
ಆಸ್ಪತ್ರೆಯಲ್ಲಿ ಸಚಿವ ಸುಧಾಕರ್ ಅವರಿಂದ 'ಹೆಬ್ಬೆಟ್ಟು' ಒತ್ತಿಸಿಕೊಳ್ಳಲಾಗ್ತಿದ್ಯಾ? ಹೆಚ್‌ಡಿಕೆ ಪ್ರಶ್ನೆ!
ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಶಾಸಕ ಚಂದ್ರಪ್ಪ ಅವರ ಪುತ್ರನ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಎಚ್ಡಿ ಕುಮಾರಸ್ವಾಮಿ ಅವರು ಸರ್ಕಾರದ ನೀತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಬೆಂಗಳೂರಿನ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯದ ಕುರಿತು ರಾಜ್ಯ ಸರ್ಕಾರ ಜನತೆಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಶಾಸಕ ಚಂದ್ರಪ್ಪ ಅವರ ಪುತ್ರನ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ಕಳವಳ ವ್ಯಕ್ತಪಡಿಸಿದರು.
ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳಲಾಗುತ್ತಿದೆಯೇ?
"ಸಚಿವ ಡಿ. ಸುಧಾಕರ್ ಅವರು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಹೊರಗಡೆ ಜನರೇ ಬೇರೆ ಮಾತನಾಡುತ್ತಿದ್ದಾರೆ. ಆ ವ್ಯಕ್ತಿ ಆಸ್ಪತ್ರೆಯ ಒಳಗೆ ಎಷ್ಟು ನೋವು ಅನುಭವಿಸುತ್ತಿದ್ದಾರೆ? ಯಾವ ಕಾರಣಕ್ಕಾಗಿ ಕೆಲ ವಿಷಯಗಳನ್ನು ಮುಚ್ಚಿಡಲಾಗುತ್ತಿದೆ? ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಈ ರೀತಿ ಮಾಡಲಾಗುತ್ತಿದೆಯೇ? ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು" ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.
"ಇಂತಹ ವಿಚಾರಗಳಲ್ಲಿ ನಾನು ಹೆಚ್ಚು ಚರ್ಚೆ ಮಾಡುವುದಿಲ್ಲ. ಆದರೆ, ಕೆಲವರು ಇಂತಹ ಸೂಕ್ಷ್ಮ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಪರಿಣತರಾಗಿದ್ದಾರೆ. ಹೀಗಾಗಿ ಸತ್ಯಾಂಶವನ್ನು ಜನರಿಗೆ ತಿಳಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ," ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಕಾಂಗ್ರೆಸ್‌ನ ಅಹಿಂದ ಸಮಾವೇಶಕ್ಕೆ ಎಚ್‌ಡಿಕೆ ಟೀಕೆ
ಇದೇ ವೇಳೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ನ ಅಹಿಂದ ಸಮಾವೇಶದ ಕುರಿತು ತೀವ್ರ ವಾಗ್ದಾಳಿ ನಡೆಸಿದ ಎಚ್‌ಡಿಕೆ, "ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಅಹಿಂದ ಸಮಾವೇಶ ಮಾಡುತ್ತಿದೆ?" ಎಂದು ಕಿಡಿಕಾರಿದರು.
"ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಂದು ನಿರ್ದಿಷ್ಟ ಸಮುದಾಯವನ್ನು (ಅಹಿಂದ ವರ್ಗ) ಯಾವ ರೀತಿ ಅಪಮಾನಿಸಿ, ಅನುಮಾನದಿಂದ ನೋಡಿತು ಎಂಬುದನ್ನು ನಾವೆಲ್ಲರೂ ಕಂಡಿದ್ದೇವೆ. ಇದೀಗ ಕೇವಲ ಕುರ್ಚಿ ಉಳಿಸಿಕೊಳ್ಳಲು ದುಡ್ಡು ಖರ್ಚು ಮಾಡಿ ಜನರನ್ನು ಸೇರಿಸಿ ಅಹಿಂದ ಸಮಾವೇಶ ಮಾಡಲು ಹೊರಟಿದ್ದಾರೆ" ಎಂದು ಟೀಕಿಸಿದರು. "ಸ್ಥಳೀಯ ಸಂಸ್ಥೆಗಳ (ಜಿಪಂ, ತಾಪಂ) ಚುನಾವಣೆಗೆ ಹಣವಿಲ್ಲ, ಸಿಬ್ಬಂದಿ ಇಲ್ಲ ಎಂದು ಸರ್ಕಾರವೇ ಚುನಾವಣಾ ಆಯೋಗದ ಮೂಲಕ ನ್ಯಾಯಾಲಯಕ್ಕೆ ತಿಳಿಸಿ, ಚುನಾವಣೆ ಎದುರಿಸಲು ಬೆನ್ನು ತೋರಿಸಿ ಓಡಿಹೋಗುತ್ತಿದೆ" ಎಂದು ಅವರು ಆರೋಪಿಸಿದರು.
ಸಚಿವ ಸುಧಾಕರ್ ಆರೋಗ್ಯ ಸ್ಥಿತಿ ಹೇಗಿದೆ?
ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ಡಿ. ಸುಧಾಕರ್ ಅವರಿಗೆ, ಶಸ್ತ್ರಚಿಕಿತ್ಸೆಯ ನಂತರ ಶ್ವಾಸಕೋಶದ ಸೋಂಕು ಉಲ್ಬಣಗೊಂಡಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಎಲೆಕ್ಟ್ರಾನಿಕ್ ಸಿಟಿಯ 'ಕಿಮ್ಸ್' ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಐಸಿಯುನಲ್ಲಿ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

