ಭಾನುವಾರ ಸಂಜೆ 4 ಗಂಟೆಯ ಗಡುವು; ಕ್ಲೌಡ್ ನೈನ್ ಆಸ್ಪತ್ರೆಗೆ ಎಚ್‌ಡಿಕೆ ಎಚ್ಚರಿಕೆ
x

ಭಾನುವಾರ ಸಂಜೆ 4 ಗಂಟೆಯ ಗಡುವು; ಕ್ಲೌಡ್ ನೈನ್ ಆಸ್ಪತ್ರೆಗೆ ಎಚ್‌ಡಿಕೆ ಎಚ್ಚರಿಕೆ

ಕ್ಲೌಡ್ ನೈನ್ ಆಸ್ಪತ್ರೆಯವರು ಬಹುದೊಡ್ಡ ತಪ್ಪು ಮಾಡಿ, ಈಗ ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಮಗುವಿಗೆ ಅನಸ್ತೇಶಿಯಾ ನೀಡಿದ್ದರಿಂದಲೇ ಮಿದುಳಿಗೆ ಗಂಭೀರ ತೊಂದರೆಯಾಗಿದೆ.


Click the Play button to hear this message in audio format

ವೈದ್ಯರ ನಿರ್ಲಕ್ಷ್ಯದಿಂದಾಗಿ ಕಳೆದ ಮೂರು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿರುವ ಒಂದು ವರ್ಷದ ಮಗು ಶಯಾನ ಆರೋಗ್ಯ ಸ್ಥಿತಿಯನ್ನು ವಿಚಾರಿಸಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಯನಗರದ ಕ್ಲೌಡ್‌ನೈನ್ ಆಸ್ಪತ್ರೆಗೆ ಭೇಟಿ ನೀಡಿದರು. ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವ ಮಗುವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯವರು ದೊಡ್ಡ ತಪ್ಪು ಮಾಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮಗುವಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಆಡಳಿತ ಮಂಡಳಿಗೆ ಭಾನುವಾರ ಸಂಜೆ 4 ಗಂಟೆಯವರೆಗೆ ಗಡುವು ನೀಡಿದ್ದಾರೆ.

"ಕ್ಲೌಡ್ ನೈನ್ ಆಸ್ಪತ್ರೆಯವರು ಬಹುದೊಡ್ಡ ತಪ್ಪು ಮಾಡಿ, ಈಗ ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಮಗುವಿಗೆ ಅನಸ್ತೇಶಿಯಾ ನೀಡಿದ್ದರಿಂದಲೇ ಮಿದುಳಿಗೆ ಗಂಭೀರ ತೊಂದರೆಯಾಗಿದೆ. ಇಷ್ಟೆಲ್ಲಾ ಅನಾಹುತ ಸಂಭವಿಸಿದ್ದರೂ ಆಸ್ಪತ್ರೆಯವರಿಗೆ ತಾವು ಮಾಡಿರುವ ತಪ್ಪಿನ ಬಗ್ಗೆ ಕಿಂಚಿತ್ತೂ ಪಾಪಪ್ರಜ್ಞೆ ಇಲ್ಲ" ಎಂದು ಕಿಡಿಕಾರಿದರು.

"ಭಾನುವಾರ ಸಂಜೆ 4 ಗಂಟೆಯವರೆಗೂ ನಾನು ಸಮಯ ನೀಡುತ್ತೇನೆ. ಅಷ್ಟರೊಳಗೆ ಆಸ್ಪತ್ರೆಯ ಆಡಳಿತ ಮಂಡಳಿಯವರು ಮುಂದೆ ಬಂದು ನನ್ನನ್ನು ಹಾಗೂ ಮಗುವಿನ ಪೋಷಕರನ್ನು ಭೇಟಿ ಮಾಡಬೇಕು. ಮಗುವಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ, ಆಸ್ಪತ್ರೆ ನಡೆಸುವುದೇ ಕಷ್ಟವಾಗಲಿದೆ. ಆಮೇಲೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನನ್ನ ಸೌಮ್ಯ ಸ್ವಭಾವವನ್ನು ದೌರ್ಬಲ್ಯ ಎಂದು ತಿಳಿದುಕೊಳ್ಳುವುದು ಸರಿಯಲ್ಲ" ಎಂದು ಖಡಕ್ ಎಚ್ಚರಿಕೆ ನೀಡಿದರು.

ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ

ಆಸ್ಪತ್ರೆಯ ವಿರುದ್ಧ ಕಾನೂನು ಹೋರಾಟ ನಡೆಸುವ ಕುರಿತು ಮಾಹಿತಿ ನೀಡಿದ ಅವರು, "ಕ್ಲೌಡ್ ನೈನ್ ಆಸ್ಪತ್ರೆಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಮುಂದೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ" ಎಂದು ತಿಳಿಸಿದರು. ಕೇವಲ ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ್ದು ಮಾತ್ರವಲ್ಲದೆ, ನೊಂದಿರುವ ಮಗುವಿನ ತಂದೆ-ತಾಯಿಯನ್ನೂ ಆಸ್ಪತ್ರೆಯವರು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿಗೆ ದುಡ್ಡಿನ ಮದ ಆ ರೀತಿ ಇದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಒಂದು ವರ್ಷದ ಮಗು ಶಯಾನ ಕಿವಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಕೊಡಿಸಲು ಪೋಷಕರು ನಾಗರಬಾವಿಯ ಕ್ಲೌಡ್ ನೈನ್ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಮಗುವಿಗೆ ಅನಸ್ತೇಶಿಯಾ ನೀಡಲಾಗಿದೆ. ಆದರೆ, ನುರಿತ ಹಾಗೂ ತಜ್ಞ ವೈದ್ಯರು ಚಿಕಿತ್ಸೆ ನೀಡುವ ಬದಲು ಬೇರೆಯವರು ಚಿಕಿತ್ಸೆ ನೀಡಿದ ಪರಿಣಾಮ ಮಗುವಿನ ಆರೋಗ್ಯ ತೀವ್ರ ಅಪಾಯಕ್ಕೆ ಸಿಲುಕಿ ಕೋಮಾ ಹಂತಕ್ಕೆ ತಲುಪಿದೆ ಎಂದು ಆರೋಪಿಸಲಾಗಿದೆ. ನಾಗರಬಾವಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ, ನಂತರ ಮಗುವನ್ನು ಜಯನಗರದ ಕ್ಲೌಡ್ ನೈನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಜಯನಗರದ ಶಾಖೆಯಲ್ಲೂ ಮಗುವಿನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಿಸುತ್ತಿಲ್ಲ. ಅಲ್ಲದೆ, ಆಸ್ಪತ್ರೆಯ ಸಿಬ್ಬಂದಿ ಮಗುವಿನ ಪೋಷಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಯಾವುದೇ ಸಹಕಾರ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಖಾಸಗಿ ಆಸ್ಪತ್ರೆಯ ಧೋರಣೆಗೆ ಖಂಡನೆ

ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಪರಿಸ್ಥಿತಿಯನ್ನು ಕಂಡು ಭಾವುಕರಾದ ಕುಮಾರಸ್ವಾಮಿ ಅವರು, "ಕಳೆದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಸ್ಥಿತಿಯನ್ನು ನಾನು ಗಮನಿಸುತ್ತಿದ್ದೇನೆ. ಮಗು ಮೊದಲಿನಂತೆ ಸಂಪೂರ್ಣ ಗುಣಮುಖವಾಗಿ ಮನೆಗೆ ಮರಳಬೇಕು ಎಂಬುದು ನನ್ನ ಆಶಯವಾಗಿತ್ತು. ಆದರೆ, ವೈದ್ಯರು ಸರಿಯಾದ ಚಿಕಿತ್ಸೆ ನೀಡದೆ ಇಲ್ಲಿಯೂ ನಿರ್ಲಕ್ಷ್ಯ ಮುಂದುವರಿಸಿದ್ದಾರೆ. ಈ ಘಟನೆಯಿಂದ ವೈಯಕ್ತಿಕವಾಗಿ ನನಗೆ ಬಹಳ ನೋವು ಉಂಟಾಗಿದೆ. ಕೇವಲ ದುಡ್ಡು ಮಾಡಲು ನಿಂತಿರುವ ಈ ಖಾಸಗಿ ಆಸ್ಪತ್ರೆಯು ಪುಟ್ಟ ಮಗುವಿನ ಆರೋಗ್ಯದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಕೇಂದ್ರ ಸಚಿವರ ಈ ಎಚ್ಚರಿಕೆಯ ಬಳಿಕ ಭಾನುವಾರ ಸಂಜೆ 4 ಗಂಟೆಯೊಳಗೆ ಕ್ಲೌಡ್ ನೈನ್ ಆಸ್ಪತ್ರೆ ಆಡಳಿತ ಮಂಡಳಿ ಯಾವ ರೀತಿ ಸ್ಪಂದಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

Read More
Next Story