ಲೈಂಗಿಕ ದೌರ್ಜನ್ಯ ಪ್ರಕರಣ; ಎಚ್‌.ಡಿ.ರೇವಣ್ಣಗೆ ಸುಪ್ರೀಂ ಬಿಗ್‌ ಶಾಕ್‌
x

ಲೈಂಗಿಕ ದೌರ್ಜನ್ಯ ಪ್ರಕರಣ; ಎಚ್‌.ಡಿ.ರೇವಣ್ಣಗೆ ಸುಪ್ರೀಂ ಬಿಗ್‌ ಶಾಕ್‌

ಎಚ್‌.ಡಿ.ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಮೇಲಿರುವುದು ಅತ್ಯಾಚಾರದಂತಹ ಗಂಭೀರ ಆರೋಪ. ಇಬ್ಬರ ಮೇಲೂ ಆರೋಪ ಇರುವಾಗ ಹೈಕೋರ್ಟ್ ತನ್ನಷ್ಟಕ್ಕೆ ತಾನೇ ಆರೋಪಗಳ ಸೆಕ್ಷನ್‌ ಬದಲಿಸಿದ್ದು ಹೇಗೆ ಎಂದು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ.


ಹೊಳೆನರಸೀಪುರದಲ್ಲಿ ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಸುಪ್ರೀಂಕೋರ್ಟ್ ಸೋಮವಾರ ನೋಟಿಸ್ ನೀಡಿದೆ. ಕರ್ನಾಟಕ ಹೈಕೋರ್ಟ್‌ನ ದೋಷಮುಕ್ತ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿನೋದ್ ಚಂದ್ರನ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಈ ನೋಟಿಸ್ ನೀಡಿದ್ದು, ಹೈಕೋರ್ಟ್ ಆದೇಶದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದೆ.

ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಗರಂ

ವಿಚಾರಣೆ ವೇಳೆ ಹೈಕೋರ್ಟ್ ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪೀಠವು, "ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಮೇಲಿರುವುದು ಅತ್ಯಾಚಾರದಂತಹ ಗಂಭೀರ ಆರೋಪ. ಇತ್ತ ಹೆಚ್.ಡಿ. ರೇವಣ್ಣ ವಿರುದ್ಧವೂ ಬೇರೆ ಆರೋಪಗಳಿವೆ. ಇಬ್ಬರ ಮೇಲೂ ಪ್ರತ್ಯೇಕ ಆರೋಪಗಳು ಇರುವಾಗ ಹೈಕೋರ್ಟ್ ತನ್ನಷ್ಟಕ್ಕೆ ತಾನೇ ಆರೋಪಿಗಳ ವಿರುದ್ಧದ ಆರೋಪಗಳ ಸೆಕ್ಷನ್‌ ಬದಲಿಸಿದ್ದು ಹೇಗೆ, ಪ್ರಕರಣವನ್ನು ಹೈಕೋರ್ಟ್ ಕೈಬಿಡಲು ಹೇಗೆ ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದೆ.

ಸರ್ಕಾರಕ್ಕೂ ಚಾಟಿ ಬೀಸಿದ ನ್ಯಾಯಾಲಯ

ಹೈಕೋರ್ಟ್ ಆದೇಶ ಪ್ರಕಟವಾಗಿ ಹಲವು ತಿಂಗಳು ಕಳೆದ ನಂತರ ತಡವಾಗಿ ಬಂದು ಮೇಲ್ಮನವಿ ಸಲ್ಲಿಸಿದ ಕರ್ನಾಟಕ ಸರ್ಕಾರದ ಧೋರಣೆಯನ್ನೂ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಕಾನೂನು ಪ್ರಕ್ರಿಯೆಯಲ್ಲಿ ಸ್ವಲ್ಪ ಶಿಸ್ತು ಇರಲಿ. ಹೈಕೋರ್ಟ್ ಆದೇಶ ನೀಡಿದ ಇಷ್ಟು ದಿನಗಳ ಕಾಲ ಸರ್ಕಾರ ಏನು ಮಾಡುತ್ತಿತ್ತು?, ಅರ್ಜಿ ಸಲ್ಲಿಸಲು ಇಷ್ಟು ಸುದೀರ್ಘ ಸಮಯ ತೆಗೆದುಕೊಂಡಿದ್ದು ಏಕೆ ಎಂದು ಪೀಠವು ಪ್ರಶ್ನಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ವಿರುದ್ಧ ಮನೆಕೆಲಸದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿ, 2024 ಏ.28ರಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ. ರೇವಣ್ಣ ಇಬ್ಬರ ಮೇಲೂ ಎಫ್ಐಆರ್ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ. ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ) ಹಾಗೂ ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ರೇವಣ್ಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಐಪಿಸಿ ಸೆಕ್ಷನ್ 354 ರದ್ದುಪಡಿಸಿ, ಕೇವಲ ಸೆಕ್ಷನ್ 354ಎ ಅಡಿ ಮಾತ್ರ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಸಲು ಆದೇಶಿಸಿತ್ತು. ತದನಂತರ ತಡವಾದ ದೂರಿನ ಕಾರಣ ನೀಡಿ ಕೆಳ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಈಗ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

Read More
Next Story