ಡಿಕೆಶಿ ಹಳೆಯ ಚಾಳಿ ಬಿಟ್ಟಿಲ್ಲ: ಭೂಹಗರಣದ ಆರೋಪಕ್ಕೆ ಕುಮಾರಸ್ವಾಮಿ ಗರಂ..!
x

'ಡಿಕೆಶಿ ಹಳೆಯ ಚಾಳಿ ಬಿಟ್ಟಿಲ್ಲ': ಭೂಹಗರಣದ ಆರೋಪಕ್ಕೆ ಕುಮಾರಸ್ವಾಮಿ ಗರಂ..!

ಬಿಡದಿ ರೈತರ ಪರವಾಗಿ ಹೋರಾಟ ನಡೆಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ಪೋಸ್ಟರ್ ಅಭಿಯಾನದ ವಿರುದ್ಧ ಸಿಡಿದೆದ್ದಿದ್ದಾರೆ.


Click the Play button to hear this message in audio format

ರಾಜ್ಯ ರಾಜಕೀಯ ಅಖಾಡದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಮುಡಾ ಹಗರಣದ ಬಳಿಕ ಇದೀಗ ಬಿಡದಿ ಟೌನ್‌ಶಿಪ್ ಯೋಜನೆಯ ಭೂಹಗರಣದ ಆರೋಪ-ಪ್ರತ್ಯಾರೋಪಗಳು ಹೊಸ ಸಂಚಲನ ಮೂಡಿಸಿವೆ. ಬಿಡದಿ ರೈತರ ಪರವಾಗಿ ಹೋರಾಟ ನಡೆಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ಪೋಸ್ಟರ್ ಅಭಿಯಾನದ ವಿರುದ್ಧ ಸಿಡಿದೆದ್ದಿದ್ದಾರೆ. ಬಿಡದಿ ಭಾಗದಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಭಾವಚಿತ್ರಗಳನ್ನು ಬಳಸಿ ಅವಹೇಳನಕಾರಿ ಪೋಸ್ಟರ್‌ಗಳನ್ನು ಅಂಟಿಸಿರುವ ಕುರಿತು ಅತೀವ ಆಕ್ರೋಶ ವ್ಯಕ್ತಪಡಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

ಬುಧವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಭಾಗದಲ್ಲಿ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ಅಪಪ್ರಚಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಸಿಎಂ ಆದ ಮೇಲಾದರೂ ಡಿ.ಕೆ. ಶಿವಕುಮಾರ್ ತನ್ನ ಹಳೆಯ ಚಾಳಿಯನ್ನು ಬಿಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅಧಿಕಾರದ ಅಮಲಿನಲ್ಲಿ ಅವರು ಅಶ್ಲೀಲ ಸಿನಿಮಾ ಮಾಡಿಸುವುದು, ಪೋಸ್ಟರ್ ಅಂಟಿಸುವುದು, ಹನಿಟ್ರ್ಯಾಪ್ ಸಂಚು ರೂಪಿಸುವಂತಹ ಅಸಭ್ಯ ರಾಜಕೀಯದ ಹಳೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇದೇ ವೇಳೆ ವೈಯಕ್ತಿಕ ದಾಳಿಗಳಿಗೆ ತಾವು ಕುಗ್ಗುವ ಮನುಷ್ಯನಲ್ಲ, ಇಂತಹ ಅಪಪ್ರಚಾರಗಳು ತಮ್ಮ ಹೋರಾಟದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದರು.

ಭೂಮಿಯ ಲೆಕ್ಕಾಚಾರ: 100 ಎಕರೆ ಎಲ್ಲಿಂದ ಬಂತು?

ಪೋಸ್ಟರ್‌ಗಳಲ್ಲಿ ತಮ್ಮ ಹಾಗೂ ತಮ್ಮ ಪುತ್ರನ ಫೋಟೋ ಹಾಕಿ 100 ಎಕರೆ ಭೂಮಿಯ ವಿಷಯವನ್ನು ಪ್ರಸ್ತಾಪಿಸಿರುವ ಬಗ್ಗೆ ಕಿಡಿಕಾರಿದ ಅವರು, ಸತ್ಯಾಸತ್ಯತೆಯನ್ನು ಜನರ ಮುಂದೆ ತೆರೆದಿಟ್ಟರು. ನನ್ನ ಒಡೆತನದಲ್ಲಿ ಇರುವುದು ಕೇವಲ 46 ಎಕರೆ ಜಮೀನು. ಅದೂ ಕೂಡ ಸುಮಾರು 40 ವರ್ಷಗಳ ಹಿಂದೆ ಕಷ್ಟಪಟ್ಟು ಖರೀದಿಸಿದ್ದು. ಇನ್ನು ನನ್ನ ಪತ್ನಿ ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ಭೂಮಿ ಖರೀದಿಸಿದ್ದಾರೆ. ಈ 100 ಎಕರೆ ಎಲ್ಲಿಂದ ಬಂತು? ಸುಳ್ಳು ಆರೋಪ ಮಾಡುವ ಮುನ್ನ ದಾಖಲೆಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು. ತಮ್ಮ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ರೈತರ ದೃಷ್ಟಿಯನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ - 'ಸತ್ತವರ ಹೆಬ್ಬೆಟ್ಟು' ಪ್ರಸ್ತಾಪ

ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಇತಿಹಾಸವನ್ನು ಕೆದಕಿದ ಕುಮಾರಸ್ವಾಮಿ, ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಲಪಟಾಯಿಸಿದ ಕರಾಳ ಚರಿತ್ರೆ ಅವರದ್ದು ಎಂದು ವಾಗ್ದಾಳಿ ನಡೆಸಿದರು. ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸತ್ತವರ ಹೆಸರಿನಲ್ಲಿ ಭೂಮಿ ಲಪಟಾಯಿಸಿದ ಕೀರ್ತಿ ಡಿಕೆಶಿಯವರದು. ಇಂತಹ ಕರಾಳ ಇತಿಹಾಸವಿರುವ ವ್ಯಕ್ತಿಗಳು ಇವತ್ತು ಪೋಸ್ಟರ್ ಅಂಟಿಸಿ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿರುವ ವ್ಯಕ್ತಿಗೆ ಒಂದು ಘನತೆ, ಸ್ಟ್ಯಾಂಡರ್ಡ್ ಬೇಡವೇ? ಮುಖ್ಯಮಂತ್ರಿ ಕುರ್ಚಿಗೆ ಗೌರವ ಕೊಡದ ಇವರ ನಡೆ ರಾಜ್ಯದ ಜನತೆಗೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೈದ್ಧಾಂತಿಕವಾಗಿ ಅಥವಾ ರಾಜಕೀಯವಾಗಿ ಎದುರಿಸಲಾಗದವರು ಇಂತಹ ಕೀಳುಮಟ್ಟದ ಅಪಪ್ರಚಾರಗಳನ್ನು ಮಾಡುತ್ತಾರೆ. ಇದು 'ಕೈಲಾಗದವನ ಕೊನೆಯ ಅಸ್ತ್ರ'. ನನ್ನನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸಿದ ಆರೋಪ ವಿಧಾನಸಭೆಯಲ್ಲೇ ಕೇಳಿಬಂದಿತ್ತು. ಆಗ ಸತ್ಯ ಹೇಳುತ್ತೇನೆ ಎಂದಿದ್ದ ಮಂತ್ರಿಗಳು ನಂತರ ಬಾಯಿ ಮುಚ್ಚಿದರು. ಈಗ ಮತ್ತೆ ಪೋಸ್ಟರ್ ಅಭಿಯಾನದ ಮೂಲಕ ರಾಜಕೀಯ ವಿಕೃತಿ ಮೆರೆಯುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿನ ಇತರ ಬಿಜೆಪಿ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಮತ್ತು ಬಿ.ವೈ. ವಿಜಯೇಂದ್ರ ಅವರ ವಿರುದ್ಧವೂ ಇದೇ ರೀತಿಯಲ್ಲಿ ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ ಕುಮಾರಸ್ವಾಮಿ, ಇದು ಕಾಂಗ್ರೆಸ್ ಸಂಸ್ಕೃತಿಯ ಭಾಗವಾಗಿದೆ ಎಂದು ಟೀಕಿಸಿದರು. ತಮ್ಮ ರಾಜಕೀಯ ಮತ್ತು ವೈಯಕ್ತಿಕ ಬದುಕು ತೆರೆದ ಪುಸ್ತಕದಂತಿದೆ. ತಮ್ಮ ಕಾರ್ಯಕರ್ತರಿಗೆ ಮತ್ತು ಜನತೆಗೆ ತಮ್ಮ ಪ್ರಾಮಾಣಿಕತೆ ಬಗ್ಗೆ ಅರಿವಿದೆ ಎಂದರು. ನಾನು ಬಿಡದಿ ಟೌನ್‌ಶಿಪ್ ಯೋಜನೆಯನ್ನು ಆರಂಭದಲ್ಲಿ ಮಾಡಲು ಹೊರಟಿದ್ದು ಸತ್ಯ. ಆದರೆ ಸ್ಥಳೀಯ ರೈತರಿಗೆ ಮತ್ತು ಜನರಿಗೆ ಅದು ಬೇಡವಾಗಿದ್ದಾಗ, ಗೌರವಯುತವಾಗಿ ಆ ಯೋಜನೆಯನ್ನು ಅಲ್ಲಿಗೆ ಕೈಬಿಟ್ಟೆ. ನಾನು ಆ ಯೋಜನೆ ಮಾಡಲು ಹೊರಟಿದ್ದರೆ ಎರಡನೇ ಬಾರಿ ಸಿಎಂ ಆಗಿದ್ದಾಗ ಸುಲಭವಾಗಿ ಮಾಡಬಹುದಿತ್ತು. ಇವರಂತೆ ಜನ ವಿರೋಧಿ ಕೆಲಸ ಮಾಡಿ ದುಡ್ಡು ಹೊಡೆಯುವ ಜಾಯಮಾನ ನನ್ನದಲ್ಲ ಎಂದು ಸ್ಪಷ್ಟಪಡಿಸಿದರು.

Read More
Next Story