
ಸರ್ಕಾರಿ ನೌಕರರಿಗೆ ವೇತನ ವಿಳಂಬ; ಗ್ಯಾರಂಟಿ ಯೋಜನೆಗಳ ವಿರುದ್ಧ ವಿಪಕ್ಷಗಳ ಆಕ್ರೋಶ
ರಾಜ್ಯದ ಸಾಲದ ಪ್ರಮಾಣ ಸುಮಾರು 7,26,000 ಲಕ್ಷ ಕೋಟಿಗೂ ಹೆಚ್ಚಿದೆ. ಪ್ರತಿಯೊಬ್ಬರ ತಲೆಯ ಮೇಲೆಯೂ ಕನಿಷ್ಠ ಒಂದು ಲಕ್ಷ ರೂಪಾಯಿಗೂ ಅಧಿಕ ಸಾಲವಿದೆ. ಇದಕ್ಕೆ ಕಾರಣ ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಹೆಚ್ಚುತ್ತಿರುವ ಸಾಲದ ಹೊರೆ ಕುರಿತಂತೆ ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯದ ಆರ್ಥಿಕ ಶಿಸ್ತು ಮತ್ತು ಅಭಿವೃದ್ಧಿಯ ಗಂಭೀರತೆ ಇಲ್ಲದೇ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದೆ ಎಂದು ಆರೋಪಿಸಿವೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಸರ್ಕಾರಿ ನೌಕರರಿಗೆ ವೇತನ ಪಾವತಿಯೂ ಅಸಾಧ್ಯವಾಗಿದೆ. ಸರ್ಕಾರಿ ನೌಕರರಿಗೆ ಮಾರ್ಚ್ ತಿಂಗಳ ವೇತನ ನೀಡಿಲ್ಲ. ಇಂತಹ ಪರಿಸ್ಥಿತಿ ಕರ್ನಾಟಕ ಮಾತ್ರವಲ್ಲದೇ ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲೂ ಇದೆ. ಅಲ್ಲಿಯೂ ಸರ್ಕಾರಿ ನೌಕರರ ಸಂಬಳ ನೀಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೂರಿದ್ದಾರೆ.
ರಾಜ್ಯದ ಸಾಲದ ಪ್ರಮಾಣ ಸುಮಾರು 7,26,000 ಲಕ್ಷ ಕೋಟಿಗೂ ಹೆಚ್ಚಿದೆ. ಪ್ರತಿಯೊಬ್ಬರ ತಲೆಯ ಮೇಲೆಯೂ ಕನಿಷ್ಠ ಒಂದು ಲಕ್ಷ ರೂಪಾಯಿಗೂ ಅಧಿಕ ಸಾಲವಿದೆ. ಇದಕ್ಕೆ ಕಾರಣ ಯಾರು? , ಇದನ್ನು ತೀರಿಸುವವರು ಯಾರು?, ಇಷ್ಟು ಸಾಲವನ್ನು ಮಾಡಿದರೆ ರಾಜ್ಯ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಅನಗತ್ಯ ಬೆಲೆ ಏರಿಕೆ
ರಾಜ್ಯ ಸರ್ಕಾರ ಒಂದು ಕೈಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2000 ರೂ. ನೀಡುತ್ತಿದೆ. ಇನ್ನೊಂದು ಕೈಯಲ್ಲಿ ತೆರಿಗೆ ಮೇಲೆ ತೆರಿಗೆ ವಿಧಿಸಿ, ಜನರಿಂದಲೇ ಹಣ ವಸೂಲಿ ಮಾಡುತ್ತಿದೆ. ಇತ್ತೀಚೆಗೆ ವಿದ್ಯುತ್ ದರ, ಮದ್ಯದ ದರ ಏರಿಕೆ ಮಾಡಲಾಗಿದೆ. ಎಷ್ಟು ಸಾಧ್ಯವೊ ಅಷ್ಟು ಕಡೆ ಜನರನ್ನು ಕಿತ್ತು ತಿನ್ನುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಸಾಲದ ಬಹುಪಾಲು ಹಣ ಬಡ್ಡಿ ಪಾವತಿಗೆ ಮತ್ತು ಗ್ಯಾರಂಟಿ ಯೋಜನೆಗಳಿಗೆ ವೆಚ್ಚವಾದರೆ, ರಸ್ತೆ, ನೀರಾವರಿ ಮತ್ತು ಮೂಲಸೌಕರ್ಯಗಳಂತಹ ಶಾಶ್ವತ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಎದುರಾಗಲಿದೆ. ಇದೇ ಕಾರಣಕ್ಕೆ ಸಾಮಾನ್ಯ ಜನರ ಜೇಬಿನ ಮೇಲೆ 'ತೆರಿಗೆಯ ಹೊರೆ' ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಐದು ಸಾವಿರ ರೂ. ನೀಡುವ ಭರವಸೆ
ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು, " ನಾನು ಮುಖ್ಯಮಂತ್ರಿಯಾದರೆ ಮಹಿಳೆಯರಿಗೆ 5000 ರೂ. ನೆರವು ಕೊಡುತ್ತಿದ್ದೆ ಎಂದು ಹೇಳುವ ಮೂಲಕ ಕಾಂಗ್ರೆಸ್ನ ಗ್ಯಾರಂಟಿಯನ್ನು ಟೀಕಿಸಿದ್ದಾರೆ.
ಕೇವಲ ಉಚಿತ ಹಣ ನೀಡುವುದಕ್ಕಿಂತ, ಶಿಕ್ಷಕರ ನೇಮಕಾತಿ ಮತ್ತು ಯುವಕರ ಭವಿಷ್ಯದ ಬಗ್ಗೆ ಚಿಂತಿಸಬೇಕು. ನಮಗೆ 'ಉಚಿತ' ಹಣ ಮುಖ್ಯವೋ ಅಥವಾ ಮುಂದಿನ ಪೀಳಿಗೆಯ ಮೇಲೆ ಬೀಳುವ 'ಸಾಲದ ಹೊರೆ' ಮುಖ್ಯವೋ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ನೀಡುವ 2000 ಗ್ಯಾರಂಟಿ ಹಣಕ್ಕೆ ಯಾರೂ ಮರುಳಾಗಬಾರದು ಎಂದು ಹೇಳಿದರು.
ಒಂದು ಅವಕಾಶ ಕೊಡಿ, ರಾಮರಾಜ್ಯ ಮಾಡ್ತೇನೆ
ರಾಮರಾಜ್ಯ ಸ್ಥಾಪನೆಯಾಗಬೇಕು ಎಂದು ನೀವೆಲ್ಲರೂ ಆಂಜನೇಯನ ದೇವಸ್ಥಾನಗಳನ್ನು ಕಟ್ಟುತ್ತಿದ್ದೀರಿ. ಕೇಸರಿ ಶಾಲು ಹಾಕಿ ದೇವರನ್ನು ಪ್ರಾರ್ಥಿಸುತ್ತಿದ್ದೀರಿ. ನನ್ನದು ಕೂಡ ಅದೇ ಪ್ರಾರ್ಥನೆ. ಒಮ್ಮೆ ನನ್ನ ಕೈಗೆ ಸರ್ಕಾರ ಕೊಡಿ, ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಿ ತೋರಿಸುತ್ತೇನೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದರು.
ಯುವಕರು ಭುಜದ ಮೇಲೆ ಕೇಸರಿ ಶಾಲುಗಳನ್ನು ಧರಿಸಿರುವುದನ್ನು ಗಮನಿಸಿ ಮಾತನಾಡಿದ ಸಚಿವರು, ನೀವು ಮಾತ್ರ ಕೇಸರಿ ಶಾಲು ಹಾಕಿದ್ದೀರಿ ನನಗೆ ಕೊಟ್ಟಿಲ್ಲ. ನಾನು ಕೂಡ ನಿಮ್ಮಂತೆ ರಾಮಭಕ್ತ ಎಂದು ಸಚಿವರು ಹೇಳಿದರು.
ಕೇಸರಿ ಶಾಲು ನಮ್ಮ ಧರ್ಮದ ಸಂಕೇತ. ನಮ್ಮ ಧರ್ಮವು ವಿಶಾಲ ದೃಷ್ಟಿಕೋನದ ಮತ್ತು ಮಾನವೀಯ ಮೌಲ್ಯಗಳ ಆಧಾರದ ನಿಂತಿದೆ. ರಾಮನನ್ನು ನೆನಪು ಮಾಡಿಕೊಂಡಾಗಲಿಲ್ಲ ನಾವು ರಾಮರಾಜ್ಯ ಬಗ್ಗೆ ಮಾತನಾಡುತ್ತೇವೆ. ನನಗೆ ಒಂದೇ ಒಂದು ಸಲ ಅವಕಾಶ ಕೊಟ್ಟು ನೋಡಿ, ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

