
ಹಿರಿಯೂರು ಉಪಚುನಾವಣೆ: ಒಮ್ಮತದ ಎನ್ಡಿಎ ಅಭ್ಯರ್ಥಿ ಕಣಕ್ಕೆ – ಎಚ್ಡಿಕೆ
ಮೈತ್ರಿಧರ್ಮದ ನಿಯಮಗಳನ್ನು ಪಾಲಿಸಿ, ಸಮನ್ವಯತೆಯಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಗೆಲುವಿಗೆ ರಣತಂತ್ರ ರೂಪಿಸಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆರ್ಥಿಕ ದುರಾಡಳಿತ, ರೈತ ವಿರೋಧಿ ಧೋರಣೆ, ಅಭಿವೃದ್ಧಿ ಕಾಮಗಾರಿಗಳ ವೈಫಲ್ಯ ಹಾಗೂ ಸಾರ್ವಜನಿಕ ತೆರಿಗೆ ಹಣದ ದುರ್ಬಳಕೆಯನ್ನು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ.
ಹಿರಿಯೂರು ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಎನ್ಡಿಎ (ಬಿಜೆಪಿ-ಜೆಡಿಎಸ್ ಮೈತ್ರಿಕೂಟ) ವತಿಯಿಂದ ಒಮ್ಮತದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸರ್ವಸಮ್ಮತ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿರ್ಧಾರವು ಯಾವುದೇ ಏಕಪಕ್ಷೀಯ ತೀರ್ಮಾನವಲ್ಲ, ಬದಲಾಗಿ ಚಿತ್ರದುರ್ಗ ಭಾಗದ ಪ್ರಮುಖ ಮತ್ತು ನಿರ್ಣಾಯಕ ಸಮುದಾಯವಾದ ಕಾಡುಗೊಲ್ಲ ಸಮಾಜದ ಹಿರಿಯ ಮುಖಂಡರು, ಸ್ಥಳೀಯ ಮುಖಂಡರು ಹಾಗೂ ದೆಹಲಿಯ ಕೇಂದ್ರ ಬಿಜೆಪಿ ವರಿಷ್ಠರೊಂದಿಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿದ ಬಳಿಕವೇ ಈ ಒಮ್ಮತಕ್ಕೆ ಬರಲಾಗಿದೆ. ಮೈತ್ರಿಧರ್ಮದ ಎಲ್ಲ ನಿಯಮಗಳನ್ನು ಪಾಲಿಸಿ, ಸಮನ್ವಯತೆಯಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯ ಭರ್ಜರಿ ಗೆಲುವಿಗೆ ರಣತಂತ್ರ ರೂಪಿಸಲಾಗಿದೆ ಎಂದು ಹೇಳಿದರು.
ನೀರಾವರಿ ಯೋಜನೆಗಳ ನಿರ್ಲಕ್ಷ್ಯ
ಚಿತ್ರದುರ್ಗ, ತುಮಕೂರು ಮತ್ತು ಕೋಲಾರದಂತಹ ಸದಾ ಬರಪೀಡಿತ, ಬಯಲುಸೀಮೆ ಜಿಲ್ಲೆಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. 2006-07ರಲ್ಲಿ ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸುವರ್ಣಾವಧಿಯಲ್ಲಿ ಈ ಭಾಗದ ಜನರ ಬವಣೆ ನೀಗಿಸಲು ಚಿತ್ರದುರ್ಗ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ನೂರಾರು ಕೆರೆಗಳಿಗೆ ನೀರು ತುಂಬಿಸುವ 4,500 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆಯ ಶಾಶ್ವತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಆದರೆ, ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ರಾಜಕೀಯ ದ್ವೇಷದಿಂದ ಸಂಪೂರ್ಣವಾಗಿ ಮೂಲೆಗುಂಪು ಮಾಡಿದೆ. ಬರದ ಛಾಯೆಯಲ್ಲಿರುವ ರೈತರ ಜೀವನಾಡಿಯಾಗಬೇಕಿದ್ದ ಕೆರೆ ತುಂಬಿಸುವ ಯೋಜನೆಗೆ ನಯಾಪೈಸೆ ಬಿಡುಗಡೆ ಮಾಡದೆ ಈ ಭಾಗದ ಜನತೆಗೆ ದ್ರೋಹ ಬಗೆಯಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯು ಸಂಪೂರ್ಣವಾಗಿ ಹಳಿ ತಪ್ಪಿದ್ದು, ಸರ್ಕಾರ ದಿವಾಳಿಯ ಅಂಚಿನಲ್ಲಿದೆ ಎಂಬುದಕ್ಕೆ ಗುತ್ತಿಗೆದಾರರ ಬಾಕಿ ಬಿಲ್ಗಳೇ ಸಾಕ್ಷಿ. ರಾಜ್ಯಾದ್ಯಂತ ವಿವಿಧ ಇಲಾಖೆಗಳಲ್ಲಿ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಸರ್ಕಾರದಿಂದ ಬರೋಬ್ಬರಿ 38 ಸಾವಿರ ಕೋಟಿ ರೂ. ಮೊತ್ತದ ಬಿಲ್ ಬಾಕಿ ಉಳಿದಿದೆ. ಹಣವಿಲ್ಲದೆ ಗುತ್ತಿಗೆದಾರರು ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ. ಬೊಕ್ಕಸದಲ್ಲಿ ಹಣವಿಲ್ಲದಿದ್ದರೂ, ಬಜೆಟ್ನಲ್ಲಿ ಯಾವುದೇ ಅನುದಾನ ಮೀಸಲಿಡದೆ ಸರ್ಕಾರ ದಿನಬೆಳಗಾದರೆ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ನಾಟಕವಾಡುತ್ತಿದೆ. ಯಾವುದೇ ಒಂದು ಕಾಮಗಾರಿಯೂ ಪೂರ್ಣಗೊಳ್ಳುವುದಿಲ್ಲ, ಹಣವೂ ಇರುವುದಿಲ್ಲ; ಕೇವಲ ಕಲ್ಲು ನೆಟ್ಟು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವುದು ಮತ್ತು ಜನರಿಗೆ ಮಂಕುಬೂದಿ ಎರಚಿ ಯಾಮಾರಿಸುವುದು ಕಾಂಗ್ರೆಸ್ ಪಕ್ಷಕ್ಕೆ ರಕ್ತಗತವಾಗಿ ಬಂದಿರುವ ಚಾಳಿ ಎಂದು ಲೇವಡಿ ಮಾಡಿದರು.
ಕಬ್ಬು ಬೆಳೆಗಾರರ ಬಿಕ್ಕಟ್ಟು
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಕಬ್ಬು ಬೆಳೆಗಾರರು ನ್ಯಾಯಯುತ ಬೆಂಬಲ ಬೆಲೆಗಾಗಿ ಬೀದಿಗಿಳಿದು ಕಣ್ಣೀರಿಡುತ್ತಿದ್ದರೂ ಸರ್ಕಾರ ಮಾತ್ರ ನಿಷ್ಕ್ರಿಯವಾಗಿದೆ. ಮುಖ್ಯಮಂತ್ರಿಗಳು ಬೆಂಗಳೂರಿನಿಂದ ವಿಶೇಷ ವಿಮಾನವೇರಿ ಬೆಳಗಾವಿಯ ಸುವರ್ಣಸೌಧಕ್ಕೆ ಅಷ್ಟೊಂದು ಮಿಂಚಿನ ವೇಗದಲ್ಲಿ ಹಾರಿದ್ದನ್ನು ಕಂಡು, ಪಾಪ ನಮ್ಮ ರಾಜ್ಯದ ಅನ್ನದಾತರಿಗೆ ಸರ್ಕಾರ ಏನೋ ಬಂಪರ್ ಕೊಡುಗೆ ನೀಡಲಿದೆ ಎಂದೇ ಭಾವಿಸಿದ್ದೆ. ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರೊಂದಿಗೆ ಬೆಳಗಿನ ಜಾವ ಒಂದೂವರೆ-ಎರಡು ಗಂಟೆಯವರೆಗೂ ನಿದ್ದೆಗೆಟ್ಟು ಸುದೀರ್ಘ ಸಭೆಗಳನ್ನು ನಡೆಸಿದರು. ಆದರೆ ಕೊನೆಗೆ ಸಿಕ್ಕ ಫಲಿತಾಂಶವೇನು? ಸಂಪೂರ್ಣ ಶೂನ್ಯ! ರೈತರ ಸಂಕಷ್ಟಕ್ಕೆ ಸ್ಪಂದಿಸಲು 'ಸರ್ಕಾರದ ಬಳಿ ದುಡ್ಡಿಲ್ಲ' ಎಂದು ಕೈಚೆಲ್ಲುವ ಮೂಲಕ ಮುಖ್ಯಮಂತ್ರಿಗಳು ರೈತರ ಮುಖಕ್ಕೆ ಮಸಿ ಬಳಿದರು ಎಂದು ವ್ಯಂಗ್ಯವಾಡಿದರು.
ಕೇಂದ್ರದ ಕಡೆಗೆ ಬೆರಳು ತೋರಿಸುವ ರಾಜ್ಯ ಸರ್ಕಾರಕ್ಕೆ ಪಕ್ಕದ ತಮಿಳುನಾಡು ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, "ತಮಿಳುನಾಡು ಸರ್ಕಾರವು ತನ್ನ ರಾಜ್ಯದ ಬೊಕ್ಕಸದಿಂದಲೇ ಪ್ರತಿ ಟನ್ ಕಬ್ಬಿಗೆ 700 ರೂ. ಹೆಚ್ಚುವರಿ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡುತ್ತಿದೆ. ಇಲ್ಲಿನ ರೈತರು ಪ್ರತಿ ಟನ್ಗೆ 1,000 ರೂ. ಹೆಚ್ಚುವರಿ ನೀಡುವಂತೆ ನ್ಯಾಯಯುತವಾಗಿ ಕೇಳುತ್ತಿದ್ದಾರೆ. ರಾಜ್ಯ ಸರ್ಕಾರ ಕನಿಷ್ಠ 750 ರೂ. ರಷ್ಟಾದರೂ ಹೆಚ್ಚುವರಿ ಪ್ರೋತ್ಸಾಹಧನ ನೀಡಿ ರೈತರ ಕೈಹಿಡಿಯುವುದು ಅದರ ಸಾಂವಿಧಾನಿಕ ಜವಾಬ್ದಾರಿ ಎಂದು ಒತ್ತಾಯಿಸಿದರು.
ರಾಜ್ಯದ ಸಕ್ಕರೆ ಲಾಬಿಯ ವಿರುದ್ಧ ಗುಡುಗಿದ ಕೇಂದ್ರ ಸಚಿವರು, "ಸಕ್ಕರೆ ಕಾರ್ಖಾನೆ ಮಾಲೀಕರೇನೂ ಬೀದಿಗೆ ಬಿದ್ದಿಲ್ಲ. ಕಳೆದ ವರ್ಷ ಎರಡು ಕಾರ್ಖಾನೆ ಹೊಂದಿದ್ದವರು ಈ ವರ್ಷ ಮೂರು ಕಾರ್ಖಾನೆಗಳನ್ನು ಸ್ಥಾಪಿಸುತ್ತಿದ್ದಾರೆ. ಬಹುತೇಕ ಕಾರ್ಖಾನೆ ಮಾಲೀಕರು ಸ್ವಂತ ಹೆಲಿಕಾಪ್ಟರ್ ಮತ್ತು ವಿಶೇಷ ವಿಮಾನಗಳನ್ನು ಇಟ್ಟುಕೊಂಡು ತಿರುಗಾಡುವಷ್ಟು ಸಿರಿವಂತರಾಗಿದ್ದಾರೆ. ಕಾರ್ಖಾನೆ ಮಾಲೀಕರಿಗೆ ಹಣದ ಕೊರತೆಯೇ ಇಲ್ಲ. ಹೀಗಿರುವಾಗ ಹೊಲದಲ್ಲಿ ಬೆವರು ಸುರಿಸುವ ರೈತ ಮಾತ್ರ ಸಾಲದ ಸುಳಿಯಲ್ಲಿ ಸಿಲುಕಿ ಸಾಯಬೇಕೇ? ಕಾರ್ಖಾನೆಗಳ ಜತೆ ಶಾಮೀಲಾಗದೆ ರೈತರ ಪರವಾಗಿ ಸರ್ಕಾರ ನಿಲ್ಲಬೇಕು" ಎಂದು ಆಗ್ರಹಿಸಿದರು. ತಾವು ಮುಖ್ಯಮಂತ್ರಿಯಾಗಿದ್ದ ದಿನಗಳನ್ನು ಸ್ಮರಿಸಿದ ಹೆಚ್ಡಿಕೆ, "ನನ್ನ ಆಡಳಿತಾವಧಿಯಲ್ಲಿ ರೈತರು ತಮ್ಮ ಹಕ್ಕಿಗಾಗಿ ರಸ್ತೆಗಿಳಿದು ಹೋರಾಟ ಮಾಡುವ ಪರಿಸ್ಥಿತಿಯನ್ನು ನಾನು ಎಂದಿಗೂ ತರಲಿಲ್ಲ. ರೈತರ ಸಮಸ್ಯೆ ಕಿವಿಗೆ ಬಿದ್ದ ತಕ್ಷಣವೇ ಒಂದು ಕ್ಷಣವೂ ವ್ಯರ್ಥ ಮಾಡದೆ ಅವರ ಪರವಾಗಿ ದಿಟ್ಟ ತೀರ್ಮಾನಗಳನ್ನು ಕೈಗೊಂಡಿದ್ದೆ" ಎಂದು ಹೆಮ್ಮೆಯಿಂದ ನುಡಿದರು.
‘ಭಾರತ ಜೋಡೋ ಕ್ಲಬ್’: "ಯಾರಪ್ಪನ ಮನೆ ದುಡ್ಡು ಹಂಚ್ತಾ ಇದ್ದೀರಿ?"
ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ, ಗ್ರಾಮೀಣ ಭಾಗದ ಪ್ರತಿ ಗ್ರಾಮ ಪಂಚಾಯಿತಿಗೆ ‘ಭಾರತ ಜೋಡೋ ಕ್ಲಬ್’ ಹೆಸರಿನಲ್ಲಿ 10 ಲಕ್ಷ ರೂ. ಅನುದಾನ ನೀಡುತ್ತಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಗ್ರಾಮ ಪಂಚಾಯಿತಿಗಳಲ್ಲಿನ ಚರಂಡಿ ಸ್ವಚ್ಛ ಮಾಡಲು, ಗಲೀಜು ತೆಗೆಯಲು ದುಡ್ಡಿಲ್ಲ. ಆದರೆ ನಿಮ್ಮ ಪಕ್ಷದ ನಾಯಕನ ಹೆಸರಿನ ‘ಭಾರತ ಜೋಡೋ’ ಕಾರ್ಯಕ್ರಮಕ್ಕೆ ಯಾರಪ್ಪನ ಮನೆ ದುಡ್ಡನ್ನು ಹಂಚುತ್ತಿದ್ದೀರಿ? ಇದು ಯಾರಿಗೆ ಕೊಡ್ತಾ ಇರುವ ಹಣ? ರಾಜ್ಯದ ಜನ ಕಷ್ಟಪಟ್ಟು ಕಟ್ಟಿದ ತೆರಿಗೆ ಹಣವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೋಷಿಸಲು ಮತ್ತು ಪಕ್ಷ ಬೆಳೆಸಲು ಈ ರೀತಿ ಲೂಟಿ ಹೊಡೆಯುತ್ತಿದ್ದೀರಾ? ಜನತೆ ಕೊಟ್ಟ ಹಣವನ್ನು ಅವರ ಕಲ್ಯಾಣಕ್ಕಾಗಿ ಸರಿಯಾಗಿ ಸದ್ಬಳಕೆ ಮಾಡಿ" ಎಂದು ಕಿಡಿಕಾರಿದರು.

