
ಮುಖ್ಯಮಂತ್ರಿಯೇ ನೈಸ್ ಭೂಮಿ ಲೂಟಿಯ ಮಹಾನಾಯಕ; HDK ಗಂಭೀರ ಆರೋಪ
ವಿಧಾನಸೌಧದ 3ನೇ ಮಹಡಿಯಲ್ಲಿ ಕೂತು ಮುಖ್ಯಮಂತ್ರಿ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ನೈಸ್ ಕಂಪನಿಯನ್ನು ಯಾರು ಟೇಕ್ ಓವರ್ ಮಾಡುತ್ತಿದ್ದಾರೆ ಎಂಬುದನ್ನು ತಾಕತ್ತಿದ್ದರೆ ರಾಜ್ಯದ ಜನತೆಯ ಮುಂದೆ ಹೇಳಲಿ ಎಂದು ಕುಮಾರಸ್ವಾಮಿ ಸವಾಲಾಕಿದ್ದಾರೆ.
ರಾಜ್ಯದ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನೈಸ್ ಕಂಪನಿಯನ್ನು ಖರೀದಿ (ಟೇಕ್ ಓವರ್) ಮಾಡಲು ಹೊರಟಿದ್ದಾರೆ ಎಂಬ ಸ್ಫೋಟಕ ಸಂಗತಿಯನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿಕೆಶಿ, ನೈಸ್ ಅಕ್ರಮಗಳಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಈ ಮುಖ್ಯಮಂತ್ರಿಯೇ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಭೂ ಲೂಟಿಯ ಮಹಾನಾಯಕ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನಗಿರುವ ಮಾಹಿತಿ ಪ್ರಕಾರ, ಬೇನಾಮಿ ಕಂಪನಿಗಳ ಮೂಲಕ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ ಮಾಡಲು ಹೊರಟಿದ್ದಾರೆ. ರೈತರಿಗೊಂದು ಕಾನೂನು, ಮುಖ್ಯಮಂತ್ರಿಗೆ ಇನ್ನೊಂದು ಕಾನೂನು ಇದೆಯಾ ಈ ರಾಜ್ಯದಲ್ಲಿ?, ಬಿಎಂಐಸಿ ಯೋಜನೆ ಹೆಸರಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಹೊಡೆಲು ಸಂಚು ರೂಪಿಸಿದ್ದಾರೆ. ನಾನಿಲ್ಲಿ ಕೂತು ಸಂತೆ ಭಾಷಣ ಮಾಡುತ್ತಿಲ್ಲ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ವ್ಯವಹಾರಕ್ಕೆ ಇಳಿದ ಸಿಎಂ; ಆರೋಪ
ವಿಧಾನಸೌಧದ 3ನೇ ಮಹಡಿಯಲ್ಲಿ ಕೂತು ಮುಖ್ಯಮಂತ್ರಿ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ನೈಸ್ ಕಂಪನಿಯನ್ನು ಯಾರು ಟೇಕ್ ಓವರ್ ಮಾಡುತ್ತಿದ್ದಾರೆ ಎಂಬುದನ್ನು ತಾಕತ್ತಿದ್ದರೆ ರಾಜ್ಯದ ಜನತೆಯ ಮುಂದೆ ಹೇಳಲಿ. ಯೋಜನೆಯನ್ನು ಯಾರು ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ?, ಬೇನಾಮಿ ಕಂಪನಿಗಳ ಮೂಲಕ ಯಾರು ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ನನಗಿದೆ. ಧೈರ್ಯವಿದ್ದರೆ ಮುಖ್ಯಮಂತ್ರಿ ಎದೆ ಮುಟ್ಟಿಕೊಂಡು ಮಾತನಾಡಲಿ. ರಾಜ್ಯದ ಜನತೆಯ ಮುಂದೆ ಸತ್ಯವನ್ನು ಬಾಯಿ ಬಿಡಲಿ ಎಂದು ನೇರ ಸವಾಲು ಹಾಕಿದ್ದಾರೆ.
ಯುವ ಸಮೂಹಕ್ಕೆ ಎಚ್‌ಡಿಕೆ ಕರೆ
ನೈಸ್ ಯೋಜನೆ ಇಡೀ ದೇಶದಲ್ಲೇ ಅತೀ ದೊಡ್ಡ ಭೂ ಹಗರಣ. ಇದು ಸ್ಕ್ಯಾಮ್ ಫಾರ್ ಸ್ಕಿಮ್ ಎನ್ನುವ ರೀತಿಯಲ್ಲಿದೆ. ಈ ಅಕ್ರಮದ ವಿರುದ್ಧ ಇಡೀ ರಾಜ್ಯವೇ ತಿರುಗಿ ಬೀಳಬೇಕಿದೆ. ಯುವಕರು, ವಿದ್ಯಾರ್ಥಿಗಳು ಇದನ್ನು ಪ್ರಶ್ನೆ ಮಾಡಬೇಕಿದೆ ಎಂದು ಸಚಿವ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಈ ಮುಖ್ಯಮಂತ್ರಿಗೂ ನೈಸ್ ಯೋಜನೆಗೂ ಇರುವ ಸಂಬಂಧವೇನು?, ನೈಸ್ ಜೊತೆ ಸಿಎಂ ಒಡಂಬಡಿಕೆ ಏನು?, ಈ ಕಂಪನಿಯ ಮಾಲೀಕರ ಜೊತೆ ಡಿಕೆಶಿಗೆ ಇರುವ ಸಂಬಂಧಗಳು ಮತ್ತು ವ್ಯವಹಾರಗಳು ಏನು? ಎಂಬುದನ್ನು ಧೈರ್ಯವಿದ್ದರೆ ಜನರ ಮುಂದೆ ಹೇಳಲಿ. ನಾನಂತೂ ಸತ್ಯ ಹೇಳುವುದಕ್ಕೆ ಅಂಜುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ನೈಸ್ ರಸ್ತೆ ಅಕ್ರಮದ ಬಗ್ಗೆ ರಾಜ್ಯ ಸರ್ಕಾರ ಮೌನಕ್ಕೆ ಶರಣಾಗಿದೆ. ಯೋಜನಾ ಚೌಕಟ್ಟು ಒಪ್ಪಂದ ಸಂಪೂರ್ಣ ಉಲ್ಲಂಘನೆ ಆಗಿದೆ. ಈ ಸರ್ಕಾರ ನೈಸ್ ಕಂಪನಿ ಜತೆ ನೇರವಾಗಿ ಶಾಮೀಲಾಗಿದೆ ಎಂದು ದೂರಿದ್ದಾರೆ.
ಅಕ್ರಮವಾಗಿ ಟೋಲ್ ಸಂಗ್ರಹ
ರೈತರ ಭೂಸ್ವಾಧೀನವಾಗಿ 20 ವರ್ಷಗಳೇ ಆಗಿದೆ. ರೈತರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಆದರೆ, ರೈತರಿಂದ ಕಿತ್ತುಕೊಂಡ ಭೂಮಿಯನ್ನು ಮನಸೋಇಚ್ಛೆ ಮಾರಾಟ ಮಾಡಿಕೊಂಡಿದೆ. ಒಪ್ಪಂದದಂತೆ 111 ಕಿ.ಮೀ. ರಸ್ತೆಯನ್ನು ನೈಸ್ ನಿರ್ಮಾಣ ಮಾಡಬೇಕಿತ್ತು. ಆದರೆ ಕೇವಲ 5 ಕಿಲೋಮೀಟರ್ ರಸ್ತೆಯನ್ನಷ್ಟೇ ನಿರ್ಮಿಸಿದೆ. ಹೀಗೆ ಯೋಜನಾ ಚೌಕಟ್ಟು ಒಪ್ಪಂದದ ಎಲ್ಲ ಅಂಶಗಳನ್ನು ಉಲ್ಲಂಘನೆ ಮಾಡಿದ ಮೇಲೆಯೂ ಅನೇಕ ವರ್ಷಗಳಿಂದ ನೈಸ್ ಕಂಪನಿ ತನ್ನ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಅಕ್ರಮವಾಗಿ ಹಣ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ಧಾರೆ.
ಇಷ್ಟೆಲ್ಲಾ ಅಕ್ರಮ ಎಸಗಿರುವ ಕಾರಣದಿಂದಲೇ ಹೈಕೋರ್ಟ್, ನೈಸ್ ಯೋಜನೆಯ ಬಗ್ಗೆ ಕಠಿಣವಾದ ಶಬ್ದಗಳ ಮೂಲಕ ತನ್ನ ಅಭಿಪ್ರಾಯ ದಾಖಲಿಸಿದೆ. ನ್ಯಾಯಾಲಯದ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ಸರ್ಕಾರ ನೈಸ್ ವಿರುದ್ಧ ಕ್ರಮ ಜರುಗಿಸಬೇಕಿತ್ತು. ದುರಂತವೆಂದರೆ ರಾಜ್ಯದ ಮುಖ್ಯಮಂತ್ರಿಯೇ ನೇರವಾಗಿ ನೈಸ್ ಕಂಪನಿ ಜೊತೆ ಶಾಮೀಲಾಗಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಟೋಲ್ ಸಂಗ್ರಹಕ್ಕೆ ಸರ್ಕಾರವೇ ಒತ್ತಾಸೆಯಾಗಿ ನಿಂತಿದೆ. ಅಲ್ಲಿ ಸುಲಿಗೆ ಮಾಡುವ ಹಣವನ್ನು ಇವರೆಲ್ಲರೂ ಹಂಚಿಕೊಳ್ಳುತ್ತಿದ್ದಾರೆ. ಬಡ ಸವಾರರ ರಕ್ತವನ್ನು ಹೀರುವ ಕೆಲಸ ನಡೆಯುತ್ತಿದೆ. ರಾಜ್ಯದ ಯುವಜನರು ಈ ಅಕ್ರಮವನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಟೋಲ್ ಸಂಗ್ರಹ ಮಾಡುತ್ತಿರುವುದೇ ಮಹಾನ್ ಅಕ್ರಮ ಎಂದ ಸಚಿವ ಕುಮಾರಸ್ವಾಮಿ ಅವರು; ಇದರ ಬಗ್ಗೆ ತನಿಖೆ ಮಾಡಿದರೆ ಬಹುದೊಡ್ಡ ಅಕ್ರಮ ಬಯಲಿಗೆ ಬರುತ್ತದೆ. ಸಂಘಟಿತವಾಗಿ ಸರ್ಕಾರವನ್ನು ಶಾಮೀಲು ಮಾಡಿಸಿಕೊಂಡು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಅಕ್ರಮ ನಡೆಸಲಾಗುತ್ತಿದೆ. ಯುವ ಸಮುದಾಯ ನೈಸ್ ಅಕ್ರಮಗಳ ಬಗ್ಗೆ ಮನೆ ಮನೆಗೂ ಮಾಹಿತಿ ಕೊಡಬೇಕು. ಬೀದಿ ಬೀದಿಗಳಲ್ಲಿ ಹೋರಾಟ ನಡೆಸಬೇಕು. ಯಾರೂ ಟೋಲ್ ಕಟ್ಟಬಾರದು ಎಂದು ಕರೆ ನೀಡಿದ್ದಾರೆ.
ಉದ್ಯಾನ ನುಂಗಲು ಸಂಚು
ರಿಯಲ್ ಎಸ್ಟೇಟ್ ದಂಧೆಕೋರರಿಗೆ ಜೇಬು ತುಂಬಿಸಲು ಕಂಡಕಂಡ ಭೂಮಿಯನ್ನು ನೋಟಿಫಿಕೇಷನ್ ಮಾಡುತ್ತಿರುವ ಈ ರಾಜ್ಯ ಸರ್ಕಾರ ಈಗ ಅಭಿವೃದ್ಧಿ ನೆಪ ಹೇಳಿ ಬೆಂಗಳೂರಿನ ಉದ್ಯಾನವನಗಳನ್ನು ನುಂಗಲು ಸಂಚು ರೂಪಿಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನ ಉದ್ಯಾನವನಗಳು, ಆಟದ ಮೈದಾನಗಳನ್ನು ಸ್ವಾಹ ಮಾಡಲು ಸರ್ಕಾರ ಹೊರಟಿದೆ. ಪಾರ್ಕ್ ನ ಶೇ 5 ರಷ್ಟು ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಎಂಬ ನೆಪ ಹೇಳಿ ಕೊಳ್ಳೆ ಹೊಡೆಯಲು ಸಂಚು ಹೂಡಿದೆ. ಈ ಮೂಲಕ ಬೆಂಗಳೂರಿನ ಶ್ವಾಸತಾಣ ನಾಶ ಮಾಡಲು ಹೊರಟಿದೆ. ಜತೆಗೆ ಮನೆಯ ಮುಂದೆ ಕಾರು ನಿಲ್ಲಿಸಿದರೂ ವರ್ಷಕ್ಕೆ 25 ಸಾವಿರ ಶುಲ್ಕ ಕಟ್ಟಬೇಕಂತೆ. ದಿವಾಳಿ ಆಗಿರುವ ಈ ಸರ್ಕಾರ ಜನರ ಜೇಬಿಗೆ ಕೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇನಾಮಿ ಆಸ್ತಿ ತೋರಿಸಿದರೆ ರಾಜಕೀಯ ನಿವೃತ್ತಿ
ಕುಮಾರಸ್ವಾಮಿ ಬೇನಾಮಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಯಾರೋ ಮಾತನಾಡಿರುವುದನ್ನು ಗಮನಿಸಿದ್ದೇನೆ. ನನ್ನ ಬೇನಾಮಿ ಆಸ್ತಿ ಯಾವುದಾದರೂ ಇದ್ದರೆ ತೋರಿಸಲಿ. ಅಂತಹ ಯಾವುದಾದರೂ ಆಸ್ತಿ ಇದ್ದರೆ ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದ್ದಾರೆ.

