
ದೆಹಲಿಯಲ್ಲಿ ಕೆಪಿಎಸ್‌ಸಿ ಅಕ್ರಮ ಪ್ರತಿಧ್ವನಿ; ಸಂತ್ರಸ್ತರ ಜತೆ ಸಂವಾದ ನಡೆಸಲು ರಾಹುಲ್ ಗಾಂಧಿಗೆ ಎಚ್‌ಡಿಕೆ ಒತ್ತಾಯ
ದೇಶದಲ್ಲಿ ನಡೆಯುವ ಎಲ್ಲಾ ವಿಷಯಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಅವರಿಗೆ ಮಾಹಿತಿ ಇರುತ್ತದೆ. ಆದರೆ, ಸ್ವತಃ ತಾವೇ ನಿರ್ವಹಿಸುತ್ತಿರುವ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಗೊತ್ತಾಗುವುದಿಲ್ಲ ಎಂದರೆ ಹೇಗೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕೆಪಿಎಸ್‌ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಜಟಾಪಟಿ ಮುಂದುವರಿಸಿದೆ. ಕರ್ನಾಟಕದ ಕೆಪಿಎಸ್‌ಸಿ ಅಕ್ರಮವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಷ್ಟ್ರ ರಾಜಧಾನಿಯಲ್ಲೂ ಪ್ರಸ್ತಾಪಿಸಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಬೆಂಗಳೂರಿಗೆ ಬಂದು ಕೆಪಿಎಸ್‌ಸಿ ಸಂತ್ರಸ್ತರೊಂದಿಗೆ ಸಂವಾದ ನಡೆಸುವಂತೆ ಒತ್ತಾಯಿಸಿದ್ದಾರೆ.
ಸಂವಿಧಾನದ ಪುಸ್ತಕ ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ರಾಹುಲ್ ಗಾಂಧಿ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತುಟಿ ಬಿಚ್ಚಬೇಕು. ಕೆಪಿಎಸ್‌ಸಿ ಸಂತ್ರಸ್ಥರ ಜೊತೆ ಚರ್ಚೆ ನಡೆಸಬೇಕು. ಕಾಂಗ್ರೆಸ್ ಪಕ್ಷದ ಸರ್ಕಾರ ಏನೇನು ಅಕ್ರಮಗಳಲ್ಲಿ ಭಾಗಿಯಾಗಿದೆ ಎಂಬುದನ್ನು ಸ್ವತಃ ಅರಿಯಬೇಕು. ರಾಹುಲ್ ಗಾಂಧಿ ಅವರು ನೀಟ್ ವಿಷಯವನ್ನು ಯಾವ ರೀತಿ ಹೇಗೆ ಎತ್ತಿಕೊಂಡು ಹೋರಾಟ ನಡೆಸಿದರೋ ಅದೇ ರೀತಿಯಲ್ಲಿ ಕೆಪಿಎಸ್‌ಸಿ ಹಗರಣದ ಬಗ್ಗೆಯೂ ಹೋರಾಟ ನಡೆಸಬೇಕು ಆಗ್ರಹಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ ಗ್ರೇಟ್ -1 ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ನಡೆದಿರುವ ಅಕ್ರಮದಿಂದ ಪ್ರಿಯಾಂಕ ಖರ್ಗೆ ಅವರು ನುಣುಚಿಕೊಳ್ಳಲು ಸಾಧ್ಯವಿಲ್ಲ. ಅಭ್ಯರ್ಥಿಗಳನ್ನು ರೆಸಾರ್ಟ್ನಲ್ಲಿ ಕೂರಿಸಿ ಪ್ರಶ್ನೆ ಪತ್ರಿಕೆ ಕೊಟ್ಟು ಓಎಂಆರ್ ಶೀಟ್‌ಗಳಲ್ಲಿ ಗುರುತು ಹಾಕಿಸಿರುವ ಅಕ್ರಮದಿಂದ ಪಾರಾಗಲು ಸಾಧ್ಯವಿಲ್ಲ. ಇದು ನನಗೆ ಸಂಬಂಧವಿಲ್ಲ ಎಂದು ಹೇಗೆ ಹೇಳುತ್ತಾರೆ ಎಂದು ಸಚಿವ ಕುಮಾರಸ್ವಾಮಿ ಕಟುವಾಗಿ ಪ್ರಶ್ನಿಸಿದ್ದಾರೆ.
ದೇಶದಲ್ಲಿ ನಡೆಯುವ ಎಲ್ಲಾ ವಿಷಯಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಅವರಿಗೆ ಮಾಹಿತಿ ಇರುತ್ತದೆ. ಆದರೆ, ಸ್ವತಃ ತಾವೇ ನಿರ್ವಹಿಸುತ್ತಿರುವ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಗೊತ್ತಾಗುವುದಿಲ್ಲ ಎಂದರೆ ಹೇಗೆ?, ಇಂತಹ ಅತಿಯಾದ ಜಾಣತನ ಪ್ರದರ್ಶಿಸುವ ಅಗತ್ಯವಿಲ್ಲ. ಜನರು ಬಹಳ ಬುದ್ಧಿವಂತರಿದ್ದಾರೆ. ಎಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಚಾಟಿ ಬೀಸಿದ್ದಾರೆ.
ʼನಿಮ್ಮ ಅನುಭವ ವಿಸ್ತರಿಸಲಿದೆʼ
ಎಇಇ ಗ್ರೇಡ್-1 ಹುದ್ದೆ ಮತ್ತು ಪಶುವೈದ್ಯಾಧಿಕಾರಿಗಳ ಆಯ್ಕೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಬಹಿರಂಗವಾಗಿ ಯುವಜನರ ಜೊತೆ ಸಂವಾದ ನಡೆಸಬೇಕು. ಅವರು ಎಲ್ಲಿದ್ದಾರೋ ಗೊತ್ತಿಲ್ಲ. ದೇಶದಲ್ಲಿಯೇ ಇದ್ದರೆ ಅವರು ತಕ್ಷಣವೇ ಬೆಂಗಳೂರಿಗೆ ಬಂದು ನಿರುದ್ಯೋಗಿ ಯುವಕರ ಮನವಿ ಆಲಿಸಬೇಕು. ಆಗ ಅವರ ಅನುಭವ ಮತ್ತಷ್ಟು ವಿಸ್ತಾರಗೊಳ್ಳುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದಾರೆ.
ಸಾಮಾನ್ಯವಾಗಿ ಪರೀಕ್ಷೆಗಳು ಶಾಲಾ-ಕಾಲೇಜುಗಳಲ್ಲಿ ನಡೆಯುತ್ತವೆ ಎಂಬುದು ನನಗೆ ಗೊತ್ತಿರುವ ವಿಷಯ. ಆದರೆ, ಪ್ರಿಯಾಂಕ ಖರ್ಗೆಯವರ ಇಲಾಖೆಗೆ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ರೆಸಾರ್ಟ್ನಲ್ಲಿ ಕೂರಿಸಿ ಪರೀಕ್ಷೆ ಬರಿಸಲಾಗಿದೆ. ನನಗೆ ಗೊತ್ತಿರುವ ಪ್ರಕಾರ ದೇಶದಲ್ಲಿಯೇ ಇದು ಮೊತ್ತ ಮೊದಲ ಪ್ರಯೋಗ. ಇದಕ್ಕಾಗಿ ಪ್ರಿಯಾಂಕ ಖರ್ಗೆ ಅವರನ್ನು ಭೇಷ್ ಎನ್ನಲೇಬೇಕು. ದುಡ್ಡು ಕೊಟ್ಟ ವಿದ್ಯಾರ್ಥಿಗಳಿಗೆ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಉತ್ತರ ಬರೆಸಲಾಗಿದೆ. ರಾಜ್ಯ ಸರ್ಕಾರದ ನಿಷ್ಕ್ರಿಯತೆ ಇಲ್ಲಿ ಸ್ಪುಟವಾಗಿ ಕಾಣುತ್ತದೆ. ಸಾಂವಿಧಾನಿಕ ಸಂಸ್ಥೆಯಾದರೂ ಅಕ್ರಮಗಳ ಆಗರವಾಗಿರುವ ಕೆಪಿಎಸ್ಸಿ ರಾಜ್ಯ ಸರ್ಕಾರದ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿದೆ ಎಂದು ಸಚಿವರು ಟೀಕಾಪ್ರಹಾರ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ವರ್ತನೆಯ ಬಗ್ಗೆ ಬಹಳ ಅಚ್ಚರಿ ಆಗುತ್ತಿದೆ. ಅವರಿಗೆ ಗೃಹ ಇಲಾಖೆ ಸಿಕ್ಕಿದ್ದು ಕೂಡಲೇ ಅವರಲ್ಲಿ ಏನೋ ಹೊಕ್ಕಿದಂತಾಗಿದೆ. ಅದು ದೆವ್ವದ ಶಕ್ತಿ ಎಂದು ನಾನು ಹೇಳುವುದಿಲ್ಲ. ಆದರೆ ಅವರು ಸಮತೋಲನ ಮೀರಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸತ್ಯ ಎಂದು ವ್ಯಂಗ್ಯವಾಡಿದ್ದಾರೆ.
ಕೆಪಿಎಸ್ಸಿ ಹಗರಣಗಳ ಬಗ್ಗೆ ಚರ್ಚೆ ಮಾಡಿರುವ ಪ್ರತಿ ಸಂದರ್ಭದಲ್ಲೂ ದಾಖಲೆ ಮುಂದಿಟ್ಟೇ ಮಾತನಾಡಿದ್ದೇನೆ. ತನಿಖಾ ವರದಿ, ಕಾರ್ಬನ್ನಿಂದ ತಿದ್ದಿದ ಓಎಂಆರ್ ಶೀಟ್, ಸಬ್ ಕಮಿಟಿ ವರದಿ ಇತ್ಯಾದಿ ಬಿಡುಗಡೆ ಮಾಡಿದ್ದೇನೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ಗ್ರೇಡ್-1 ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ರಾಜ್ಯದ ಮುಖ್ಯಮಂತ್ರಿಯೇ ಸದನದಲ್ಲಿ ಉತ್ತರ ನೀಡಿದ್ದಾರೆ. ಅದನ್ನು ಕೂಡ ಬಿಡುಗಡೆ ಮಾಡಿದ್ದೇನೆ. ಇದಕ್ಕಿಂತ ಇನ್ನೇನು ದಾಖಲೆ ಒದಗಿಸಬೇಕು. ಒಂದು ವೇಳೆ ಅವರಿಗೆ ಅರ್ಥವಾಗದಿದ್ದರೆ ಎಲ್ಲಾ ದಾಖಲೆಗಳನ್ನು ಅವರು ಮನೆಗೆ ಕಳಿಸುತ್ತೇನೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ʼನಿಮ್ಮ ಅಪ್ಪನನ್ನು ಕೇಳಿʼ
ನೀವು ದಿನಲೂ ಸಂವಿಧಾನ ಹಿಡಿದು ಓಡಾಡುತ್ತೀರಾ ಅಲ್ಲವೇ?, ಸಂವಿಧಾನದ ಬಗ್ಗೆ ನಿಮಗೆ ಗೊತ್ತಿಲ್ಲ ಎಂದರೆ ನಿಮ್ಮ ಅಪ್ಪನನ್ನು ಕೇಳಿ ತಿಳಿದುಕೊಳ್ಳಿ. ಮೊದಲು ಒಂದು ಕಮಿಟಿ ಮಾಡುತ್ತಾರೆ. ವರದಿ ಕೊಡುವುದಿಲ್ಲ. ನಂತರ ಐವರ ಸಮಿತಿ ಮಾಡುತ್ತಾರೆ. ಅವರು 40 ಸಭೆಗಳನ್ನು ಮಾಡುತ್ತಾರೆ. ಎಲ್ಲಾ ಅಕ್ರಮಗಳಿಗೂ ಅಂದಿನ ಕಾರ್ಯದರ್ಶಿ ಕಾರಣ ಎಂದು ಸಚಿವರು ಹೇಳಿದ್ದಾರೆ.
ಈ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಒಟ್ಟು 12 ಬಾರಿ ವಿಚಾರಣೆ ನಡೆದಿದೆ. ಎಲ್ಲಾ ಸಂದರ್ಭಗಳಲ್ಲಿ ಏನೋ ಒಂದು ನೆಪ ಹೇಳಿ ವಿಚಾರಣೆ ಮುಂದಕ್ಕೆ ಹಾಕಿಸಿಕೊಳ್ಳುವ ಪ್ರಯತ್ನ ಸರ್ಕಾರ ಮಾಡಿದೆ. ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೇ ತಪ್ಪು ಮಾಡುತ್ತಿದೆ. ಪಶು ವೈದ್ಯಾಧಿಕಾರಿಗಳ ಅಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಾಗ ಈ ಪ್ರಕರಣ ನನ್ನ ಗಮನಕ್ಕೆ ಬಂದಿತು. ಅವರ ಬಗ್ಗೆ ಹೇಳಿದ್ದೇನೆ ವಿನಾ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ವೈಯಕ್ತಿಕ ದ್ವೇಷವಾಗಲಿ ಅಥವಾ ಅಸೂಯೆ ಆಗಲಿ ನನಗೆ ಇಲ್ಲ ಎಂದು ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿಯಾಗಿ ನೇಮಕಾತಿ ಆದೇಶ ಕೊಡುವಾಗ ಸಂಬಂಧಪಟ್ಟ ಅಭ್ಯರ್ಥಿಗಳ ಆಯ್ಕೆಯ ನೇಮಕಾತಿ ಕಡತ ನಿಮ್ಮ ಮುಂದೆ ಬಂದಿಲ್ಲವೇ? ಎಂದು ನೇರವಾಗಿ ಪ್ರಶ್ನಿಸಿರುವ ಅವರು, ನನ್ನ ಪ್ರಕಾರ ಅಕ್ರಮ ನಡೆದಿರುವುದು ಎಲ್ಲರಿಗೂ ಗೊತ್ತಿತ್ತು, ಸ್ವತಃ ಪ್ರಿಯಾಂಕ್ ಖರ್ಗೆ ಅವರಿಗೂ ಸೇರಿ ಸರ್ಕಾರದಲ್ಲಿರುವ ಪ್ರತಿಯೊಬ್ಬರಿಗೂ ಈ ಅಕ್ರಮದ ಬಗ್ಗೆ ಮಾಹಿತಿ ಇತ್ತು. ಓಎಂಆರ್ ಶೀಟ್ ತಿದ್ದುಪಡಿ ಬಗ್ಗೆ ಯಾವಾಗ ಆರೋಪಗಳು ಕೇಳಿ ಬಂದು ಜಾರಿ ನಿರ್ದೇಶನಾಲಯ ರಂಗ ಪ್ರವೇಶ ಮಾಡಿತೋ ಅಲ್ಲಿಂದ ಇವರಿಗೆ ಭಯ ಶುರುವಾಯಿತು. ಇಡಿಯನ್ನು ಅಮಿತ್ ಶಾ ಅವರು ಕಳಿಸಿದರಾ? ಪ್ರಿಯಾಂಕ ಖರ್ಗೆ ಅವರೇ. ಇವತ್ತಿನ ನಿಮ್ಮ ಹೇಳಿಕೆ ನೋಡಿದರೆ ಇಡೀ ಹಗರಣದಲ್ಲಿ ನೀವು ಭಾಗಿಯಾಗಿರುವ ಅನುಮಾನ ಗಟ್ಟಿಯಾಗುತ್ತಿದೆ. ಸಿಐಡಿ ಪೊಲೀಸರು ಆ ಅಧಿಕಾರಿಯನ್ನು ಉತ್ತರ ಪ್ರದೇಶದಲ್ಲಿ ವಶಕ್ಕೆ ಪಡೆದು ಕರೆತಂದರು ಎಂದು ಸುಳ್ಳಿ ಹೇಳಿದ್ದೀರಿ. ಆದರೆ ಅಧಿಕಾರಿಯನ್ನು ಎಲ್ಲಿ ಇಟ್ಟು ರಕ್ಷಣೆ ಕೊಟ್ಟಿದ್ದೀರಿ ಸ್ವಲ್ಪ ಹೇಳುವಿರಾ ಎಂದು ಆಕ್ರೋಶ ಹೊರಹಾಕಿದ್ದಾರೆ.

