
ಬಿಡದಿ ಟೌನ್‌ಶಿಪ್ : ಬೈರಮಂಗಲಕ್ಕೆ ಬನ್ನಿ, ಬಹಿರಂಗ ಚರ್ಚೆಗೆ ಸಿದ್ಧ- ಸಿಎಂಗೆ ಎಚ್‌ಡಿಕೆ ಸವಾಲು
ಬಿಡದಿ ಟೌನ್ ಶಿಪ್ ಕುರಿತು ಮುಖ್ಯಮಂತ್ರಿ 2007ರಲ್ಲಿ ವಿಧಾನಸಭೆಯಲ್ಲಿ ಹೇಳಿದ್ದ ಮಾತುಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬಿಡದಿ ಟೌನ್ ಶಿಪ್ ಯೋಜನೆ ಕುರಿತು ರಾಜ್ಯದ ಮುಖ್ಯಮಂತ್ರಿ 2007ರಲ್ಲಿ ವಿಧಾನಸಭೆ ಕಲಾಪದಲ್ಲಿ ಹೇಳಿದ್ದ ಮಾತುಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಕಳೆದ 500 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವವರು ಅಸಲಿ ರೈತರಲ್ಲ ಎನ್ನುತ್ತಿರುವ ಮುಖ್ಯಮಂತ್ರಿಗೆ ನೇರ ಸವಾಲು ಹಾಕಿದ ಕೇಂದ್ರ ಸಚಿವರು, ಬನ್ನಿ ಬೈರಮಂಗಲದ ಪ್ರತಿಭಟನಾ ಸ್ಥಳಕ್ಕೆ. ಅಲ್ಲಿ ಕೂತಿರುವವರು ಅಸಲಿ ರೈತರೋ ಅಥವಾ ನಕಲಿ ರೈತರೋ ಎಂಬುದು ನಿಮಗೆ ಗೊತ್ತಾಗುತ್ತದೆ. ನಾನು ಸಿದ್ಧನಿದ್ದೇನೆ, ಭೈರಮಂಗಲಕ್ಕೆ ಬರುವುದಕ್ಕೆ ನೀವು ಸಿದ್ಧರಿದ್ದೀರಾ? ಎಂದು ಸವಾಲು ಹಾಕಿದರು.
ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಯಲ್ ಎಸ್ಟೇಟ್ ದುರಾಸೆಯಿಂದ ಮುಗ್ಧ ರೈತರಿಂದ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ದಂಧೆಕೋರರಿಗೆ ನೀಡಲು ಬ್ರೋಕರ್ ಕೆಲಸ ಮಾಡುತ್ತಿರುವ ಈ ಸರ್ಕಾರದ ನೇತೃತ್ವ ವಹಿಸಿರುವ ನಾಯಕರು ಇದೇ ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ವಿಧಾನ ಕಲಾಪದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರಲ್ಲಿ ಮುಖ್ಯಮಂತ್ರಿ ಪ್ರಮುಖರಾಗಿದ್ದಾರೆ. ಈಗ ಟೌನ್ ಶಿಪ್ ಯೋಜನೆಯನ್ನು ಕಾರ್ಯಗತ ಮಾಡಿಯೇ ತೀರುತ್ತೇನೆ ಎಂದು ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಬಿಡದಿ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಅಂದು ದೊಡ್ಡ ಗಂಟಲಿನಲ್ಲಿ ವಿರೋಧಿಸಿದವರು ಇಂದು ಯೋಜನೆಯ ಪರವಾಗಿ ಮಾತಾಡುತ್ತಿದ್ದಾರೆ. ಇದು ವಿರೋಧಾಭಾಸ. ಪ್ರಮುಖವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರು ಹಾಲಿ ಮುಖ್ಯಮಂತ್ರಿ ನಡೆಸುತ್ತಿರುವ ಅಕ್ರಮಗಳನ್ನು ನೋಡಿಕೊಂಡು ಜಾಣಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು ಬಿಡದಿ ಸೇರಿದಂತೆ ಐದು ಟೌನ್ ಶಿಪ್ ಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು ನಾನೇ. 2009ರ ಸೆ.9 ರಂದು ಟೌನ್ ಶಿಪ್ ಯೋಜನೆ ಬಗ್ಗೆ ತೀರ್ಮಾನ ಮಾಡಲಾಯಿತು. 2006ರ ಅ.18ರಂದು ಯೋಜನೆಗೆ ಸರ್ಕಾರದ ವತಿಯಿಂದ ಅಧಿಸೂಚನೆ ಹೊರಡಿಸಲಾಯಿತು. ಹೆಚ್.ಡಿ. ಕುಮಾರಸ್ವಾಮಿ ಆರ್ಕಿಟೆಕ್ಟ್ ಆಫ್ ಬಿಡದಿ ಟೌನ್ ಶಿಪ್ ಅಂತಾರೆ. ನಾನು ಇಲ್ಲಾ ಎನ್ನುವುದಿಲ್ಲ. ಆದರೆ, ರೈತರ ಭೂಮಿಯನ್ನು ಕಿತ್ತುಕೊಂಡು ರಿಯಲ್ ಎಸ್ಟೇಟ್‌ನವರಿಗೆ ಕೊಡಲು ನಾನು ಈ ಯೋಜನೆಯನ್ನು ರೂಪಿಸಿರಲಿಲ್ಲ. ಹೀಗಾಗಿ ರೈತರು ಬೇಡ ಎಂದ ಕೊಡಲಿ ಮುಲಾಜಿಲ್ಲದೆ ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟೆ. ಈಗಲೂ ಶೇಕಡ 80ರಿಂದ 90ರಷ್ಟು ರೈತರು ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅವರಿಗೆ ಅದನ್ನು ಕೈ ಬಿಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮೌನದ ಬಗ್ಗೆ ಬೇಸರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌನದ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಅತಿವ ಬೇಸರ ವ್ಯಕ್ತಪಡಿಸಿದರು. ಸತ್ಯಶೋಧನಾ ಸಮಿತಿ ರಚನೆಯಲ್ಲಿ ಮತ್ತು ನಿಯಮ 69ರ ಅಡಿಯಲ್ಲಿ ಸುಧೀರ್ಘವಾಗಿ ಮಾತನಾಡಿದ್ದ ಅವರು ತಮ್ಮ ಪಕ್ಷದ ಸರ್ಕಾರ ನಡೆಸುತ್ತಿರುವ ರೈತ ವಿರೋಧಿ ಭೂ ಮಾರಣಹೋಮವನ್ನು ತಡೆಯಲು ವಿಫಲರಾಗಿರುವುದು ಸರಿಯಲ್ಲ. ಬೆಂಗಳೂರು ಪಕ್ಕದ ಬಿಡದಿಯಲ್ಲಿ ಟೌನ್ ಶಿಪ್ ಗಳನ್ನು ಏಕೆ ಮಾಡಬೇಕು? ದೂರದ ಹಾಸನ, ಮಂಡ್ಯದಲ್ಲಿ ಮಾಡಿಕೊಳ್ಳಲಿ. ಇಲ್ಲಿ ಅತ್ಯಂತ ಫಲವತ್ತಾದ ಕೃಷಿ ಭೂಮಿ ಇದ್ದು ಅಪಾರ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ಟೌನ್ಶಿಪ್ ಮಾಡುವುದನ್ನು ನಾವು ಶತಾಯಗತಾಯ ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದನ್ನು ನಾನು ಇಂದಿಗೂ ಮರೆತಿಲ್ಲ. ಬೆಂಗಳೂರು ಪಕ್ಕದಲ್ಲಿ ಇಂತಹ ಯೋಜನೆಗಳು ಬೇಡ, ಒಂದು ವೇಳೆ ಇಂಥ ಯೋಜನೆಗಳು ಜಾರಿಗೆ ಬಂದರೆ ರಿಯಲ್ ಎಸ್ಟೇಟ್ ಕುಳಗಳಿಗೆ ದಂಧೆ ನಡೆಸಲು ಸರ್ಕಾರವೇ ನೇರವಾಗಿ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ನಾನು ಮುಖ್ಯಮಂತ್ರಿ ಆಗಿ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ರೈತರ ವಿರುದ್ಧವಾಗಿ ಒಂದು ನಾಗರಿಕ ಸರ್ಕಾರ ಹೋಗಬಾರದು ಎನ್ನುವ ಒಳ್ಳೆಯ ಉದ್ದೇಶದಿಂದ ಆ ದಿನವೇ ಆ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟೆ ಎಂದರು.
ಡಿನೋಟಿಫಿಕೇಷನ್ ಮಾಡಿದರೆ ಸಿಎಂ ಜೈಲಿಗೆ ಹೋಗಲ್ಲ
ನೋಟಿಫಿಕೇಶನ್ ಆಗಿರುವ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿ ನಾನು ಜೈಲಿಗೆ ಹೋಗಲೇ? ಎಂದು ಹಾಲಿ ಮುಖ್ಯಮಂತ್ರಿ ಕೇಳುತ್ತಿದ್ದಾರೆ. ನೋಟಿಫಿಕೇಷನ್ ಮಾಡಿದವರೆಲ್ಲ ಜೈಲಿಗೆ ಹೋಗಿದ್ದಾರ ಈ ರಾಜ್ಯದಲ್ಲಿ? ಅರ್ಕಾವತಿಯಲ್ಲಿ ರೀಡೂ ಮಾಡಿಕೊಂಡವರೆ ನೆಮ್ಮದಿಯಾಗಿ ಓಡಾಡಿಕೊಂಡಿದ್ದಾರೆ. ಹಂತದಲ್ಲಿ ರೈತರ ಉದ್ಧಾರಕ್ಕಾಗಿ ಇಡೀ ಯೋಜನೆಯನ್ನೇ ಕೈಬಿಟ್ಟರೆ ಮುಖ್ಯಮಂತ್ರಿ ಏತಕ್ಕೆ ಜೈಲಿಗೆ ಹೋಗುತ್ತಾರೆ? ಇವರು ಕೇವಲ ಸಬೂಬು ಹೇಳಿಕೊಂಡು ರೈತರಿಗೆ ವಂಚಿಸುತ್ತಿದ್ದಾರೆ. ಇವರಿಗೆ ಟೌನ್ ಶಿಪ್ ಮಾಡಿ ಭೂಮಿ ಕೊಳ್ಳೆ ಹೊಡೆಯುವುದೇ ಮುಖ್ಯವಾಗಿದೆ. ರೈತರನ್ನು ಉಳಿಸಿಕೊಳ್ಳಲು ಡಿನೋಟಿಫಿಕೇಷನ್ ಮಾಡಿದರೆ ಯಾರು ಕೂಡ ಜೈಲಿಗೆ ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ನಾನು ಕೂಡ ಈ ಬಗ್ಗೆ ಸುದೀರ್ಘವಾಗಿ ಉತ್ತರ ನೀಡಿದ್ದೆ. 2007ರಲ್ಲಿ ಟೌನ್ ಶಿಪ್ ಯೋಜನೆಗೆ ಬಗ್ಗೆ ಮಾತನಾಡಿ ಫಲವತ್ತಾದ ಒಂದು ಇಂಚು ಭೂಮಿಯನ್ನು ನಾನು ವಶಕ್ಕೆ ಪಡೆಯುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದೆ. ನನ್ನ ಅಂತಿಮ ಹೇಳಿಕೆ ಕಲಾಪದ ಕಡತದಲ್ಲಿ ದಾಖಲಾಗಿದೆ. ನನ್ನ ಮೇಲೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪೊಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ. ಹೀಗಾಗಿ ನಾನು ಸದನದ ಕಲಾಪದ ದಾಖಲೆಗಳನ್ನು ಇಟ್ಟುಕೊಂಡೆ ಮಾತನಾಡುತ್ತಿದ್ದೇನೆ. ದಾಖಲೆಗಳನ್ನು ಮತ್ತು ಅಂದಿನ ನನ್ನ ಹೇಳಿಕೆಯ ಎಲ್ಲಾ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೇನೆ. ಜನತೆಗೆ ಸತ್ಯ ಹೇಳುವುದು ಮತ್ತು ಜನತೆಯ ಪರವಾಗಿ ನಿಲ್ಲುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂಬುದಾಗಿ ಸ್ಪಷ್ಟಪಡಿಸಿದರು.
2006 ಮತ್ತು 2007ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಇತ್ತು. ಅಗಸ್ಟ್ ತಿಂಗಳ ಮೊದಲ ವಾರ ವಿಧಾನಸಭೆಯಲ್ಲಿ ನಡೆದ ಎಲ್ಲಾ ಚರ್ಚೆಗಳಿಗೆ ನನ್ನ ಮಿತಕೂಡಪಕ್ಷದ ನಾಯಕರು ಕೂಡ ಸಾಕ್ಷಿಯಾಗಿದ್ದರು. ರಾಜ್ಯದ ಜನತೆ ಅತಿ ಮುಖ್ಯವಾಗಿ ಬಿಡದಿಯ ಜನರು ನನ್ನ ಹೇಳಿಕೆಗಳನ್ನು ಮತ್ತು ಸ್ಪಷ್ಟನೆಗಳನ್ನು ಗಮನಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಹಬ್ಬಿಸುವ ಸುಳ್ಳುಗಳು ಹೆಚ್ಚು ಕಾಲ ಬದುಕುವುದಿಲ್ಲ. ಬಿಡದಿ ರೈತರ ಪರವಾಗಿ ಅಂದು ಕಲಾಪದಲ್ಲಿ ಗಂಟಲು ಬರೆದುಕೊಂಡು ಮಾತನಾಡಿದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಕಾಳಜಿ ಮತ್ತು ನೀರಾವೇಶದ ಭಾಷಣ ಏನಾಯಿತು? ಶೇ.80 ರಿಂದ 90ರಷ್ಟು ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆರಳೆಣಿಕೆಯ ಜನರಷ್ಟೇ ಪರವಾಗಿದ್ದಾರೆ. ಈ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನದಿಂದ ಇಲ್ಲಿಯವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಅಕ್ಷೇಪ ಎತ್ತಿ ತಕರಾರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಕಿಡಿಕಾರಿದರು.
ಎಸಿ ರೂಂನಲ್ಲಿ ಕೂರುವವನಲ್ಲ
ನಿಮ್ಮ ದುಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಎಸಿ ರೂಂನಲ್ಲಿ ಕೂತು ಚರ್ಚೆ ಮಾಡುವ ಜಾಯಮಾನ ನನ್ನದಲ್ಲ. ಬೀದಿಯಲ್ಲಿ ನಿಂತು ಚರ್ಚೆಗೆ ತಯಾರಿದ್ದೇನೆ. ಈಗಲೇ ಹೊರಬಂದು ಬಹಿರಂಗ ಚರ್ಚೆ ನಡೆಸಲು ಸಿದ್ಧನಿದ್ದೇನೆ. ನಿಮಗೆ ಧೈರ್ವಿದ್ದರೆ ಬೈರಮಂಗಲಕ್ಕೆ ಬನ್ನಿ. ಅಲ್ಲೇ ಯೋಜನೆ ಬೇಕೋ ಬೇಡವೋ ಎಂಬುದು ಜನರ ಮುಂದೆ ತೀರ್ಮಾನ ಆಗಿಬಿಡಲಿ. ಅದು ಏನೇನೋ ಚಾಲೆಂಜ್ ಮಾಡುತ್ತಿದ್ದರಲ್ಲ ನನ್ನ ಮೇಲೆ, ಈಗ ಬನ್ನಿ ನಾನು ತಯಾರಿದ್ದೇನೆ. ನನ್ನ ರೈತರಿಗಾಗಿ ಬಿಡು ಮಾಡಿಕೊಂಡು ಬರುತ್ತೇನೆ ಎಂದು ನೇರ ಸವಾಲು ಹಾಕಿದರು.
ನಾಗರಬಾವಿಯಲ್ಲಿ ಬಾಡಿಗೆ ಮನೆಯಲ್ಲಿ ದಂಧೆ..!
ವಿಧಾನಸೌಧ ಅಥವಾ ಸರ್ಕಾರಿ ಕಚೇರಿಯಲ್ಲಿ ಕೆಲಸಗಳು ನಡೆದರೆ ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ, ಇಲ್ಲವೇ ಕುಮಾರಸ್ವಾಮಿಗೆ ಮಾಹಿತಿ ಹೋಗುತ್ತದೆ ಎಂಬ ಉದ್ದೇಶದಿಂದ ನಾಗರಬಾವಿಯಲ್ಲಿ ಬಾಡಿಗೆ ಮನೆಯಿಂದ ಇವರು ಟೌನ್ಶಿಪ್ ದಂಧೆ ಮಾಡುತ್ತಿದ್ದಾರೆ. ಕೆಲವು ಪುಡಾರಿಗಳು, ಟೌನ್ಶಿಪ್ ಕಿಂಗ್ ಪಿನ್ ಚೇಲಾಗಳು ಸೇರಿಕೊಂಡು ಆ ಮನೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಟೌನ್‌ಶಿಪ್‌ಗೆ ಸಂಬಂಧಿಸಿದ ಯಾವುದೇ ಕೆಲಸಗಳು ರಾಮನಗರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ನಡೆಯುತ್ತಿಲ್ಲ. ಎಲ್ಲವೂ ತೆರೆಮರೆಯಲ್ಲಿ ರಹಸ್ಯವಾಗಿ ಮಾಡುತ್ತಿದ್ದಾರೆ. ಇದು ಏನನ್ನು ಸೂಚಿಸುತ್ತದೆ. ಕುಮಾರಸ್ವಾಮಿ ಏನಪ್ಪಾ ಹರಿದಾ ಎನ್ನುವ ವ್ಯಕ್ತಿ ಈಗ ಹರಿತಿರುವುದು ಏನು? ಎಂದು ಪ್ರಶ್ನಿಸಿದರು.

