ಎಚ್.ಡಿ. ಕುಮಾರಸ್ವಾಮಿ ಮನವೊಲಿಕೆ; ಉಪವಾಸ ಸತ್ಯಾಗ್ರಹ ಕೈಬಿಟ್ಟ ಬಿಡದಿ ಮಹಿಳೆಯರು
x

ಎಚ್.ಡಿ. ಕುಮಾರಸ್ವಾಮಿ ಮನವೊಲಿಕೆ; ಉಪವಾಸ ಸತ್ಯಾಗ್ರಹ ಕೈಬಿಟ್ಟ ಬಿಡದಿ ಮಹಿಳೆಯರು

ಪೊಲೀಸರು ನಡೆಸಿದ ಅಮಾನವೀಯ ವರ್ತನೆಯನ್ನು ಖಂಡಿಸಿದ ಎಚ್.ಡಿ. ಕುಮಾರಸ್ವಾಮಿ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


Click the Play button to hear this message in audio format

ಕಳೆದ ಹಲವು ದಿನಗಳಿಂದ ಬಿಡದಿ ಉಪನಗರ ಯೋಜನೆಯ ವಿರುದ್ಧ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಬೈರಮಂಗಲದ ರೈತರು ಮತ್ತು ರೈತ ಮಹಿಳೆಯರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಹಿಳೆಯರ ಮೇಲೆ ಪೊಲೀಸರು ನಡೆಸಿದ ಅಮಾನವೀಯ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಸರ್ಕಾರಕ್ಕೆ ಕಠಿಣ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಬೈರಮಂಗಲ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ರೈತರು, ತಮ್ಮ ಕೃಷಿ ಭೂಮಿಯನ್ನು ಬಿಡದಿ ಉಪನಗರ ಯೋಜನೆಗೆ ಬಿಟ್ಟುಕೊಡಲು ನಿರಾಕರಿಸಿ ಕಳೆದ 568 ದಿನಗಳಿಂದ ಬೈರಮಂಗಲ ವೃತ್ತದಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕಳೆದ ಐದು ದಿನಗಳಿಂದ ಈ ರೈತರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಪೆಂಡಾಲ್ ಹಾಕಿಕೊಂಡು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ದಿಢೀರನೆ ದಾಳಿ ನಡೆಸಿದ ಪೊಲೀಸರು, ಮಹಿಳೆಯರನ್ನು ಬಲವಂತವಾಗಿ ಎಳೆದಾಡಿ, ವಾಹನಗಳಲ್ಲಿ ತುಂಬಿಕೊಂಡು ವಿವಿಧೆಡೆ ಕರೆದೊಯ್ದು ಕೂಡಿ ಹಾಕಿದ್ದರು. ಈ ಸಂದರ್ಭದಲ್ಲಿ ಅನೇಕ ಮಹಿಳೆಯರು ಗಾಯಗೊಂಡಿದ್ದು, ಒಬ್ಬರು ಪ್ರಜ್ಞಾಹೀನರಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಸಚಿವರ ಭೇಟಿ, ಸಾಂತ್ವನ

ವಿಷಯ ತಿಳಿದ ಕೂಡಲೇ ರೈತರೊಂದಿಗೆ ಸಂವಹನ ನಡೆಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ನೇರವಾಗಿ ಚನ್ನಪಟ್ಟಣದ ಪೊಲೀಸ್ ಭವನಕ್ಕೆ ಆಗಮಿಸಿ, ಅಲ್ಲಿ ಧರಣಿ ಮುಂದುವರಿಸಿದ್ದ ರೈತರನ್ನು ಭೇಟಿ ಮಾಡಿದರು. ಕಣ್ಣೀರು ಹಾಕುತ್ತಿದ್ದ ರೈತ ಮಹಿಳೆಯರ ಅಳಲನ್ನು ಆಲಿಸಿದ ಸಚಿವರು, ಅವರಿಗೆ ಧೈರ್ಯ ತುಂಬಿದರು. "ನಿಮ್ಮ ಭೂಮಿಯನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನಕ್ಕೆ ಸರ್ಕಾರ ಅವಕಾಶ ನೀಡಬಾರದು, ಒಂದು ವೇಳೆ ಅಂತಹ ಪ್ರಯತ್ನ ನಡೆದರೆ ನಾನು ನಿಮ್ಮೊಂದಿಗೆ ಅಚಲವಾಗಿ ನಿಲ್ಲುತ್ತೇನೆ" ಎಂದು ಭರವಸೆ ನೀಡಿದರು. ನಂತರ, ರೈತರ ಹಿತದೃಷ್ಟಿಯಿಂದ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟು, ಶಾಂತಿಯುತವಾಗಿ ಧರಣಿ ಮುಂದುವರಿಸುವಂತೆ ಮನವಿ ಮಾಡಿದರು.

ಪೊಲೀಸ್ ಅಧಿಕಾರಿಗಳ ತರಾಟೆ

ಸ್ಥಳಕ್ಕೆ ಕರೆಸಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಐಜಿಪಿ ಸಮ್ಮುಖದಲ್ಲಿ ಸಚಿವರು ತೀವ್ರ ಸಿಟ್ಟಿಗೆದ್ದರು. "ರೈತ ಮಹಿಳೆಯರು ಕಾನೂನು ಕೈಗೆತ್ತಿಕೊಂಡಿರಲಿಲ್ಲ. ತಮ್ಮ ಜೀವನಾಧಾರವಾದ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಇಂತಹ ಅಮಾಯಕರ ಮೇಲೆ ದೌರ್ಜನ್ಯ ನಡೆಸುವ ಮೂಲಕ ನೀವು ಯಾರ ಹಿತ ಕಾಪಾಡುತ್ತಿದ್ದೀರಿ? ಭೂಗಳ್ಳರ ಪ್ರಭಾವಕ್ಕೆ ಒಳಗಾಗಿ, ಪ್ರಭುತ್ವದ ದರ್ಪ ತೋರುತ್ತಿದ್ದೀರಾ?" ಎಂದು ಪ್ರಶ್ನಿಸಿದರು. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ, ಅವರ ಬಟ್ಟೆ ಹರಿಯುವ ಮಟ್ಟಿಗೆ ವರ್ತಿಸಿದ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ ಸಚಿವರು, ಎರಡು ದಿನಗಳ ಗಡುವು ನೀಡಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬಂದ್ ಮಾಡಿ 50 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ರಾಜ್ಯ ಗೃಹ ಸಚಿವರ ನಿಷ್ಕ್ರಿಯತೆಯ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, " ಗೃಹ ಸಚಿವರಿಗೆ ನಾಚಿಕೆಯಾಗಬೇಕು. ಕಳ್ಳಕಾಕರನ್ನು ಬಿಟ್ಟು, ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಡುವ ಮಹಿಳೆಯರ ಮೇಲೆ ದರ್ಪ ತೋರುತ್ತಿದ್ದೀರಿ. ಕಾಂಗ್ರೆಸ್‌ನ ಪುಡಾರಿಗಳು ಮತ್ತು ಸರ್ಕಾರದ ಏಜೆಂಟ್‌ಗಳು ರೈತರಿಗೆ ಅಶ್ಲೀಲವಾಗಿ ಬೈಯುತ್ತಿದ್ದರೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ. ಇದು ರಾಜಕೀಯವಲ್ಲ, ಬದುಕಿಗಾಗಿ ನಡೆಸುತ್ತಿರುವ ಹೋರಾಟ" ಎಂದು ವಾಗ್ದಾಳಿ ನಡೆಸಿದರು. ವಿಠಲೇನಹಳ್ಳಿ ಗೋಲಿಬಾರ್ ಪ್ರಕರಣವನ್ನು ಉಲ್ಲೇಖಿಸಿದ ಅವರು, ಇತಿಹಾಸವನ್ನು ಮರೆಯಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಮಿತಿಯ ಗೊಂದಲ - ಪರಿಹಾರದ ಮಾರ್ಗ

ಬಿಡದಿ ಯೋಜನೆಗಾಗಿ ಸರ್ಕಾರ ರಚಿಸಿದ್ದ ಸಮಿತಿಯ ಬಗ್ಗೆ ಪ್ರಶ್ನಿಸಿದ ಸಚಿವರು, "ಆ ಸಮಿತಿಯ ಮುಖ್ಯಸ್ಥರು ಈಗಲ್ಟನ್ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಎಕರೆಗೆ 12 ಕೋಟಿ ರೂಪಾಯಿ ನಿಗದಿ ಮಾಡಿದ್ದರು. ಹತ್ತು ವರ್ಷಗಳ ನಂತರ ಇಂದು ಅದರ ಬೆಲೆ ಎಕರೆಗೆ 30 ರಿಂದ 35 ಕೋಟಿ ಆಗಿರಬಹುದು. ಸರ್ಕಾರ ಅಷ್ಟು ಹಣವನ್ನು ರೈತರಿಗೆ ನೀಡಲು ಸಿದ್ಧವಿದ್ದರೆ, ಭೂಮಿಯನ್ನು ಬಿಟ್ಟುಕೊಡುವಂತೆ ನಾನೇ ರೈತರನ್ನು ಮನವೊಲಿಸುತ್ತೇನೆ" ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಸಚಿವರ ಮಧ್ಯಪ್ರವೇಶದ ನಂತರ ರೈತರು ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆದಿದ್ದರೂ, ಬೈರಮಂಗಲದಲ್ಲಿ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. "ನಾನು ದೆಹಲಿಗಿಂತ ರೈತರ ಹಿತ ಮುಖ್ಯ ಎಂದು ಭಾವಿಸುವವನು. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ನಾನು ಹೆದ್ದಾರಿಯಲ್ಲಿ ರೈತರೊಂದಿಗೆ ಕುಳಿತು ಹೋರಾಟ ಮಾಡುತ್ತೇನೆ" ಎಂದು ಸಚಿವರು ಹೇಳಿದರು.

Read More
Next Story