
ಭ್ರಷ್ಟಾಚಾರ, ಜಮೀನು ವೀಕ್ಷಣೆ ವಿಚಾರದಲ್ಲಿ ಸಿಎಂಗೆ ಎಚ್.ಡಿ.ಕೆ ತೀಕ್ಷ್ಣ ಪ್ರಶ್ನೆ
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರವನ್ನು ತಡೆಗಟ್ಟುವ ಬಗ್ಗೆ ಗಮನಹರಿಸಲು ಸಮಯವಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರವನ್ನು ತಡೆಗಟ್ಟುವ ಬಗ್ಗೆ ಗಮನಹರಿಸಲು ಸಮಯವಿಲ್ಲ; ಬದಲಾಗಿ ಖಾಲಿ ಜಾಗ ಹಾಗೂ ಸರ್ಕಾರಿ ಜಾಗ ಎಲ್ಲಿದೆ ಎಂದು ಹುಡುಕುವುದಕ್ಕಷ್ಟೇ ಸಮಯವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಜಯನಗರದ ಕ್ಲೌಡ್‌ನೈನ್ ಆಸ್ಪತ್ರೆಯ ಬಳಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಇಲ್ಲಿ 'ಬೇಲಿಯೇ ಎದ್ದು ಹೊಲ ಮೇಯುತ್ತಿದೆ' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
"ಇತ್ತೀಚೆಗೆ 20 ಗುಂಟೆ ಜಮೀನಿನ ಕೆಲಸಕ್ಕೆ ಸಂಬಂಧಿಸಿದಂತೆ ರೆವಿನ್ಯೂ ಇನ್ಸ್‌ಪೆಕ್ಟರ್ ಒಬ್ಬರು 50 ಸಾವಿರ ರೂ. ಲಂಚ ತೆಗೆದುಕೊಂಡು ಅಮಾನತುಗೊಂಡಿದ್ದಾರೆ. ಅದು ಭ್ರಷ್ಟಾಚಾರ ಅಲ್ಲವೇ?" ಎಂದು ಪ್ರಶ್ನಿಸಿದರು. ರಾಜ್ಯದ ಸಚಿವರೊಬ್ಬರು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಕೇಂದ್ರ ಸಚಿವರು, "ಅವರ ಸಚಿವರು ಹೇಳಿದಂತೆ ಅದು ಗೌರವಧನವೇ? ಗೌರವದಿಂದ ಕೊಡಬೇಕು ಎಂದರಲ್ಲ, ಅದಾ ಭ್ರಷ್ಟಾಚಾರವೋ ಅಲ್ಲವೋ?" ಎಂದು ಕುಟುಕಿದರು. ಸರ್ಕಾರಿ ಕಚೇರಿಗಳಲ್ಲಿ ಎಷ್ಟೋ ಕಡೆ ಕೆಲಸ ಮಾಡಿಕೊಡಲು ಹಣ ಪಡೆದು ಅಧಿಕಾರಿಗಳು ಸಿಕ್ಕಿಬೀಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಕುರಿತು ತಮ್ಮ ಬಳಿ 'ಟನ್‌ಗಟ್ಟಲೇ ದಾಖಲೆಗಳಿವೆ' ಎಂದು ಹೇಳಿಕೊಂಡರು.
ಸೋಂಪುರ ಬಳಿ ರಾತ್ರಿ ಜಮೀನು ವೀಕ್ಷಣೆ ಕುರಿತು ಸ್ಫೋಟಕ ಆರೋಪ
ಇದೇ ವೇಳೆ ಮುಖ್ಯಮಂತ್ರಿಗಳ ವಿರುದ್ಧ ಕುಮಾರಸ್ವಾಮಿ ಅವರು ಮತ್ತೊಂದು ಗಂಭೀರ ಆರೋಪವನ್ನು ಮಾಡಿದರು. "ಮುಖ್ಯಮಂತ್ರಿಗಳು ಸೋಂಪುರ ಹತ್ತಿರ ಅಥವಾ ಅದರ ಸುತ್ತಮುತ್ತಲಿನ ಯಾವುದೋ ಜಾಗದಲ್ಲಿ 150 ಎಕರೆ ಜಮೀನನ್ನು ನೋಡುವುದಕ್ಕೆ ರಾತ್ರಿ ಹೊತ್ತಿನಲ್ಲಿ ಖಾಸಗಿ ಕಾರಿನಲ್ಲಿ ಹೋಗಿದ್ದರು. ಆಗ ಇಷ್ಟೊತ್ತಿನಲ್ಲಿ ಯಾರೋ ಕಳ್ಳರು ಬಂದಿದ್ದಾರೆ ಎಂದು ಭಾವಿಸಿ ಹಳ್ಳಿ ಜನರು ಅವರನ್ನು ಓಡಿಸಿಕೊಂಡು ಬಂದಿದ್ದಾರೆ" ಎಂಬ ಸ್ಫೋಟಕ ಅಂಶವನ್ನು ಬಹಿರಂಗಪಡಿಸಿದರು. "ಈ ಘಟನೆ ಸುಳ್ಳೋ ನಿಜವೋ ಎಂಬುದನ್ನು ಮಾಧ್ಯಮದವರು ಮುಖ್ಯಮಂತ್ರಿಗಳನ್ನೇ ನೇರವಾಗಿ ಕೇಳಿ ಖಚಿತಪಡಿಸಿಕೊಳ್ಳಲಿ" ಎಂದು ಸವಾಲು ಹಾಕಿದರು.
ಜಪಾನ್ ಪ್ರವಾಸ, ದೇವೇಗೌಡರ ಕೊಡುಗೆ
ಮುಖ್ಯಮಂತ್ರಿಗಳು ಜಪಾನ್ ಪ್ರವಾಸಕ್ಕೆ ಹೋದ ಸಂದರ್ಭದಲ್ಲೂ ತಮ್ಮ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಡಳಿತದ 'ಸಾಕ್ಷಿಗುಡ್ಡೆ' ಕೇಳುತ್ತಿರುವುದಕ್ಕೆ ಕುಮಾರಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕಕ್ಕೆ ಟೊಯೋಟಾ ಕಂಪನಿ ಬಂದ ಹಿನ್ನೆಲೆಯನ್ನು ಸ್ಮರಿಸಿದ ಅವರು, "ಟೊಯೋಟಾ ಕಂಪನಿಯು ಮೂಲತಃ ಹರಿಯಾಣಕ್ಕೆ ಅಥವಾ ಮಹಾರಾಷ್ಟ್ರಕ್ಕೋ ಹೋಗಬೇಕಿತ್ತು. ಆ ಸಂದರ್ಭದಲ್ಲಿ ದೇವೇಗೌಡರು ವಿಶೇಷ ಮನವಿ ಮಾಡಿ ಟೊಯೋಟಾ ಕಂಪನಿಯನ್ನು ಕರ್ನಾಟಕಕ್ಕೆ ತಂದರು. ಆದರೆ ಕಾಂಗ್ರೆಸ್‌ನವರು ಆ ಯೋಜನೆಗೆ ಮರಳು ಮತ್ತು ಇಟ್ಟಿಗೆ ಪೂರೈಸಲು ಪೈಪೋಟಿಗೆ ಬಿದ್ದು ದುಡ್ಡು ಮಾಡಿಕೊಂಡರು. ಅಂತಹ ಕೆಲಸವನ್ನು ನಾವು ಎಂದಿಗೂ ಮಾಡಲಿಲ್ಲ" ಎಂದು ಆರೋಪಿಸಿದರು.
ಮುಂದುವರಿದು ರಾಜ್ಯದ ಕೈಗಾರಿಕಾ ಹೂಡಿಕೆ ಪರಿಸ್ಥಿತಿಯ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ ಅವರು, "ಟೊಯೋಟಾ ಕಂಪನಿಯವರು ತಮ್ಮ ಮಹತ್ವಾಕಾಂಕ್ಷಿ 'ಪ್ರಾಜೆಕ್ಟ್ 4' ಅನ್ನು ಕರ್ನಾಟಕದ ಬದಲಾಗಿ ಮಹಾರಾಷ್ಟ್ರಕ್ಕೆ ಯಾಕೆ ತೆಗೆದುಕೊಂಡು ಹೋದರು? ಅಲ್ಲಿ ಅವರು ಬರೋಬ್ಬರಿ 25 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಟೊಯೋಟಾದವರು ಮಹಾರಾಷ್ಟ್ರದತ್ತ ಮುಖ ಮಾಡಲು ಯಾರು ಕಾರಣ? ಇಷ್ಟೆಲ್ಲಾ ನಡೆಯುತ್ತಿದ್ದರೂ ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಕಿಡಿಕಾರಿದರು.

