕ್ಷಿತ ಕೆಲಸಗಳನ್ನು ಮಾಡುವಂತಹ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನನ್ನ ಸಂಕಲ್ಪ. ಅದಕ್ಕಾಗಿ ಈಗಿನ ಕೆಟ್ಟ ಸರ್ಕಾರವನ್ನು ಬುಡಮೇಲು ಮಾಡಬೇಕಿದೆ. ಈ ಬಗ್ಗೆ ಸತ್ಯಾಸತ್ಯತೆಯನ್ನು ಅರಿಯಲು ಬಿಜೆಪಿ ನಾಯಕರು ಮೂವರು ಸದಸ್ಯರ ತಂಡವೊಂದನ್ನು ರಚಿಸಿದ್ದಾರೆ. ಸಿ.ಟಿ. ರವಿ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ದೆಹಲಿಗೆ ತೆರಳಿದಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ, ರಾಜ್ಯದ ಎಲ್ಲಾ ವಾಸ್ತವಾಂಶಗಳನ್ನು ಅವರ ಮುಂದಿಡುತ್ತೇನೆ. ಪಕ್ಷದಲ್ಲಿ ಭಿನ್ನಮತ ಅಥವಾ ಅತೃಪ್ತಿ ಹೊಂದಿರುವ ಶಾಸಕರ ಬಗ್ಗೆ ನೇರ ಮಾತುಗಳನ್ನಾಡಿದ ಅವರು, ನಮ್ಮ ಪಕ್ಷದಲ್ಲಿ ಭವಿಷ್ಯ ಇಲ್ಲ ಎಂದು ಯಾರಾದರೂ ಭಾವಿಸಿದ್ದರೆ, ದಯವಿಟ್ಟು ನನಗೆ ನೇರವಾಗಿ ಹೇಳಿ ಹೋಗಿ. ಧೈರ್ಯವಾಗಿ ನನ್ನ ಬಳಿ ಬಂದು ಹೇಳಿ ಹೋದರೆ, ನಾನು ಸಂತೋಷವಾಗಿಯೇ ಕಳಿಸಿಕೊಡುತ್ತೇನೆ. ಆದರೆ, ಹಿಂಬಾಗಿಲ ರಾಜಕಾರಣದ ಮೂಲಕ ಪಕ್ಷಕ್ಕೆ ಮತ್ತು ಶಾಸಕರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ತನ್ನ ಶಾಸಕರು ಅಂತಿಮ ನಿರ್ಧಾರವನ್ನು ತನಗೇ ಬಿಟ್ಟುಕೊಟ್ಟಿದ್ದಾರೆ ಎಂದರು.

ಭ್ರಷ್ಟಾಚಾರದ ವಿರುದ್ಧ ಸಿಎಂಗೆ ಟೀಕೆ

ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವ್ಯಂಗ್ಯವಾಡಿದ ಕುಮಾರಸ್ವಾಮಿ, ಸಿಎಂ ಅವರು 10 ರೂಪಾಯಿ ಲಂಚ ಕೇಳಿದರೂ ನಮಗೆ ದೂರು ನೀಡಿ ಎಂದು ಯಾವುದೋ ಒಂದು ನಂಬರ್ ಇಟ್ಟಿದ್ದಾರೆ. ಆದರೆ ಅವರು ಫೋನ್ ಎಲ್ಲಿ ಇಟ್ಟಿದ್ದಾರೆಂಬುದೇ ಯಾರಿಗೂ ಗೊತ್ತಿಲ್ಲ. ಈ ಚುನಾವಣೆಯಲ್ಲಿ ನಡೆದಿರುವುದು 10 ರೂಪಾಯಿಯಲ್ಲ, ಅದರ ಹಿಂದೆ ಅಡಗಿರುವ ಹಣದ ವ್ಯವಹಾರ ಬಹಳ ದೊಡ್ಡದು. ಇಂತಹ ಸಂದರ್ಭದಲ್ಲಿ ಯಾರಿಗೆ ದೂರು ನೀಡಲಿ? ಎಂದು ಹೇಳಿದರು.

ಬಿಡದಿ ಟೌನ್‌ಶಿಪ್ ವಿವಾದ: ರೈತರ ಭೂಮಿ ಉಳಿವಿನ ಹೋರಾಟ

ಬಿಡದಿ ಟೌನ್‌ಶಿಪ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಂಡರೆ ರೈತರಿಗೆ ಸಿಗುವ ಬೆಲೆಗಿಂತಲೂ, ಆ ಜಮೀನನ್ನು ಅವರು ಹಾಗೆಯೇ ಇಟ್ಟುಕೊಂಡರೆ ಸಿಗುವ ಬೆಲೆ ಹೆಚ್ಚು. 20 ವರ್ಷಕ್ಕೆ 2 ಕೋಟಿ ಎಫ್‌ಡಿ ಇಟ್ಟರೆ ಬರುವ ಲಾಭಕ್ಕಿಂತ, ಅದೇ ಜಮೀನಿನ ಮೌಲ್ಯ 20 ಕೋಟಿಗೆ ಏರುತ್ತದೆ. ಇದನ್ನು ರೈತರಿಗೆ ಅರ್ಥ ಮಾಡಿಸಬೇಕಾಗಿದೆ. ಈ ವಿಚಾರವನ್ನು ನಾಡಿದ್ದು ಮಾಧ್ಯಮಗಳ ಮುಂದೆ ವಿಸ್ತೃತವಾಗಿ ತಿಳಿಸುತ್ತೇನೆ ಎಂದು ತಿಳಿಸಿದರು. ಕುಮಾರಸ್ವಾಮಿ ಅವರ ಈ ಮಾತುಗಳು ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ದೊಡ್ಡ ರಾಜಕೀಯ ಬದಲಾವಣೆಯ ಮುನ್ಸೂಚನೆಯಾಗಿವೆ. 2028ರ ಗುರಿಯನ್ನು ಸ್ಪಷ್ಟಪಡಿಸುವ ಮೂಲಕ ಅವರು ಮುಂದಿನ ಚುನಾವಣೆಗಾಗಿ ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿನ ಅತೃಪ್ತ ಶಾಸಕರಿಗೆ ಹೋಗುವುದಿದ್ದರೆ ಗೌರವದಿಂದ ಹೋಗಿ ಎಂದು ಹೇಳುವ ಮೂಲಕ, ಪಕ್ಷದೊಳಗಿನ ಅಶಿಸ್ತಿಗೆ ಕಡಿವಾಣ ಹಾಕುವ ಪ್ರಯತ್ನವನ್ನು ಅವರು ಮಾಡಿದ್ದಾರೆ.

Read More
Next Story