ಸಿದ್ದಗಂಗಾ ಮಠದ ಆಸ್ತಿ ಲೂಟಿ: ಅಶೋಕ್ ಖೇಣಿಯನ್ನು ಬಂಧಿಸಲು ಕುಮಾರಸ್ವಾಮಿ ಆಗ್ರಹ
x

ಸಿದ್ದಗಂಗಾ ಮಠದ ಆಸ್ತಿ ಲೂಟಿ: ಅಶೋಕ್ ಖೇಣಿಯನ್ನು ಬಂಧಿಸಲು ಕುಮಾರಸ್ವಾಮಿ ಆಗ್ರಹ

ಶೋಭಾ ಅಪಾರ್ಟ್ಮೆಂಟ್ ಭೂಮಿಯನ್ನು ಸಿಎಂ ಡಿ.ಕೆ. ಶಿವಕುಮಾರ್ ಮತ್ತವರ ಕುಟುಂಬ ಹೆಸರಿಗೆ ಹೇಗೆ ಖರೀದಿಸಿದರು?" ಎಂದು ಎಚ್‌.ಡಿ.ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.


Click the Play button to hear this message in audio format

ನೈಸ್ ರಸ್ತೆ ಯೋಜನೆಯಲ್ಲಿ ನಡೆದಿರುವ ಅಕ್ರಮಗಳು ಮತ್ತು ಭೂ ಕಬಳಿಕೆಯ ಆರೋಪವು ರಾಜ್ಯ ರಾಜಕೀಯದಲ್ಲಿ ತೀವ್ರ ಕಾವು ಪಡೆದುಕೊಂಡಿದೆ. ನೈಸ್ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಸರಣಿ ಆರೋಪಗಳನ್ನು ಹೊರಿಸುವ ಮೂಲಕ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್ ಬಳಿಯಿರುವ 'ಶೋಭಾ ಅಪಾರ್ಟ್ಮೆಂಟ್' ನಿರ್ಮಾಣದ ಕುರಿತು ಪ್ರಶ್ನೆ ಎತ್ತಿದ ಕುಮಾರಸ್ವಾಮಿ, "ಈ ಭೂಮಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರ ಕುಟುಂಬ ಮತ್ತು ಸಹೋದರ ಡಿ.ಕೆ. ಸುರೇಶ್ ಅವರು ತಮ್ಮ ಹಾಗೂ ತಾಯಿಯ ಹೆಸರಿಗೆ ಹೇಗೆ ಖರೀದಿಸಿದರು?" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರಿ ಯೋಜನೆಗಾಗಿ ನೋಟಿಫೈ ಆಗಿದ್ದ ಭೂಮಿಯನ್ನು ಖರೀದಿಸಿದ್ದು ಹೇಗೆ? ಆಸ್ತಿಯ ಮೌಲ್ಯ 2 ಸಾವಿರ ಕೋಟಿ ರೂ. ಹೇಗೆ ತಲುಪಿತು? ಇದಕ್ಕೆ ಎನ್‌ಒಸಿ ನೀಡಿದವರು ಯಾರು? ಎಂದು ನೇರ ಪ್ರಶ್ನೆಗಳನ್ನು ಕೇಳಿದ್ದಾರೆ.

ಮುಖ್ಯಮಂತ್ರಿಯವರ ಭೂದಾಹ ಮಿತಿ ಮೀರಿದೆ. ಶಿಶುಪಾಲನಿಗೆ ಶ್ರೀಕೃಷ್ಣನು 101 ತಪ್ಪುಗಳನ್ನು ಮಾಡಲು ಹೇಗೆ ಅವಕಾಶ ಕೊಟ್ಟನೋ, ರಾಜ್ಯದ ಜನರೂ ಈ ಮುಖ್ಯಮಂತ್ರಿಯವರ ದೌರ್ಜನ್ಯಗಳನ್ನು ಗಮನಿಸುತ್ತಿದ್ದಾರೆ. ನೈಸ್ ಒಪ್ಪಂದ ಮುಗಿಯಲು ಇನ್ನು ಒಂದು ವರ್ಷ ಬಾಕಿ ಇರುವಾಗ, ಹೈದರಾಬಾದ್ ಉದ್ಯಮಿಯೊಬ್ಬರ ಜೊತೆ ಶಾಮೀಲಾಗಿ ಇಡೀ ಯೋಜನೆಯನ್ನು ಲೂಟಿ ಮಾಡಲು ಸಿಎಂ ಹೊರಟಿದ್ದಾರೆ. 200ರಿಂದ 300 ಎಕರೆ ಭೂಮಿಯನ್ನು ಬೆದರಿಸಿ ಕಿತ್ತುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದಗಂಗಾ ಮಠದ ವಿವಾದ

ನೈಸ್ ಗುತ್ತಿಗೆದಾರ ಅಶೋಕ್ ಖೇಣಿ ಸಿದ್ದಗಂಗಾ ಮಠದ ಆಸ್ತಿಯನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಮಠದ ಆಸ್ತಿಗೆ ಎನ್‌ಒಸಿ ನೀಡಲು ನಿರಾಕರಿಸುವ ಖೇಣಿ, ಡಿ.ಕೆ. ಶಿವಕುಮಾರ್ ಕುಟುಂಬಕ್ಕೆ ಹೇಗೆ ಎನ್‌ಒಸಿ ನೀಡಿದರು? ಎಂದು ಪ್ರಶ್ನಿಸಿದರು. "ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಬಗ್ಗೆ ಲಘುವಾಗಿ ಮಾತನಾಡಿರುವ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು. ಅಂತಹ ಧರ್ಮ ದ್ರೋಹಿಗೆ ಸಿಎಂ ರಕ್ಷಣೆ ನೀಡುತ್ತಿರುವುದು ನಾಚಿಕೆಗೇಡಿನ ವಿಷಯ" ಎಂದು ಕಿಡಿಕಾರಿದರು. ನೈಸ್ ವಿಷಯದಲ್ಲಿ ತಮ್ಮನ್ನು ಸುಮ್ಮನಿರುವಂತೆ ಮಾಡಲು ಆಮಿಷ ಒಡ್ಡಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ ಸಚಿವರು, "ನೈಸ್ ಉಸಾಬರಿ ನಿಮಗೇಕೆ ಬೇಕು, ಸುಮ್ಮನಿದ್ದರೆ ಏನು ಬೇಕೋ ಅದನ್ನು ತೆಗೆದುಕೊಳ್ಳಿ ಎಂದು ನನ್ನ ಬಳಿ ಬಂದಿದ್ದರು. ಅಂಥವರನ್ನು ನಾನು ಉಗಿದು ಹೊರಗಟ್ಟಿದ್ದೇನೆ. ನಾನು ಜನರ ಮನುಷ್ಯ, ನನ್ನನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ" ಎಂದು ಸವಾಲು ಹಾಕಿದರು. "ನೈಸ್ ರಸ್ತೆಯನ್ನು ರಾಜ್ಯದ ಆಸ್ತಿಯನ್ನಾಗಿ ಉಳಿಸಿಕೊಡುತ್ತೇನೆ. ಈ ಅನ್ಯಾಯದ ವಿರುದ್ಧ ರೈತರ ಜೊತೆಗೂಡಿ ಬೀದಿಗಿಳಿಯುತ್ತೇನೆ," ಎಂದು ಘೋಷಿಸಿದರು. ಸರ್ಕಾರವು ಈ ಯೋಜನೆಯನ್ನು ವಶಕ್ಕೆ ಪಡೆಯುವ ಬದಲು ಲೂಟಿ ಮಾಡಲು ಯತ್ನಿಸುತ್ತಿದೆ ಎಂದು ಪುನರುಚ್ಚರಿಸಿದರು.

ಕುಮಾರಸ್ವಾಮಿಯವರ ಈ ಆರೋಪಗಳು ಕೇವಲ ರಾಜಕೀಯ ಆಪಾದನೆಗಳಲ್ಲ, ಇವು ಆಡಳಿತದ ಪಾರದರ್ಶಕತೆಯನ್ನು ಪ್ರಶ್ನಿಸುವ ಗಂಭೀರ ಆಕ್ಷೇಪಗಳಾಗಿವೆ. ನೈಸ್ ಯೋಜನೆ ಕಳೆದ ಹಲವು ದಶಕಗಳಿಂದ ಕರ್ನಾಟಕದ ವಿವಾದಿತ ವಿಷಯಗಳಲ್ಲೊಂದು. ಈಗ ಈ ವಿಷಯವನ್ನು ಸಿಎಂ ಅವರ ಆಸ್ತಿ ಸಂಪಾದನೆಗೆ ಲಿಂಕ್ ಮಾಡಿರುವ ಕುಮಾರಸ್ವಾಮಿ ಅವರ ನಡೆಯು, ಕಾಂಗ್ರೆಸ್ ಸರ್ಕಾರವನ್ನು ರಕ್ಷಣಾತ್ಮಕ ಕ್ರಮಕ್ಕೆ ತಳ್ಳಿದೆ. ಮುಂಬರುವ ದಿನಗಳಲ್ಲಿ ಈ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿದರೂ ಅಚ್ಚರಿಯಿಲ್ಲ.

Read More
Next Story