ಅಡ್ಡಮತದಾನದ ಬಗ್ಗೆ ಮಾಹಿತಿ ಇತ್ತು, ಇದು ಆತ್ಮಸಾಕ್ಷಿಯ ಪರೀಕ್ಷೆ - ಎಚ್‌ಡಿಕೆ
x

ಅಡ್ಡಮತದಾನದ ಬಗ್ಗೆ ಮಾಹಿತಿ ಇತ್ತು, ಇದು ಆತ್ಮಸಾಕ್ಷಿಯ ಪರೀಕ್ಷೆ - ಎಚ್‌ಡಿಕೆ

ಅಡ್ಡ ಮತದಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪಕ್ಷದಲ್ಲಿ ಅಶಿಸ್ತು ತೋರುವವರನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.


Click the Play button to hear this message in audio format

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬೆಳವಣಿಗೆಗಳು ಜೆಡಿಎಸ್ ಪಕ್ಷದ ಆಂತರಿಕ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿವೆ. ಪಕ್ಷದ ಶಿಸ್ತನ್ನು ಗಾಳಿಗೆ ತೂರಿ, ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿ ಅಡ್ಡಮತದಾನ ಮಾಡಿದವರ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಅಶಿಸ್ತು ತೋರುವವರನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ನಡೆಯುತ್ತದೆ ಎಂಬುದು ನನಗೆ ಮೊದಲೇ ತಿಳಿದಿತ್ತು. ಅತಿಯಾದ ನಂಬಿಕೆ ಮತ್ತು ವಿಶ್ವಾಸವೇ ಪಕ್ಷಕ್ಕೆ ಉಂಟಾದ ಹಿನ್ನಡೆಗೆ ಕಾರಣ. ಆದರೆ, ನಾನು ಇದರಿಂದ ವಿಚಲಿತನಾಗಿಲ್ಲ. ಯಾರ್ಯಾರು ಪಕ್ಷದ ವಿರುದ್ಧ ಮತ ಹಾಕಿದ್ದಾರೆ ಎಂಬ ಸ್ಪಷ್ಟ ಮಾಹಿತಿ ನನ್ನ ಬಳಿ ಇದೆ. ನಾಲ್ವರು ಶಾಸಕರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ, ಅವರ ಪೂರ್ವಾಪರ ಎಲ್ಲವೂ ನನಗೆ ಗೊತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಅಭ್ಯರ್ಥಿಯನ್ನು ಕಣಕ್ಕಿಳಿಸಿದ ನಿರ್ಧಾರವನ್ನೇ ಒಂದು ಅಗ್ನಿ ಪರೀಕ್ಷೆ ಎಂದು ಕರೆದಿದ್ದಾರೆ. ಯಾರ್ಯಾರ ಆತ್ಮಸಾಕ್ಷಿ ಹೇಗೆ ವರ್ತಿಸುತ್ತದೆ ಎಂಬುದನ್ನು ಪರೀಕ್ಷಿಸಲು ನಾನು ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಯಿತು. ಅಂದುಕೊಂಡಂತೆ ಎಲ್ಲವೂ ನಡೆದಿದೆ. ಅಡ್ಡಮತದಾನ ಮಾಡಿದವರ ವಿರುದ್ಧ ಯಾವಾಗ, ಯಾವ ಕ್ರಮ ಕೈಗೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು ಎಂದು ನುಡಿದಿದ್ದಾರೆ.

'ಜೆನ್ ಜಿ' ತಲೆಮಾರಿಗೆ ಮಣೆ, ಹಳಬರಿಗೆ ಗೇಟ್‌ಪಾಸ್

ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ 'ಜೆನ್ ಜಿ' ಯುವಜನರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದಾಗಿ ಘೋಷಿಸಿದರು. ವಂಚನೆ, ಮೋಸ ನಮಗೆ ಹೊಸದಲ್ಲ. ಹೊಸ ನಾಯಕತ್ವವನ್ನು ರೂಪಿಸುವುದು ಹೇಗೆ ಎಂಬುದು ನನಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಶಾಸಕ ಜಿ.ಟಿ. ದೇವೇಗೌಡರ ಹೆಸರು ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, ನನ್ನ ಮುಂದೆ ಅವರ ಹೆಸರು ಎತ್ತಬೇಡಿ, ಕಳೆದ ಒಂದೂವರೆ ವರ್ಷದಿಂದ ನಾನು ಅವರ ಬಗ್ಗೆ ಚಕಾರ ಎತ್ತಿಲ್ಲ ಎಂದು ಖಾರವಾಗಿ ನುಡಿದರು. ಅಡ್ಡಮತದಾನದ ಹಿಂದೆ ಇರುವ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾ, ಅವರು ಈಗಾಗಲೇ ಪಕ್ಷದಿಂದ ಹೊರಗೆ ಇದ್ದಾರೆ ಎಂದರ್ಥದಲ್ಲಿ ಮಾತನಾಡಿದರು. ಹೆಚ್.ಡಿ. ದೇವೇಗೌಡ ಅವರ ಮೇಲೆ ಪ್ರೀತಿ ಹೊಂದಿರಬಹುದು, ಆದರೆ ಅಂತಿಮ ನಿರ್ಧಾರ ಪಕ್ಷದ ಹಿತದೃಷ್ಟಿಯಿಂದ ನಾನೇ ತೆಗೆದುಕೊಳ್ಳುತ್ತೇನೆ. ಅವರು ಯಾವ್ಯಾವ ಆಟ ಆಡಿದ್ದಾರೆ ಎಂಬುದು ನನಗೆ ಗೊತ್ತು, ಈ ಬಾರಿ ಯಾವುದೇ ವ್ಯಾಮೋಹಕ್ಕೆ ನಾನು ಬಲಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ರಾಜಕಾರಣಕ್ಕೆ ವಾಪಸ್?

ಕೇಂದ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ, ತಮ್ಮ ಹೃದಯ ರಾಜ್ಯ ರಾಜಕಾರಣದಲ್ಲೇ ಇದೆ ಎಂಬುದನ್ನು ಒತ್ತಿ ಹೇಳಿದರು. ಕೇಂದ್ರದಲ್ಲಿ ಇರುವುದು ತಾತ್ಕಾಲಿಕ, ನನಗೆ ರಾಜ್ಯವೇ ಶಾಶ್ವತ. ನಾನು ರಾಜ್ಯಕ್ಕೆ ಹೊಸದಾಗಿ ಬರುವ ಅಗತ್ಯವಿಲ್ಲ, ನಾನು ಪಕ್ಷದ ಅಧ್ಯಕ್ಷನಾಗಿ ಇಂದಿಗೂ ರಾಜ್ಯ ರಾಜಕೀಯವನ್ನು ನಿಯಂತ್ರಿಸುತ್ತಿದ್ದೇನೆ ಎಂದು ಹೇಳಿದರು. ಬಿಡದಿ ಟೌನ್‌ಶಿಪ್ ಯೋಜನೆಯ ಕುರಿತು ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ರೈತರ ಭೂಮಿಯನ್ನು ರಿಯಲ್ ಎಸ್ಟೇಟ್ ಕುಳಗಳ ಕೈಗೆ ಹೋಗದಂತೆ ತಡೆದಿದ್ದನ್ನು ನೆನಪಿಸಿಕೊಂಡರು. ನಾನು ರಿಯಲ್ ಎಸ್ಟೇಟ್ ಮಾಫಿಯಾದವನಾಗಿದ್ದರೆ, ಬಿಡದಿಯಲ್ಲಿ ಇವತ್ತು ಒಂದೇ ಒಂದು ಎಕರೆ ಭೂಮಿ ರೈತರ ಕೈಯಲ್ಲಿ ಉಳಿಯುತ್ತಿರಲಿಲ್ಲ. ನಾನು ರೆಡ್ ಜೋನ್ ತೆಗೆಯದಿದ್ದಕ್ಕೆ ರೈತರ ಭೂಮಿ ಉಳಿದಿದೆ. 2007ರಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಬಗ್ಗೆ ಏನು ಮಾತನಾಡಿದ್ದರು ಎಂಬ ಸಾಕ್ಷ್ಯಾಧಾರಗಳನ್ನು ನಾನು ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಡಿ.ಕೆ. ಶಿವಕುಮಾರ್‌ಗೆ ತಿರುಗೇಟು

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ರಬ್ಬಿಶ್ ಎಂದು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾನು ಹೇಳುತ್ತಿರುವುದು ಹಾಗಿರಲಿ, ರಾಜ್ಯದ ಜನತೆ ಇಂದು ಏನು ಹೇಳುತ್ತಿದ್ದಾರೆ ಎಂಬುದು ಮುಖ್ಯ. ನನ್ನ ಹೇಳಿಕೆಯನ್ನು ಜನರೇ ಅನುಮೋದಿಸುತ್ತಿದ್ದಾರೆ, ಅದಕ್ಕೆ ಅವರು ಏನು ಹೇಳುತ್ತಾರೆ? ಎಂದು ಲೇವಡಿ ಮಾಡಿದರು. ಕುಮಾರಸ್ವಾಮಿ ಅವರ ಈ ಮಾತುಗಳು ಜೆಡಿಎಸ್ ಪಕ್ಷದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆಯನ್ನು ನೀಡುತ್ತಿವೆ. ಪಕ್ಷವನ್ನು ಹಳೆಯ ನಾಯಕರ ಹಿಡಿತದಿಂದ ಮುಕ್ತಗೊಳಿಸಿ, ಯುವ ಪೀಳಿಗೆಯ ಕೈಗೆ ಒಪ್ಪಿಸುವ ಅವರ ನಿರ್ಧಾರವು ಆಂತರಿಕವಾಗಿ ದೊಡ್ಡ ಕ್ರಾಂತಿಗೆ ಕಾರಣವಾಗಬಹುದು. ಅಡ್ಡಮತದಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿರುವ ಅವರು, ಪಕ್ಷದ ಆಡಳಿತದಲ್ಲಿ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.

Read More
Next Story