BLOs are working under pressure from Congress: H.D. Kumaraswamy
x

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ 

AEE ಗ್ರೇಡ್-1 ಹುದ್ದೆಗಳ ಅಕ್ರಮ ಪ್ರಕರಣ; ಸಚಿವ ಪ್ರಿಯಾಂಕ್ ಖರ್ಗೆಗೆ 10 ಪ್ರಶ್ನೆ ಕೇಳಿದ HDK

ಡಾ.ಕೃಷ್ಣ ಅವರ ಕಾಲದಲ್ಲಿ ಯಾವುದೇ ದೂರು ಅವರ ಮೇಲೆ ಇರಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರವೇ ಅವರ ಮೇಲೆ ಅನುಮಾನ ಪಟ್ಟರು. ಯಡಿಯೂರಪ್ಪ, ಶಂಕರ ಬಿದರಿ ಇನ್ನೂ ಬದುಕಿದ್ದಾರೆ. ಅವರಿಗೆ ಸತ್ಯ ಗೊತ್ತಿದೆ. ಕೇಳಿ ತಿಳಿದುಕೊಳ್ಳಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.


ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂಬ ನೆಪ ಹೇಳಿಕೊಂಡು ಒಂದೂವರೆ ವರ್ಷದಿಂದ ಸಹಾಯಕ ಎಂಜಿನಿಯರ್ ಗ್ರೇಡ್ -1 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ. ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಗಮನಕ್ಕೆ ಬಾರದೇ ಅಕ್ರಮ ಮಾರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಮೊದಲು ನನ್ನ ಇಷ್ಟೂ ಪ್ರಶ್ನೆಗಳಿಗೆ ಉತ್ತರ ಕೊಡಿ. ಉಳಿದದ್ದನ್ನು ಆಮೇಲೆ ಚರ್ಚೆ ಮಾಡೋಣ. ನಾನೇನು ಪಲಾಯನ ಮಾಡಿ ಓಡಿ ಹೋಗುವುದಿಲ್ಲ ಎಂದು ಸಚಿವ ಕುಮಾರಸ್ವಾಮಿ ಹೇಳಿದ್ದಾರೆ. ಜಗತ್ತಿನಲ್ಲಿ ನಡೆಯುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಅವರಿಗೆ ಮಾಹಿತಿ ಇರುತ್ತದೆ. ಆದರೆ, ತಮ್ಮ ಇಲಾಖೆಯಲ್ಲಿ ನಡೆಯುವ ವಿಷಯಗಳು ಮಾತ್ರ ತಿಳಿಯುವುದಿಲ್ಲ ಎಂದರೆ ನಾವು ನಂಬಬೇಕು, ಪ್ರಿಯಾಂಕ ಖರ್ಗೆ ಅವರೇ ಯಾರ ಕಿವಿಯಲ್ಲಿ ಹೂವು ಇಡಲು ಹೊರಟಿದ್ದೀರಿ ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಕೊಟ್ಟು, ಬಸ್ಸುಗಳಲ್ಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕರೆದುಕೊಂಡು ಹೋಗಿ ರೆಸಾರ್ಟ್ ನಲ್ಲಿ ಪರೀಕ್ಷೆ ಬರೆಸಿದ್ದಾರೆ ಎಂದು ಸಚಿವರು ಆರೋಪ ಮಾಡಿದ್ದಾರೆ. ನಡೆದಿರುವ ಹಗರಣದ ಬಗ್ಗೆ ನಾನು ಮಾತನಾಡುತ್ತಿದ್ದರೆ, ಮುಗಿದು ಹೋಗಿರುವ ವಿಷಯದ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡುತ್ತಿದ್ದಾರೆ. ನಾನು ಜೈಲಿನಲ್ಲಿ ಕೆಪಿಎಸ್ಸಿ ಮಾಜಿ ಅಧ್ಯಕ್ಷರನ್ನು ಭೇಟಿಯಾಗಿದ್ದು ನಿಜ. ನನ್ನ ಮೇಲಿನ ರಾಜಕೀಯ ಸೇಡಿಗಾಗಿ ಅವರನ್ನು ಬಲಿಪಶು ಮಾಡಲಾಯಿತು. ಇತ್ತೀಚೆಗೆ ಹೈಕೋರ್ಟ್ ಕೊಟ್ಟ ತೀರ್ಪನ್ನು ಬಹುಶಃ ಸಚಿವರು ಓದಿಲ್ಲ. ಅವರ ವಿರುದ್ಧ ಯಾವ ಆರೋಪ ಸಾಬೀತು ಮಾಡಲು ಸಾಧ್ಯವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಡಾ. ಹೆಚ್.ಎನ್.ಕೃಷ್ಣ ಅವರನ್ನು ನೇಮಿಸಿದ್ದು ಯಾರು ಎಂಬುದನ್ನು ನಿಮ್ಮ ತಂದೆಯನ್ನು ಕೇಳಪ್ಪ ಎಂದ ಕುಮಾರಸ್ವಾಮಿ, ಡಾ.ಕೃಷ್ಣ ಅವರ ಕಾಲದಲ್ಲಿ 13,000 ಜನರು ಉದ್ಯೋಗ ಪಡೆದರು ಎಂದು ಚಾಟಿ ಬೀಸಿದ್ದಾರೆ.

ಡಾ.ಕೃಷ್ಣ ಅವರ ಕಾಲದಲ್ಲಿ ಯಾವುದೇ ದೂರು ಅವರ ಮೇಲೆ ಇರಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರವೇ ಅವರ ಮೇಲೆ ಅನುಮಾನ ಪಟ್ಟರು. ಯಡಿಯೂರಪ್ಪ, ಶಂಕರ ಬಿದರಿ ಇನ್ನೂ ಬದುಕಿದ್ದಾರೆ. ಅವರಿಗೆ ಸತ್ಯ ಗೊತ್ತಿದೆ. ಕೇಳಿ ತಿಳಿದುಕೊಳ್ಳಿ. ನಾನು ಯಡಿಯೂರಪ್ಪ ಮನೆಗೆ ಹೋಗಿ ಬಂದಿದ್ದೆ. ನನ್ನ ಮತ್ತು ನಿಮ್ಮ ಗಲಾಟೆಯಲ್ಲಿ ಯಾವುದೇ ಆರೋಪ ಇಲ್ಲದವರ ಮೇಲೆ ಯಾಕೆ ಗದಾಪ್ರಹಾರ ಮಾಡುತ್ತೀರಿ ಎಂದು ಯಡಿಯೂರಪ್ಪ ಅವರನ್ನೇ ಕೇಳಿದ್ದೆ. ಅವರಿಗೆ ಅನ್ಯಾಯ ಮಾಡಬೇಡಿ ಎಂದು ಶಂಕರ ಬಿದರಿ ಅವರಿಗೂ ಹೇಳಿದ್ದೆ. ನಾನು ಕದ್ದೂಮುಚ್ಚಿ ರಾಜಕಾರಣ ಮಾಡುವುದಿಲ್ಲ. ಏನಿದ್ದರೂ ನೇರಾನೇರ ರಾಜಕಾರಣ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಗುಡುಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ನಾನು ಕೆಪಿಎಸ್ಸಿ ಅಭ್ಯರ್ಥಿಗಳ ಪರವಾಗಿ ನಾನು ಹೋರಾಟ ನಡೆಸಿದ್ದೆ. ವಿ.ಎಸ್. ಉಗ್ರಪ್ಪ ಅವರ ಸಂಬಂಧಿಕರು ದೂರು ಕೊಟ್ಟಿದ್ದರು. 362 ಹುದ್ದೆಗಳ ಸಂಬಂಧ ಕೆಲ ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಹೋಗಿದ್ದರು. ಆಗ ವಿಧಾನಸಭೆಯಲ್ಲಿ ಚರ್ಚೆ ಮಾಡಿ ಆಯ್ಕೆ ಪಟ್ಟಿ ತಡೆ ಹಿಡಿದಿದ್ದೇವೆ ಎಂದು ತಪ್ಪು ಮಾಹಿತಿ ಕೊಟ್ಟರು. ಅಭ್ಯರ್ಥಿಗಳು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ನ್ಯಾಯಯುತ ಕ್ರಮ ತೆಗೆದುಕೊಳ್ಳಿ ಎಂದು ದೇವೇಗೌಡರು ಪತ್ರ ಬರೆದಿದ್ದರು. ಖರ್ಗೆ ಅವರೇ.. ಮಾಹಿತಿ ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ ಎಂದು ಕುಮಾರಸ್ವಾಮಿ ಅವರು ಚಾಟಿ ಬೀಸಿದ್ದಾರೆ.

ಗೋವಿಂದರೆಡ್ಡಿ ಯಾರು ಎಂದ ಪ್ರಶ್ನಿಸಿದ ಎಚ್ಡಿಕೆ

ಅನ್ಯಾಯ ಆಗಿದ್ದಕ್ಕೆ ನಾನು ಧ್ವನಿ ಎತ್ತಿದೇನೆ. ಪ್ರಿಯಾಂಕ್ ಖರ್ಗೆ ಅವರೇ, ಒಂದು ಪ್ರಶ್ನೆ ಕೇಳುತ್ತೇನೆ ಉತ್ತರ ಕೊಡಿ. ನಿಮ್ಮ ಕುಟುಂಬಕ್ಕೆ ಆಪ್ತರಾಗಿರುವ ಗೋವಿಂದ ರೆಡ್ಡಿ ಯಾರ ಕಾಲದಲ್ಲಿ ಆಯ್ಕೆ ಆಗಿದ್ದು?, ಅವರ ಆಯ್ಕೆ ಹೇಗೆ ಆಯಿತು ಎಂಬುದನ್ನು ನಿಮ್ಮ ತಂದೆಯವರನ್ನು ಕೇಳಿ. ಆಹಾರ ಇಲಾಖೆಯಲ್ಲಿ ಅಧಿಕಾರಿ ಗ್ಯಾನೇಂದ್ರ ಇದ್ದರು. ಅಲ್ಲಿ ಇಬ್ಬರು ಹೆಣ್ಣುಮಕ್ಕಳು ಆಯ್ಕೆ ಹೇಗೆ ನಡೆಯಿತು ಎಂದು ಕೇಳಿ ತಿಳಿದುಕೊಳ್ಳಿ. ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಮ್ಮ ಇಬ್ಬರು ಮಕ್ಕಳನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದ್ದಾರೆ. ಇದೆಲ್ಲಾ ನಿಮಗೆ ಗೊತ್ತಿಲ್ಲವೆಂದರೆ ಹೇಗೆ ಪ್ರಿಯಾಂಕ್ ಖರ್ಗೆ ಅವರೇ? ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಹಾಯಕ ಎಂಜಿನಿಯರ್ ಗ್ರೇಡ್ -1 ಆಯ್ಕೆ ಮತ್ತು ನೇಮಕಾತಿಗೆ 2025ರಲ್ಲಿ ಉತ್ತೀರ್ಣರಾಗಿರುವ ಹುಡುಗರ ಕೈಯಲ್ಲಿ ಅರ್ಜಿ ಹಾಕಿಸುತ್ತಾರೆ. ಅದಕ್ಕೆ ಕೆಎಟಿ ಮಧ್ಯಂತರ ತಡೆ ಕೊಡಲ್ಲ. ಅದಾದ ಮೇಲೆ ಅವರು 11-2-2025 ರಂದು ಹೈಕೋರ್ಟ್'ಗೆ ಹೋಗುತ್ತಾರೆ. ಹೈಕೋರ್ಟ್'ನಲ್ಲಿ ಕೆಪಿಎಸ್ಸಿ ಸಬ್ ಕಮಿಟಿ ತನಿಖೆಯ ಅಂತಿಮ ಆದೇಶಕ್ಕೆ ಒಳಪಟ್ಟು ನೇಮಕಾತಿ ಇರುತ್ತದೆ ಎಂದು ಹೈಕೋರ್ಟ್ ಒಪ್ಪಿಗೆ ನೀಡುತ್ತದೆ. 2024ರಲ್ಲಿ ಅಂತಿಮ ಪಟ್ಟಿ ಬಿಡುಗಡೆ ಆಗುತ್ತಿದೆ. ಅಂದಿನ ಕಾರ್ಯದರ್ಶಿ ಆತುರಾತುರವಾಗಿ ನೇಮಕಾತಿ ಪತ್ರ ಕೊಡುತ್ತಾರೆ. ಒಂದೂವರೆ ವರ್ಷದಿಂದ ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಿಲ್ಲ ಯಾಕೆ? ಪ್ರಕರಣವನ್ನು ಮುಗಿಸಿಕೊಳ್ಳುವುದು ಇಷ್ಟವಿಲ್ಲದೆ ರಾಜ್ಯ ಸರ್ಕಾರ ಬೇಕೆಂದಲೇ ದಿನಾಂಕವನ್ನು ಮುಂದಕ್ಕೆ ಹಾಕಿಸಿಕೊಂಡು ಹೋಗುತ್ತಿದೆ ಎಂದು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಡೇಟ್ ಮೇಲೆ ಡೇಟ್ ಮುಂದಕ್ಕೆ ಹಾಕಿಸುತ್ತಿದ್ದೀರಿ

ನ್ಯಾಯಾಲಯದಲ್ಲಿ ಪ್ರಕರಣವಿದೆಯೆಂದು ಒಂದೂವರೆ ವರ್ಷದಿಂದ ಇಟ್ಟುಕೊಂಡಿದ್ದೀರಾ? ಅಂತಿಮ ಪಟ್ಟಿಯಲ್ಲಿ ಲೋಕದೋಷವಿದೆಯೆಂದು ಕೆಪಿಎಸ್ಸಿ ಅಧ್ಯಕ್ಷರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದದ್ದರು. ಆಗ ಆ ಇಲಾಖೆಯ ಮಂತ್ರಿ ಯಾರಾಗಿದ್ದರು? ಸದರಿ ಇಲಾಖೆಯ ಮಂತ್ರಿ ಗಮನಕ್ಕೆ ಬಾರದೇ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಯಿತ? ಯಾರಿಗೆ ಹೂ ಮುಡಿಸ್ತೀರಾ ಪ್ರಿಯಾಂಕ್ ಖರ್ಗೆ ಅವರೇ? ನಿಮಗೆ ಇದು ಗೊತ್ತಿಲ್ಲವಾ? ಆರ್ ಎಸ್ ಎಸ್ ಅಕೌಂಟ್ ಬಗ್ಗೆ ಕೇಳುತ್ತೀರಿ. ಮೊದಲು ಈ ಅಕೌಂಟ್ ಬಗ್ಗೆ ಮಾಹಿತಿ ಕೊಡಿ. ನಿಮ್ಮ ಗಮನಕ್ಕೆ ಬಾರದೇ ನೇಮಕಾತಿ ಪತ್ರ ಕೊಟ್ಟರಾ? ನಿಮ್ಮ ಗಮನಕ್ಕೆ ಬಾರದೇ ಕೋರ್ಟ್ ನಲ್ಲಿ ಕೇಸ್ ನಡೆಸ್ತಾ ಇದ್ದೀರಾ? ಪರೀಕ್ಷೆಯನ್ನು ಕೆಪಿಎಸ್ಸಿ ಮಾಡುತ್ತದೆ. ನೇಮಕಾತಿ ಪತ್ರ ಕೊಡುವುದು ಗ್ರಾಮೀಣಾಭಿವೃದ್ಧಿ ಇಲಾಖೆಯೇ ಅಲ್ಲವೇ? ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಪ್ರಿಯಾಂಕ್ ಖರ್ಗೆ ಅವರೇ.. ನೀವು ಈ ಅಕ್ರಮದಲ್ಲಿ ಭಾಗಿ ಆಗಿಲ್ಲ ಎಂದಾರೆ ನಾನು ಬಿಡುಗಡೆ ಮಾಡಿರುವ ದಾಖಲೆಗಳು ಏನು? ಎಂದು ಖರ್ಗೆ ವಿರುದ್ಧ ಕುಮಾರಸ್ವಾಮಿ ಅವರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಎಷ್ಟು ವರ್ಷ ಬೇಕಾದರೂ ತನಿಖೆ ಮಾಡಲಿ

ನಿಮ್ಮ ವಿರುದ್ಧ ಪ್ರಾಸಿಕ್ಯೂಷನ್ ನಡಸೋ ಬಗ್ಗೆ ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುತ್ತದೆ ಎಂದು ಸುದ್ದಿಗಾರರು ಗಮನ ಸೆಳೆದಾಗ, ನನ್ನ ಮೇಲೆ ಯಾವ ತನಿಖೆ ಬೇಕಾದರೂ ಮಾಡಿಕೊಳ್ಳಲಿ. ಎಷ್ಟು ವರ್ಷ ಬೇಕಾದರೂ ತನಿಖೆ ಮಾಡಲಿ. ಅದರಲ್ಲಿ ಏನೂ ಇಲ್ಲ ಎಂದು ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.

ಆ ಪ್ರಕರಣದಲ್ಲಿ ಏನೇನು ಇಲ್ಲವೆಂದು ಎಲ್ಲರಿಗೂ ಗೊತ್ತಿದೆ. ಆದರೂ ಅದನ್ನು ಇಟ್ಟುಕೊಂಡು ನನ್ನ ಬಾಯಿ ಮುಚ್ಚಿಸಲು ಪ್ರಯತ್ನ ಮಾಡುತ್ತಲೇ ಇದ್ದಾರೆ. ಇವರ ಅಕ್ರಮಗಳ ಬಗ್ಗೆ ನಾನು ಧನಿಯೆತ್ತುತ್ತೇನೆ ಎನ್ನುವ ಒಂದೇ ಕಾರಣಕ್ಕೆ ಇವರು ನನ್ನನ್ನು ಹೆದುರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವ ಪ್ರಶ್ನೆಯೇ ಇಲ್ಲ. ನಾನೇನು ದುಡ್ಡು ತೆಗೆದುಕೊಂಡಿದ್ದೇನೆಯೇ? ಅಥವಾ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿದ್ದೀನಾ? ಇಲ್ಲವಲ್ಲ ಎಂದು ಸಚಿವರು ಹೇಳಿದ್ದಾರೆ.

Read More
Next Story