
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಬಿಎಲ್ಒಗಳು ಕಾಂಗ್ರೆಸ್ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ
ರಾಜ್ಯ ಸರ್ಕಾರ ಅಧಿಕಾರಿಗಳನ್ನು ಬೆದರಿಸಿ, ಒತ್ತಡ ಹೇರಿ ತನ್ನ ಅನುಕೂಲಕ್ಕೆ ತಕ್ಕಂತೆ ಎಸ್‌ಐಆರ್ ಪ್ರಕ್ರಿಯೆ ನಡೆಸಿಸುತ್ತಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದರು.
ರಾಜ್ಯ ಸರ್ಕಾರವು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ವಿಶೇಷವಾಗಿ ರಾಮನಗರ ಹಾಗೂ ಬೆಂಗಳೂರಿನಲ್ಲಿ, ಎಸ್‌ಐಆರ್ ಪ್ರಕ್ರಿಯೆ ಕೇಂದ್ರ ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಆಡಳಿತ ಯಂತ್ರವನ್ನು ಸರ್ಕಾರ ಸಂಪೂರ್ಣವಾಗಿ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
'ಯಶವಂತಪುರದಲ್ಲಿ ಶಾಸಕರ ಸೂಚನೆಯಂತೆ ಎಸ್‌ಐಆರ್'
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರ ಸೂಚನೆಯ ಮೇರೆಗೆ ಎಸ್‌ಐಆರ್ ಪ್ರಕ್ರಿಯೆ ಅಕ್ರಮವಾಗಿ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಸಿಬ್ಬಂದಿ ಪರಸ್ಪರ ಶಾಮೀಲಾಗಿ ಮತದಾರರ ಪಟ್ಟಿಯನ್ನು ತಿರುಚುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಮಾಧ್ಯಮಗಳ ಮುಂದೆ ಈ ಸಂಬಂಧದ ವಿಡಿಯೋಗಳನ್ನು ಪ್ರದರ್ಶಿಸಿದ ಅವರು, ಕ್ಷೇತ್ರದ ಶಾಸಕರ ಫೋಟೋಗಳನ್ನು ಮುಂದಿಟ್ಟುಕೊಂಡು ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. "ಇದು ಯಾವ ರೀತಿಯ ಎಸ್‌ಐಆರ್?" ಎಂದು ಪ್ರಶ್ನಿಸಿದರು.
'ಅಧಿಕಾರಿಗಳನ್ನು ಗುಲಾಮರಂತೆ ಬಳಸಿಕೊಳ್ಳಲಾಗುತ್ತಿದೆ'
ರಾಜ್ಯ ಸರ್ಕಾರ ಅಧಿಕಾರಿಗಳನ್ನು ಬೆದರಿಸಿ, ಒತ್ತಡ ಹೇರಿ ತನ್ನ ಅನುಕೂಲಕ್ಕೆ ತಕ್ಕಂತೆ ಎಸ್‌ಐಆರ್ ಪ್ರಕ್ರಿಯೆ ನಡೆಸಿಸುತ್ತಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಸಿಬ್ಬಂದಿ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಬದಲು ಸರ್ಕಾರದ ಒತ್ತಡಕ್ಕೆ ಮಣಿದು ಮನಬಂದಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಅವರು ಹೇಳಿದರು.
'ಹೊಸದಾಗಿ ಎಸ್‌ಐಆರ್ ನಡೆಸಬೇಕು'
ಈವರೆಗೆ ನಡೆದಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಸಂಪೂರ್ಣವಾಗಿ ರದ್ದುಗೊಳಿಸಿ, ಹೊಸದಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಜೊತೆಗೆ, ರಾಮನಗರ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇಂದ್ರ ಚುನಾವಣಾ ಆಯೋಗ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
'ರಾಮನಗರದ ಬಳಿಕ ಯಶವಂತಪುರದ ವಿಡಿಯೋ ಬಿಡುಗಡೆ'
ನಿನ್ನೆ ರಾಮನಗರದ ಛತ್ರ ಪ್ರದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆ ಜಾತ್ರೆಯ ರೀತಿಯಲ್ಲಿ ನಡೆಯುತ್ತಿರುವ ದೃಶ್ಯಗಳನ್ನು ಬಿಡುಗಡೆ ಮಾಡಿದ್ದೆ. ಇಂದು ಯಶವಂತಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳ ವಿಡಿಯೋಗಳನ್ನು ಬಹಿರಂಗಪಡಿಸುತ್ತಿದ್ದೇನೆ ಎಂದು ಅವರು ಹೇಳಿದರು.
'ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ'
ಯಶವಂತಪುರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಿಯಮಬಾಹಿರವಾಗಿ ನಡೆಸುತ್ತಿದ್ದ ಅಧಿಕಾರಿಯನ್ನು ಜೆಡಿಎಸ್ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಆ ಅಧಿಕಾರಿ ಕಾರ್ಯಕರ್ತರ ಬಳಿ ಕ್ಷಮೆ ಕೇಳಿದ್ದಾರೆ. ಬಳಿಕ ಮತ್ತೊಬ್ಬ ಅಧಿಕಾರಿ ಬಂದು ವಿಡಿಯೋ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಎಂದು ಆರೋಪಿಸಿದರು. ಶಾಸಕರ ಪುಸ್ತಕಗಳು ಹಾಗೂ ಅವರು ನೀಡಿದ ಮತದಾರರ ಪಟ್ಟಿಯನ್ನು ಆಧರಿಸಿ ಅಧಿಕಾರಿಗಳು ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಸರ್ಕಾರವೇ ಎಲ್ಲ ಅಧಿಕಾರಿಗಳಿಗೆ ಇದೇ ರೀತಿಯಲ್ಲಿ ಕೆಲಸ ಮಾಡಲು ಸೂಚನೆ ನೀಡಿದೆ ಎಂದು ದೂರಿದರು.
"ಶಾಸಕರ ರಾಜಕೀಯ ನಡೆಗೂ ಟೀಕೆ"
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ನೆಪದಲ್ಲಿ ರಾತ್ರಿ ಹೊತ್ತಲ್ಲೇ ಚೆನ್ನೈಗೆ ತೆರಳಿ ಬಳಿಕ ಬಿಜೆಪಿ ಸೇರಿದ್ದ ಶಾಸಕರು, ಮೂರು ವರ್ಷ ಸಚಿವರಾಗಿದ್ದ ನಂತರ ಈಗ ಕಾಂಗ್ರೆಸ್‌ಗೆ ಮರಳಿದ್ದಾರೆ ಎಂದು ಪರೋಕ್ಷವಾಗಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಉಲ್ಲೇಖಿಸಿ ಕುಮಾರಸ್ವಾಮಿ ಟೀಕಿಸಿದರು. "ಇದು ಯಾವ ರೀತಿಯ ಅಭಿವೃದ್ಧಿಯ ರಾಜಕೀಯ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಅವರು ಚೆನ್ನಾಗಿ ಮಾತನಾಡುತ್ತಾರೆ," ಎಂದು ವ್ಯಂಗ್ಯವಾಡಿದರು.
ಮತದಾರರ ಹುಂಡಿಯನ್ನೇ ಕಳ್ಳತನ
ಮುಖ್ಯಮಂತ್ರಿಗಳು ಪಾಕಿಸ್ತಾನ, ಹುಂಡಿ ಕಳ್ಳತನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಮತದಾರರ ಪಟ್ಟಿಯಲ್ಲೇ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮೌನ ವಹಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು. "ಇವರು ಮತದಾರರ ಹುಂಡಿಯನ್ನೇ ಕಳ್ಳತನ ಮಾಡಲು ಹೊರಟಿದ್ದಾರೆ. ಇದನ್ನು ಏನೆಂದು ಕರೆಯಬೇಕು?" ಎಂದು ಪ್ರಶ್ನಿಸಿದರು.
ಸಂವಿಧಾನದ ಬಗ್ಗೆ ಭಾಷಣ, ಆದರೆ ಅಕ್ರಮ
ಒಂದೆಡೆ ಸಂವಿಧಾನದ ಪುಸ್ತಕ ಹಿಡಿದು ಭಾಷಣ ಮಾಡುತ್ತಾರೆ. ಮತ್ತೊಂದೆಡೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸುತ್ತಾರೆ. ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಕುಣಿಗಲ್, ಪಾವಗಡ, ಅರಕಲಗೂಡು, ಇಂಡಿ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇದೇ ರೀತಿಯ ಅಕ್ರಮಗಳು ನಡೆಯುತ್ತಿವೆ. ಈ ಸಂಬಂಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಿದೆ ಎಂದರು.
'ವಿಧಾನಸೌಧಕ್ಕೆ ನಮಸ್ಕಾರ ನಾಟಕವಾಗಿತ್ತು'
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ಪ್ರವೇಶಿಸುವ ವೇಳೆ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದರು. ಅದೇ ರೀತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ವಿಧಾನಸೌಧದ ಮೆಟ್ಟಿಲುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದನ್ನು ನೋಡಿ ಬದಲಾವಣೆ ಆಗಿರಬಹುದು ಎಂದು ಭಾವಿಸಿದ್ದೆ. ಅದು ಕೇವಲ ನಾಟಕ ಎನ್ನುವುದು ಈಗ ಗೊತ್ತಾಗಿದೆ. ರಾಜ್ಯದಲ್ಲಿ ಎಸ್‌ಐಆರ್ ಅಕ್ರಮಗಳ ಹಿಂದಿನ ಮೂಲ ಸೂತ್ರಧಾರಿ ಮುಖ್ಯಮಂತ್ರಿಯೇ ಎಂಬುದು ಸ್ಪಷ್ಟವಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
'ಪ್ರಜಾಸೇವೆ ಎಂದರೆ ಮತದಾರರ ಪಟ್ಟಿಯನ್ನು ತಿರುಚುವುದೇ?'
ಸರ್ಕಾರ ಪ್ರಜಾಸೇವಾ ಇಲಾಖೆ ಎಂದು ಹೇಳಿಕೊಳ್ಳುತ್ತದೆ. ಆದರೆ ಪ್ರಜಾಸೇವೆ ಎಂದರೆ ಮತದಾರರ ಪಟ್ಟಿಯನ್ನು ತಿರುಚುವುದೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈಗಾಗಲೇ ಅಕ್ರಮ ಎಸಗಿರುವ ಅಧಿಕಾರಿಗಳಿಂದಲೇ ಮುಂದುವರಿದು ಪರಿಷ್ಕರಣೆ ನಡೆಸಿದರೆ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಲಿದೆ ಎಂದು ಹೇಳಿದರು.
ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಘೋಷಣೆ
ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸುವುದಾಗಿ ಕುಮಾರಸ್ವಾಮಿ ಹೇಳಿದರು. ತಾವು ಖುದ್ದಾಗಿ ಕೇಂದ್ರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ರಾಜ್ಯದಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಬಗ್ಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.
ಹೊರಗಿನ ಅಧಿಕಾರಿಗಳಿಂದ ಎಸ್‌ಐಆರ್ ನಡೆಸಲಿ
ರಾಜ್ಯದ ಸ್ಥಳೀಯ ಅಧಿಕಾರಿಗಳನ್ನು ಎಸ್‌ಐಆರ್ ಪ್ರಕ್ರಿಯೆಯಿಂದ ದೂರವಿಟ್ಟು, ಹೊರ ರಾಜ್ಯಗಳಿಂದ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ತನ್ನ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದರು.

